ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:
ಬೆಂಗಳೂರು, ಆಗಸ್ಟ್ 02: ಡಾ. ಕಸ್ತೂರಿರಂಗನ್ ವರದಿ ಅನುಷ್ಠಾನ ವಿಚಾರವಾಗಿ ಮಾತನಾಡುವ ಕಾಂಗ್ರೆಸ್ ನಾಯಕರ ಕುರಿತು ಮಾತನಾಡಿದ್ದಕ್ಕೆ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಕ್ಷಮೆ ಕೇಳಿದ್ದಾರೆ. ಆದರೂ ಸಹ ಅವರ ಹೇಳಿಕೆ ವಿರುದ್ಧದ ಪ್ರತಿಕ್ರಿಯೆ, ಆಕ್ರೋಶ ಮುಂದುವರಿದಿವೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರು ಮಾತನಾಡಿ, ಸಮಾಜದಲ್ಲಿ ಜಾತಿ ಪದ್ಧತಿ ಇರಬೇಕು ಎಂಬ ಮನಸ್ಥಿತಿ ಬಿಜೆಪಿ ನಾಯಕರದ್ದು. ಹೀಗಾಗಿ ಅವರು ಆಗಾಗ ತಮ್ಮ ಹಿಡನ್ ಅಜೆಂಡಾ ಬಗ್ಗೆ ಸಾರ್ವಜನಿಕವಾಗಿ ಹೇಳುತ್ತಾರೆ. ದಮನಿತ ವರ್ಗ ಶೋಷಿತವಾಗಿ ಉಳಿಯಬೇಕು ಎಂದು ಪರೋಕ್ಷವಾಗಿ ಬಿಜೆಪಿ ಪ್ರತಿಪಾದಿಸುತ್ತದೆ. ಈ ಕಾರಣದಿಂದಲೇ ಅವರು ಕಾಂಗ್ರೆಸ್‌ನ ಇಬ್ಬರು ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಈ ರೀತಿಯ ಮಾತುಗಳನ್ನು ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ ಆಗಾಗ ಹೇಳಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅರಗ ಜ್ಞಾನೇಂದ್ರ ಅವರು ಹೇಳಿದ್ದು, ಇದು ಸಂಘ ಪರಿವಾರ ಹಾಗೂ ಬಿಜೆಪಿ ಹೇಳಿಕೆ ಹೊರತು ಅರಗ ಜ್ಞಾನೇಂದ್ರ ಅವರದ್ದಲ್ಲ ಎಂದು ಅವರು ತಿರುಗೇಟು ನೀಡಿದರು.
ತೀರ್ಥಹಳ್ಳಿಯಿಂದ ಬಂದ 'ಅರೆ ಜ್ಞಾನವಂತರು': ರಮೇಶ್ ಬಾಬು
ಮಲೆನಾಡಿನ ತೀರ್ಥಹಳ್ಳಿಯಂತಹ ನಾಡಿನಿಂದ ಇಂತಹ 'ಅರೆ ಜ್ಞಾನವಂತ'ರು ಬಂದಿರುವುದು ದುರಂತ. ಸಜ್ಜನ ರಾಜಕಾರಣಕ್ಕೆ ಹೆಸರಾದ ಶಾಂತವೇರಿ ಗೋಪಾಲಗೌಡರು, ಡಿ.ಬಿ ಚಂದ್ರೇಗೌಡರು, ಕಿಮ್ಮನೆ ರತ್ನಾಕರ, ಕೊಣಂದೂರು ಲಿಂಗಪ್ಪನವರು ಈ ಕ್ಷೇತ್ರದ ಶಾಸಕರಾಗಿದ್ದರು. ಇಂತಹ ಪ್ರಬುದ್ಧ ರಾಜಕಾರಣಿಗಳನ್ನು ಕೊಟ್ಟ ತೀರ್ಥಹಳ್ಳಿ ಕ್ಷೇತ್ರದಿಂದ ಅರಗ ಜ್ಞಾನೇಂದ್ರರಂತಹ ಅರೆ ಜ್ಞಾನಿಗಳು ಶಾಸಕರಾಗಿರುವುದು ದುರ್ದೈವ ಎಂದು ಕುಟುಕಿದರು.

ಖರ್ಗೆ ವಿರುದ್ಧ ವೈಯಕ್ತಿಕ ಟೀಕೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ, ಅವರ ವಿರುದ್ಧ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದ್ದಾರೆ. ಕಳೆದ ಬಾರಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾಷಣ ಮಾಡುತ್ತಾ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರಿಗೆ ಪಾಠ ಕಲಿಸಿದ್ದೇವೆ. ಈಗ ಮರಿ ಖರ್ಗೆ ಅವರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದ್ದರು.
ಮಲ್ಲಿಕಾರ್ಜುನ್ ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಸರ್ಕಾರದ ತಪ್ಪುಗಳನ್ನು ಅನಾವರಣ ಮಾಡಿ ವಿರೋಧಿಸುತ್ತಾ ಬಂದಿದ್ದಾರೆ. ಇದರಿಂದ ವಿಚಲಿತರಾದ ಸಂಘ ಪರಿವಾರದ ನಾಯಕರು ಖರ್ಗೆ ಅವರ ಮೇಲೆ ಹಗೆತನದಿಂದ ವೈಯಕ್ತಿಕ ಟೀಕೆ ಮಾಡುತ್ತಲೆ ಬಂದಿದ್ದಾರೆ ಎಂದು ಹೇಳಿದರು.
ಅರಗ ಜ್ಞಾನೇಂದ್ರ ಅವರು ಕ್ಷಮೆಗೂ ಅರ್ಹರಲ್ಲದ ವ್ಯಕ್ತಿ. ನಾನು ಅವರ ಹೇಳಿಕೆ ಖಂಡಿಸುತ್ತೇನೆ. ಇಂತಹ ಅವಕಾಶವಾದಿ ನಾಯಕರಿಗೆ ಜನ ಉತ್ತರ ನೀಡುತ್ತಾರೆ ಎಂದು ಭಾವಿಸಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಜನ ಉತ್ತರ ನೀಡಿದ್ದು, ಲೋಕಸಭೆಯಲ್ಲೂ ಪ್ರಬುಧ್ಧ ಮತದಾರರು ಪಾಠ ಕಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.
ಅಪಕೀರ್ತಿಗೆ ಒಳಗಾದ ಬಿಜೆಪಿ
ವಿಧಾನಸಭಾ ಚುನಾವಣೆ ಮುಗಿದು ಎರಡೂವರೆ ತಿಂಗಳಾಗಿದೆ. ಆದರೂ ಬಿಜೆಪಿಗೆ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ಇದು ಬಿಜೆಪಿ ಯಾವ ಸ್ಥಿತಿಗೆ ಬಂದು ತಲುಪಿದೆ ಎಂಬುದಕ್ಕೆ ಸಾಕ್ಷಿ. ವಿರೋಧ ಪಕ್ಷ ನಾಯಕನಿಲ್ಲದೆ ಅಧಿವೇಶನ ಮಾಡಿದ ಅಪಕೀರ್ತಿಗೆ ಬಿಜೆಪಿ ಒಳಗಾಗಿದೆ ಎಂದರು.
ಇನ್ನೂ ವಿಧಾನಸಭಾ ಪರಾಜಿತ ಅಭ್ಯರ್ಥಿ ಸಿಟಿ ರವಿ ಅವರ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಇದ್ದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಅವರನ್ನು ತೆಗೆದು ಹಾಕಲಾಗಿದೆ. ಇವರು ಚಿಕ್ಕಮಗಳೂರು ಉಸ್ತುವಾರಿ ನಿಭಾಯಿಸಲು ಆಗುವುದಿಲ್ಲ ಎಂದು ಅರಿತಿದ್ದಾರೆ. ಅವರ ಸಾಧನೆ, ಕೊಡುಗೆ ಏನೂ ಇಲ್ಲ ಎಂದು ಆ ಪಕ್ಷದವರಿಗೆ ಅರ್ಥವಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದು ಅಂಗಲಾಚುವ ಪರಿಸ್ಥಿತಿ ಸಿಟಿ ರವಿ ಅವರಿಗೆ ಎದುರಾಗಿದೆ ಎಂದು ವ್ಯಂಗ್ಯವಾಡಿದರು.
ಒಂದೆಡೆ ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನಿಸಿದರೆ, ಮತ್ತೊಂದೆಡೆ ಸಿ.ಟಿ ರವಿ ಅವರು ಅಂಗಲಾಚುತ್ತಿದ್ದಾರೆ. ಮತ್ತೊಂದೆಡೆ ಶೋಭ ಕರಂದ್ಲಾಜೆ ಅವರು ಹೋರಾಟ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯತ್ನಾಳ್ ಅವರಿಂದ ಒಂದು ಡಜನ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿದ್ದವರು ಚುನಾವಣೆ ನಂತರ ಬಿಜೆಪಿ ನಾಯಕರು ಕಂಗೆಟ್ಟಿದ್ದಾರೆ. ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.












Click it and Unblock the Notifications