ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ‘ಕೈ’ಗೆ ಕಗ್ಗಂಟು: ಬಿಜೆಪಿಗೆ ಇಕ್ಕಟ್ಟು!
ಬೊಮ್ಮನಹಳ್ಳಿ: ಬೆಂಗಳೂರಲ್ಲಿ ಗಮನ ಸೆಳೆಯುತ್ತಿರುವ ಕ್ಷೇತ್ರಗಳ ಪೈಕಿ ಬೊಮ್ಮನಹಳ್ಳಿ ಮುಂದಿದೆ. 2008ರಲ್ಲಿ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ನಂತರ 3 ಬಾರಿ ಗೆಲುವು ಕಂಡಿದ್ದು ಬಿಜೆಪಿ ಶಾಸಕ ಸತೀಶ್ ರೆಡ್ಡಿ. ಈ ಬಾರಿ ಹಾಲಿ ಶಾಸಕರಿಗೆ ನಿರ್ಮಾಪಕ ಉಮಾಪತಿ ಎದುರಾಳಿ ಆಗುವುದು ಬಹುತೇಕ ಪಕ್ಕಾ. ಈ ಬಗ್ಗೆ ಒನ್‌ಇಂಡಿಯಾಗೆ ನಿರ್ಮಾಪಕ ಉಮಾಪತಿ ಸ್ಪಷ್ಟನೆ ನೀಡಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದೆ. ಆದರೂ ಉಮಾಪತಿ ಶ್ರೀನಿವಾಸ್ ಗೌಡ ಟಿಕೆಟ್ ಪಡೆಯುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲೇ ಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿ ಹೆಸರು ಫೈನಲ್ ಆಗುವ ನಿರೀಕ್ಷೆ ಇತ್ತು. ಆದರೆ 2ನೇ ಪಟ್ಟಿ ಬಿಡುಗಡೆಯಾದರೂ ಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿ ಹೆಸರು ಫೈನಲ್ ಆಗಿಲ್ಲ. ಈ ಕುರಿತು ಬೊಮ್ಮನಹಳ್ಳಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಉಮಾಪತಿ ಮಾಹಿತಿ ನೀಡಿದ್ದಾರೆ.

'ಕೈ'ಗೆ ಕಗ್ಗಂಟು: ಬಿಜೆಪಿಗೆ ಇಕ್ಕಟ್ಟು!
ಕಾಂಗ್ರೆಸ್ ದೊಡ್ಡ ಪಕ್ಷವಾಗಿರುವ ಕಾರಣ ಸಾಕಷ್ಟು ಲೆಕ್ಕಾಚಾರ ಇರುತ್ತದೆ. ಹೀಗಾಗಿ ಟಿಕೆಟ್ ಹಂಚಿಕೆ ತಡವಾಗುತ್ತಿದ್ದು, ವರಿಷ್ಠರು ತೀರ್ಮಾನ ಮಾಡುತ್ತಾರೆ. ಆದರೆ ನನಗೇ ಬೊಮ್ಮನಹಳ್ಳಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಉಮಾಪತಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ. ಅಲ್ಲದೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸದೃಢವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದು, ಯಾವುದೇ ಕ್ಷೇತ್ರ ಕೂಡ ಒಂದು ಪಕ್ಷಕ್ಕೆ ಮೀಸಲಾಗಿ ಇರುವುದಿಲ್ಲ. ಈ ಬಾರಿ ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುತ್ತಾರೆ ನಿರ್ಮಾಪಕ ಉಮಾಪತಿ.
ಬೊಮ್ಮನಹಳ್ಳಿ ಬಿಜೆಪಿ ಭದ್ರಕೋಟೆ
ಬೊಮ್ಮನಹಳ್ಳಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. 2008ರಲ್ಲಿ ವಿಧಾನಸಭಾ ಕ್ಷೇತ್ರದ ಸ್ಥಾನಮಾನವನ್ನು ಪಡೆದ ನಂತರ ಬೊಮ್ಮನಹಳ್ಳಿ ಬಿಜೆಪಿ ಪಕ್ಷದ ಭದ್ರಕೋಟೆ ಎಂದೇ ಕರೆಯಲ್ಪಡುತ್ತಿದೆ. ಇದಕ್ಕೂ ಮೊದಲು ಕೂಡ ಈ ಭಾಗದಲ್ಲಿ ಬಿಜೆಪಿ ಬಲವಾದ ವೋಟ್ ಬ್ಯಾಂಕ್ ಹೊಂದಿತ್ತು. ಆದರೆ ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ನಿರೀಕ್ಷೆ ಸ್ಥಳೀಯ ನಾಯಕರದ್ದು.
ಸಮಸ್ಯೆಗಳೇ ಕಾಂಗ್ರೆಸ್ ಅಸ್ತ್ರ?
2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಜನರು ಸಮಸ್ಯೆಯಲ್ಲೇ ಬದುಕುತ್ತಿದ್ದಾರೆ. ಈ ಎಲ್ಲಾ ವಿಚಾರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ ಎಂದು ಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಉಮಾಪತಿ ಶ್ರೀನಿವಾಸ್ ಗೌಡ ಒನ್‌ಇಂಡಿಯಾಗೆ ತಿಳಿಸಿದ್ದಾರೆ. ಪ್ರಮುಖವಾಗಿ ಬೊಮ್ಮನಹಳ್ಳಿ ಮತ್ತು ಹೊಂಗಸಂದ್ರ ರಸ್ತೆಯೇ ಕಾಂಗ್ರೆಸ್ ಅಸ್ತ್ರವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ಗೆ ಒಳಜಗಳದ ಸಂಕಷ್ಟ
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದರೂ, ಒಳಜಗಳದ ಸಂಕಷ್ಟ ತಪ್ಪುತ್ತಿಲ್ಲ. ಅದರಲ್ಲೂ ಸ್ಥಳೀಯ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಕೇಂದ್ರದ ವರಿಷ್ಠರ ಎದುರಲ್ಲೇ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಗರಂ ಆಗಿದ್ದರು. ಮತ್ತೊಂದೆಡೆ ಇನ್ನೂ ಹಲವರು ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 2013ರಲ್ಲಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಸ್ಪರ್ಧಿಸಿ, ಸೋತಿದ್ದ ನಾಗಭೂಷಣ್ ರೆಡ್ಡಿ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಫೈನಲ್ ಆಗುವುದು ತಡವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.












Click it and Unblock the Notifications