ಪ್ರಯಾಣಿಕರ ಸಂಖ್ಯೆ ಹೆಚ್ಚಳ, ನಮ್ಮ ಮೆಟ್ರೋಗೆ ಬೋಗಿ ಕೊರತೆ
ಬೆಂಗಳೂರು, ಮೇ 11: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ಒಂದೇ ದಿನ 7 ಲಕ್ಷ ಜನರು ಸಂಚಾರ ನಡೆಸಿ ಈಗಾಗಲೇ ದಾಖಲೆ ಬರೆದಿದ್ದಾರೆ. ಪೀಕ್ ಅವರ್‌ನಲ್ಲಿ ಮೆಟ್ರೋದಲ್ಲಿ ಕಾಲು ಹಾಕಲು ಜಾಗವಿಲ್ಲದಷ್ಟು ಜನದಟ್ಟಣೆ ಇರುತ್ತದೆ.
ಪ್ರತಿ ಮೆಟ್ರೋ ಬೋಗಿಯಲ್ಲಿ 1629 ಜನರು ಸಂಚಾರ ನಡೆಸಬಹುದು. ಆದರೆ ಪೀಕ್ ಅವರ್‌ನಲ್ಲಿ ಮೆಟ್ರೋ ಹತ್ತಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಬಿಎಂಆರ್‌ಸಿಎಲ್ ಎದುರಿಸುತ್ತರುವ ಬೋಗಿಗಳ ಕೊರತೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಯೋಜನೆಯ ವರದಿಯಂತೆ ಒಟ್ಟು 78 ರೈಲುಗಳು ಸಂಚಾರ ನಡೆಸಬೇಕಿತ್ತು. ಆದರೆ ಈಗ ಕೇವಲ 47 ರೈಲುಗಳು ಓಡುತ್ತಿವೆ. ಇದರಿಂದಾಗಿ ಜನರ ದಟ್ಟಣೆ ಹೆಚ್ಚಿದೆ. ಅದರಲ್ಲೂ ಪೀಕ್ ಅವರ್‌ನಲ್ಲಿ ದಟ್ಟಣೆ ತೀವ್ರವಾಗಿದೆ.
6 ಬೋಗಿಗಳ ರೈಲು: ಬಿಎಂಆರ್‌ಸಿಎಲ್ ಮೊದಲು 3 ಬೋಗಿಗಳ ರೈಲುಗಳನ್ನು ಓಡಿಸುತ್ತಿತ್ತು. ಜನರ ದಟ್ಟಣೆ ಅಧಿಕವಾದ ಬಳಿಕ 6 ಬೋಗಿಗಳ ರೈಲುಗಳನ್ನು ಓಡಿಸಲಾಗುತ್ತಿದೆ. ಆದರೂ ಸಹ ಬೋಗಿಗಳ ಕೊರತೆ ಎದುರಿಸುತ್ತಿದ್ದು, ಜನರ ದಟ್ಟಣೆಗೆ ಅನುಗುಣವಾಗಿ ರೈಲು ಓಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿ ಇದೆ.
ನೇರಳೆ ಮಾರ್ಗದಲ್ಲಿ ಚಲ್ಲಘಟ್ಟ, ವೈಟ್‌ಫೀಲ್ಡ್ ತನಕ ರೈಲು ಮಾರ್ಗ ವಿಸ್ತರಣೆಯಾಗಿದೆ. ಈ ಮಾರ್ಗದಲ್ಲಿ 43 ಬೋಗಿಗಳಿಗೆ ಬೇಡಿಕೆ ಇದೆ. ಆದರೆ ಪ್ರಸ್ತುತ 25 ರೈಲುಗಳು ಓಡುತ್ತಿವೆ. ಹಸಿರು ಮಾರ್ಗದಲ್ಲಿಯೂ ಸಿಲ್ಕ್ ಇನ್ಸಿಟಿಟ್ಯೂಟ್-ನಾಗಸಂದ್ರ ನಡುವೆ ರೈಲು ಸಂಚಾರ ನಡೆಸುತ್ತಿದೆ. ಈ ಮಾರ್ಗದಲ್ಲಿ 22 ರೈಲು ಓಡುತ್ತಿದೆ, 13 ಬೋಗಿಗಳ ಕೊರತೆ ಇದೆ.
ಬಿಎಂಆರ್‌ಸಿಎಲ್‌ನ 2023ರ ಡಿಪಿಆರ್ ಪ್ರಕಾರ 2021ರಲ್ಲಿ ಸಂಚಾರ ಆರಂಭಿಸಿದ 33 ಕಿ. ಮೀ. ಮೆಟ್ರೋ ಮಾರ್ಗಕ್ಕೆ 270 ಬೋಗಿಗಳು ಬೇಕು. ಆದರೆ 47 ಬೋಗಿಗಳ ಅವಶ್ಯಕತೆ ಇದೆ. ನೇರಳೆ ಮಾರ್ಗಕ್ಕೆ ಹೆಚ್ಚು ಬೋಗಿಗಳ ಅವಶ್ಯಕತೆ ಇದೆ ಎಂದು ವರದಿ ಅಂದಾಜಿಸಿದೆ.
1,626 ಜನರು ಸಂಚಾರ ನಡೆಸುವ ಬೋಗಿಯಲ್ಲಿ ಪೀಕ್ ಅವರ್‌ನಲ್ಲಿ 2,500 ಜನರು ಸಂಚಾರ ನಡೆಸುತ್ತಾರೆ. ಪೀಕ್ ಅವರ್‌ನಲ್ಲಿ ಪ್ರತಿ 5 ನಿಮಿಷಕ್ಕೆ, ನಾನ್ ಪೀಕ್ ಅವರ್‌ನಲ್ಲಿ 15 ನಿಮಿಷಕ್ಕೊಂದು ರೈಲು ಓಡುತ್ತಿದೆ. ಪೀಕ್ ಅವರ್‌ನಲ್ಲಿ ರೈಲುಗಳ ಸಂಚಾರದ ಅವಧಿ ಕಡಿಮೆ ಮಾಡಿದರೂ ಸಹ ಜನರ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಿಲ್ಲ.
ನಮ್ಮ ಮೆಟ್ರೋ ನಿಲ್ದಾಣ ಫ್ಲಾಟ್ ಫಾರ್ಮ್ ಅನ್ನು 6 ಕೋಚ್‌ಗಳಿಗೆ ಸೀಮಿತವಾಗಿ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಹೆಚ್ಚಿನ ಬೋಗಿ ಸೇರಿಸುವುದು ಸಾಧ್ಯವಿಲ್ಲ. ಚೀನಾದ ಕಂಪನಿ 12 ಬೋಗಿಗಳ 2 ರೈಲುಗಳನ್ನು ನಿರ್ಮಾಣ ಮಾಡಿದೆ. ಈಗಾಗಲೇ ಹಳದಿ ಮಾರ್ಗದಲ್ಲಿ ಈ ರೈಲುಗಳ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ.
ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ರೈಲು ಬೋಗಿ ಪೂರೈಸುವ ಟೆಂಡರ್ ಪಡೆದಿದೆ. ಆದರೆ 5 ವರ್ಷದಿಂದ ಬಂದಿರುವುದು 2 ಬೋಗಿ ಮಾತ್ರ. ಬಿಎಂಆರ್‌ಸಿಎಲ್‌ಗೆ 216 ಬೋಗಿಯನ್ನು ಇದು ನೀಡಬೇಕಿದೆ. ಕೋಲ್ಕತ್ತಾ ಬಳಿ ಈ ಕಂಪನಿ ಉತ್ಪಾದನಾ ಘಟಕ ಹೊಂದಿದೆ. ಟಿಟಿಗಾರ್ ವ್ಯಾಗನ್ಸ್ ಮೂಲಕ ಬಿಎಂಆರ್‌ಸಿಎಲ್‌ಗೆ 36 ರೈಲು ಸೆಟ್‌ಗಳನ್ನು ಪೂರೈಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ.
216 ಬೋಗಿಗಳ ಪೈಕಿ 126 ಕೋಚ್ ನೇರಳೆ ಮತ್ತು ಹಸಿರು ಮಾರ್ಗಕ್ಕೆ ಮೀಸಲಾಗಿದೆ. ಉಳಿದ 90 ಬೋಗಿ ಹಳದಿ ಮಾರ್ಗದಲ್ಲಿ ಸಂಚಾರ ನಡೆಸಲಿವೆ. ಚೀನಾ ಕಂಪನಿ ಟೆಂಡರ್ ಪಡೆದ ಬಳಿಕ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ವಿಳಂಬ ಮಾಡಿದ ಕಾರಣ ಬೋಗಿ ಬರಲಿಲ್ಲ. ಬಳಿಕ ಕೋಲ್ಕತ್ತಾ ಮೂಲದ ಟಿಟಿಗಾರ್ ವ್ಯಾಗನ್ಸ್ ಜೊತೆ ಒಪ್ಪಂದ ಮಾಡಿಕೊಂಡು ಬೋಗಿಗಳನ್ನು ಕಂಪನಿ ನಿರ್ಮಾಣ ಮಾಡುತ್ತಿದೆ.












Click it and Unblock the Notifications