ಸುಪ್ರೀಂ ಅಂಗಳಕ್ಕೆ ಬಿಬಿಎಂಪಿ ಚುನಾವಣೆ ವಿವಾದ
ಬೆಂಗಳೂರು, ಏ. 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವಿಚಾರ ನವದೆಹಲಿ ತಲುಪಲಿದೆ. ಹೌದು, ಮೇ 30ರೊಳಗೆ ಚುನಾವಣೆ ನಡೆಸುವ ತೀರ್ಪಿಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ಕರ್ನಾಟಕ ಬಿಜೆಪಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಿದೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಮಾಹಿತಿ ನೀಡಿದರು. ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು. [ಚುನಾವಣೆ : ಏಕಸದಸ್ಯ ಪೀಠದ ಆದೇಶ ರದ್ದು]

ಇಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶದಲ್ಲಿ ಚುನಾವಣೆ ನಡೆಸಿ ಎಂದು ಮಾತ್ರ ಇದೆ. ನಮಗೆ ಈ ಆದೇಶ ಸಮಾಧಾನ ತಂದಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸುತ್ತೇವೆ. ಕಾನೂನು ಪಂಡಿತರ ಜೊತೆ ಈ ಕುರಿತು ಚರ್ಚೆ ನಡೆಸಲಿದ್ದೇವೆ ಎಂದರು. [ಬಿಬಿಎಂಪಿ ವಿಭಜನೆ : ಪ್ರಮುಖ ಬೆಳವಣಿಗೆಗಳು]
ಸರ್ಕಾರಕ್ಕೆ ಚುನಾವಣೆ ಭಯ : 'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಎದುರಿಸಲು ಭಯವಿದೆ. ಆದ್ದರಿಂದ ಚುನಾವಣೆಯನ್ನು ಮುಂದೂಡಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ' ಎಂದು ಜೋಶಿ ಆರೋಪಿಸಿದರು.
ಮೇ 30ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ಇಂದು ಮುಖ್ಯನ್ಯಾಯಮೂರ್ತಿಗಳ ವಿಭಾಗೀಯ ಪೀಠ ಆದೇಶ ನೀಡಿತ್ತು. ಇದರಿಂದ ಸರ್ಕಾರಕ್ಕೆ ಸಮಾಧಾನವಾಗಿದೆ.












Click it and Unblock the Notifications