Brand Bengaluru: ಆರೋಗ್ಯ ಯೋಜನೆ ಜಾರಿಗೆ ಬಂದ ಸಲಹೆಗಳ ವರದಿ ಸಲ್ಲಿಕೆ ಶೀಘ್ರ
ಬೆಂಗಳೂರು, ಸೆಪ್ಟಂಬರ್ 14: ವಿವಿಧ ವಲಯಗಳಲ್ಲಿ ಬೆಂಗಳೂರನ್ನು ಗಟ್ಟಿಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಯೋಜನ ರೂಪಿಸಿದೆ. ಆರೋಗ್ಯ ವಲಯದಲ್ಲಿ ಹೆಚ್ಚು ಕಾಳಜಿ ವಹಿಸಲಾಗಿದೆ. ನಗರದ ನಾಗರಿಕರಿಗೆ ಅತ್ಯತ್ತುಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯ ಯೋಜನೆಗಳನ್ನು ಜಾರಿಗೊಳಿಸಿ ಅದನ್ನು ಅನುಷ್ಠಾನಕ್ಕೆ ತರಬೇಕುದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಹಾಗೂ ಆರೋಗ್ಯಕರ ಬೆಂಗಳೂರಿನ ನೋಡಲ್ ಅಧಿಕಾರಿಯಾದ ಡಾ. ಕೆ.ವಿ ತ್ರಿಲೋಕ್ ಚಂದ್ರ ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ "ಆರೋಗ್ಯಕರ ಬೆಂಗಳೂರು" ವಿಷಯಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ PMSSY (ಪ್ರಧಾನ ಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್ ನ ಪಾಲುದಾರಿಕೆಯಲ್ಲಿ ಆರೋಗ್ಯಕರ ಬೆಂಗಳೂರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದಂತಹ ಸುಮಾರು 10,478 ಸಲಹೆಗಳನ್ನು ಅಧ್ಯಯನ ನಡೆಸಲಾಯಿತು.

ಬಂದ ಸಲಹೆಗಳ ಪೈಕಿ ಒಂದೇ ರೀತಿಯ ಸಲಹೆಗಳನ್ನು ತೆಗೆದು ನಂತರ ಒಟ್ಟಾರೆ 8059 ಸಲಹೆ/ಅಭಿಪ್ರಾಯಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿ ವರದಿ ಸಿದ್ದಪಡಿಸಲಾಗಿದೆ. ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಜತೆ ಸುರಕ್ಷಿತ ನಗರವಾಗಿಸಲು ಕ್ರಮ
ಬೆಂಗಳೂರಿನಲ್ಲಿರುವ ನಾಗರಿಕರಿಗೆ ಸುಲಭವಾಗಿ ಆರೋಗ್ಯ ಸೇವೆ ಪಡೆಯಲು ಮತ್ತು ಅತ್ಯಂತ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಹೊಂದುವ ಹಾಗೆ ಮಾಡಬೇಕು. ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರ ನಗರವನ್ನು ಸ್ಥಾಪಿಸುವ ಸಲುವಾಗಿ ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೆಕಿದೆ ಎಂದರು.
ಜನರ ಆರೋಗ್ಯದ ಜೊತೆಗೆ ಪ್ರಾಣಿಗಳ ಆರೋಗ್ಯವೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಎಲ್ಲ ರೀತಿಯ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಬೇಕು. ಸಾರ್ವಜನಿಕ ಆರೋಗ್ಯದ ವಿಚಾರವಾಗಿ ಕೋವಿಡ್ ನಂತಹ ತುರ್ತು ರೋಗಗಳನ್ನು ನಾವು ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ನಾಗರಿಕರಿಗೆ ಸುಲಭ ರೀತಿ ಆರೋಗ್ಯ ಸೇವೆ
ಪ್ರಾಥಮಿಕ ಆರೋಗ್ಯ ಘಟಕದಿಂದ ತೃತೀಯ ಸೇವೆ ನೀಡುತ್ತಿರುವ ಪ್ರಮುಖ ಆಸ್ಪತ್ರೆಗಳಿಗೆ ಇರುವ ಅಂತರವನ್ನು ಕಡಿಮೆ ಮಾಡಿ ನಾಗರಿಕರಿಗೆ ಸುಲಭ ರೀತಿಯಲ್ಲಿ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ನಗರದಲ್ಲಿ 232 ನಮ್ಮ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ನಾವು ಅದನ್ನು ಮತ್ತಷ್ಟು ಬಲಪಡಿಸಲು ಮತ್ತು ಕೆಲಸದ ಸಮಯವನ್ನು ಹೆಚ್ಚಿಸುವ ಉದ್ದೇಶದಿಂದ ಈಗಾಗಲೇ ಕೆಲ ಕ್ಲಿನಿಕ್ ಗಳಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಲಿನಿಕ್ ಗಳನ್ನು ಸಮಯವನ್ನು ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಆರೋಗ್ಯ ವಿಚಾರದಲ್ಲಿ ಕೈಗೊಂಡ ಧ್ಯೇಯಗಳು
* ಆರೋಗ್ಯ ಸೇವೆಯಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು.
* ಒಂದು ಆರೋಗ್ಯ ವಿಧಾನ ಜಾರಿಗೊಳಿಸುವುದು.
* ವಾರ್ ರೂಮ್ ಮತ್ತು ಕಣ್ಗಾವಲು ವ್ಯವಸ್ಥೆಗಳ ವ್ಯವಸ್ಥೆ.
* ಹವಾಮಾನಕ್ಕನುಗುಣವಾಗಿ ಆರೋಗ್ಯ ವ್ಯವಸ್ಥೆ
* ತುರ್ತು ಆರೋಗ್ಯ ಸೇವೆಗಳ ವ್ಯವಸ್ಥೆ.
* CSR ಪಾಲುದಾರರೊಂದಿಗೆ ಸಹಯೋಗ ಹೊಂದುವುದು.
* ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಾಲಯ ಸೇವೆಗಳನ್ನು ಹೆಚ್ಚಿಸುವುದು.
* ಬೆಂಗಳೂರಿಗೆ ಆಂಟಿಮೈಕ್ರೊಬಿಯಲ್ ನೀತಿ ಜಾರಿತರುವುದು.
* ಬೆಂಗಳೂರು ಆರೋಗ್ಯ ವ್ಯವಸ್ಥೆ ಜಾರಿಗೊಳಿಸುವುದು.
* ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಮನೆಯಲ್ಲಿಯೇ ಚಿಕಿತ್ಸೆಗೆ ಸಂಬಂಧಪಟ್ಟಂತಹ ಸಮಾಲೋಚನೆ ನಡೆಸುವ ವ್ಯವಸ್ಥೆಯನ್ನು ಜಾರಿಗೊಳಿಸುವುದು.
* ಬೆಂಗಳೂರಿನಲ್ಲಿ ಪಶುವೈದ್ಯಕೀಯ ಆರೈಕೆ ವ್ಯವಸ್ಥೆ.
ವಿಚಾರ ಸಂಕಿರಣದಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳಾದ ಡಾ. ಬಾಲಸುಂದರ್, ಡಾ. ನಿರ್ಮಲಾ ಬುಗ್ಗಿ, ಭಾರತೀಯ ವಿಜ್ಞಾನ ಸಂಸ್ಥೆಯ ಆರ್ಟ್ ಪಾರ್ಕ್ ನ ಆರೋಗ್ಯ ನಿರ್ದೇಶಕ ಡಾ. ಭಾಸ್ಕರ್ ರಾಜ್ ಕುಮಾರ್, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ತಜ್ಞರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications