BMTC: ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಹೊಸ ಬಸ್, ನಿಲ್ದಾಣ, ವೇಳಾಪಟ್ಟಿ
ಬೆಂಗಳೂರು, ಜನವರಿ 19: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉದ್ಯಾನ ನಗರಿಯ ಜನರಿಗೆ ಮತ್ತೊಂದು ಕೊಡುಗೆ ನೀಡಿದೆ. ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಕಡೆಗೆ ಸಂಚಾರ ನಡೆಸುವ ಜನರಿಗೆ ಹೊಸ ಬಸ್ ಸೇವೆಯನ್ನು ಘೋಷಣೆ ಮಾಡಿದೆ. ನೈಸ್ ರಸ್ತೆ ಮೂಲಕ ಸಂಚಾರ ನಡೆಸುವ ಈ ಬಸ್ ಮಾದಾವರ-ಕೋನಪ್ಪನ ಅಗ್ರಹಾರ ನಡುವೆ ಎಲ್ಲೂ ನಿಲುಗಡೆ ಹೊಂದಿಲ್ಲ.
ಜನವರಿ 20ರ ಸೋಮವಾರದಿಂದ ಈ ಬಸ್ ಸೇವೆ ಆರಂಭವಾಗಲಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ. ಈ ಮಾರ್ಗದ ಬಸ್ ಸೇವೆಗೆ NICE-10E ಎಂದು ಹೆಸರಿಡಲಾಗಿದೆ. ಮಾದಾವರ-ಬೊಮ್ಮಸಂದ್ರ ನಡುವೆ ಈ ಬಸ್ ಸಂಚಾರವನ್ನು ನಡೆಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬಿಎಂಟಿಸಿಯ ಮಾಹಿತಿ ಪ್ರಕಾರ ಮಾದಾವರ-ಬೊಮ್ಮಸಂದ್ರ ವಯಾ ನೈಸ್ ರೋಡ್ ಈ ಬಸ್ ಮಾದವರದಿಂದ ಕೋನಪ್ಪನ ಅಗ್ರಹಾರ ತನಕ ಎಲ್ಲೂ ನಿಲುಗಡೆ ಹೊಂದಿಲ್ಲ. ಮಾದಾವರದಿಂದ ಹೊರಡುವ ಬಸ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿಯಲ್ಲಿ ನಿಲುಗಡೆಗೊಂಡು ಬೊಮ್ಮಸಂದ್ರವನ್ನು ತಲುಪುತ್ತದೆ.
ಬಸ್ ವೇಳಾಪಟ್ಟಿ: ಮಾದಾವರ-ಬೊಮ್ಮಸಂದ್ರ ನಡುವಿನ NICE-10E ಮಾರ್ಗದ ಬಸ್ ಮಾದಾವರದಿಂದ ಹೊರಡುವ ಸಮಯ 08:00, 08:30, 09:00, 09:30, 11:30, 12:00, 12:30, 13:00, 14:50, 15:45, 16:20, 17:00 ಆಗಿದೆ.
ಬೊಮ್ಮಸಂದ್ರ ದಿಂದ ಹೊರಡುವ ಸಮಯ 07:05, 07:45, 09:25, 10:30, 11:00, 11:30, 13:00, 13:50, 14:20, 14:50, 17:15, 17:45 ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ತುಮಕೂರು ರಸ್ತೆಯಲ್ಲಿ ಮಾದಾವರವಿದೆ. ಕೆಲವು ದಿನಗಳ ಹಿಂದೆ ಇಲ್ಲಿನ ನಮ್ಮ ಮೆಟ್ರೋ ನಿಲ್ದಾಣವೂ ಕಾರ್ಯಾರಂಭ ಮಾಡಿದೆ. ಮಾದಾವರದಿಂದ ಬಿಎಂಟಿಸಿ ಬೊಮ್ಮಸಂದ್ರ ವಯಾ ನೈಸ್ ರೋಡ್ ಮೂಲಕ ಹೊಸ ಬಸ್ ಸೇವೆಯನ್ನು ಆರಂಭಿಸಲಿದೆ. ಬಸ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಮೂಲಕ ಬೊಮ್ಮಸಂದ್ರಕ್ಕೆ ಸಂಚಾರವನ್ನು ನಡೆಸಲಿದೆ.
ನೈಸ್ ರೋಡ್ ಮೂಲಕ ಬಿಎಂಟಿಸಿ ಹಲವು ಬಸ್‌ಗಳ ಸಂಚಾರವನ್ನು ನಡೆಸುತ್ತದೆ. ಬೇರೆ ಮಾರ್ಗದ ಬಸ್ ದರಗಳಿಗೆ ಹೋಲಿಕೆ ಮಾಡಿದರೆ ಇದರ ದರ ಹೆಚ್ಚಾಗಿರುತ್ತದೆ, ಕಾರಣ ನೈಸ್ ರೋಡ್ ಟೋಲ್. ಅಲ್ಲದೇ ಈ ಮಾರ್ಗಕ್ಕಾಗಿಯೇ ಬಿಎಂಟಿಸಿ ಬಸ್ ಪಾಸುಗಳನ್ನು ಸಹ ಪರಿಚಯಿಸಿದೆ. 2023ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಬಿಎಂಟಿಸಿ NICE-10 ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿತ್ತು.
ಈ ಮಾರ್ಗದ ಬಸ್ ವಯಾ ನೈಸ್ ರೋಡ್ ತುಮಕೂರು ರಸ್ತೆಯಲ್ಲಿರುವ ಮಾದಾವರವನ್ನು ಎಲೆಕ್ಟ್ರಾನಿಕ್ ಸಿಟಿ ನಡುವೆ ಸಂಪರ್ಕಿಸುತ್ತದೆ. 2024ರ ಡಿಸೆಂಬರ್‌ನಲ್ಲಿ ಈ ಮಾರ್ಗದ ಒಂದು ವರ್ಷದ ಸಂಚಾರದ ಸಂಭ್ರಮ ಆಚರಣೆ ಮಾಡಲಾಯಿತು. ಆಗ ಒಂದು ವರ್ಷದಲ್ಲಿ 25 ಲಕ್ಷ ಪ್ರಯಾಣಿಕರ ಸಂಚಾರ ನಡೆಸಿದ್ದು, 1,09,73,615 ಆದಾಯ ಸಂಗ್ರಹವಾಗಿದೆ ಎಂದು ಬಿಎಂಟಿಸಿ ಹೇಳಿತ್ತು.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳನ್ನು ಗುರಿಯಾಗಿಸಿಕೊಂಡು, ಸಂಚಾರ ದಟ್ಟಣೆಯಲ್ಲಿ ಅವರು ಸಿಲುಕಿಕೊಳ್ಳದೇ ಸುಲಭವಾಗಿ ಸಂಚಾರ ನಡೆಸಲು ಅನುಕೂಲವಾಗುವಂತೆ ಬಿಎಂಟಿಸಿ ವಯಾ ನೈಸ್ ರೋಡ್ ಎಲೆಕ್ಟ್ರಾನಿಕ್ ಸಿಟಿಗೆ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಿದ್ದು, ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ.












Click it and Unblock the Notifications