Tejasvi Surya V/s Sowmya Reddy: ಬ್ರಾಹ್ಮಣ ಸಾಮ್ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಸೋಲು? ಏನಿದು ಲೆಕ್ಕಾಚಾರ
ಬೆಂಗಳೂರು, ಏಪ್ರಿಲ್. 21: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರಬಲ ವಾಗ್ಮಿ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಕೂಡ ಹೌದು. ಮೊದಲ ಹಂತದ ಮತದಾನ ನಡೆಯಲಿದ್ದು, ಚುನಾವಣೆ ಹತ್ತಿರ ಆಗುತ್ತಿದ್ದಂತೆ ದಕ್ಷಿಣ ಕ್ಷೇತ್ರದಲ್ಲಿ ತೇಜ್ವಿ ಸೂರ್ಯ ಗೆಲುವು ಕಠಿಣವಾಗುತ್ತಿದೆ ಎಂಬ ಅಂಶಗಳು ಬೆಳಕಿಗೆ ಬರುತ್ತಿವೆ.
ಹೌದು... ಬ್ರಾಹ್ಮಣರ ಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರೆ ಹೆಚ್ಚು ಬಾರಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಈ ಬಾರಿ ಸಚಿವ ರಾಮಲಿಂಗ ರೆಡ್ಡಿ ಮಗಳು ಮತ್ತು ಮಾಜಿ ಶಾಸಕಿ ಸೌಮ್ಯ ರೆಡ್ಡಿ ಕಣಕ್ಕಿಳಿದಿದ್ದಾರೆ. ಯಾವುದೇ ಒಂದೆ ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ಪ್ರಚಾರ ಮಾಡುತ್ತಿದ್ದಾರೆ. ಇದು ತೇಜಸ್ವಿ ಸೂರ್ಯ ಅವರಿಗೆ ಆತಂಕ ತಂದಿದೆ. ಇದೆ ಕಾರಣಕ್ಕೆ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಬಿಟ್ಟು ಬೇರೆಡೆ ಹೆಚ್ಚು ಹೋಗುತ್ತಿಲ್ಲ.

ಒಮ್ಮೆ ಮಾತ್ರ ತಮಿಳುನಾಡಿನಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ (ಕೊಯಮತ್ತೂರು) ಮತ್ತು ವಿನೋಜ್ ಸೆಲ್ವಂ (ಚೆನ್ನೈ ಸೆಂಟ್ರಲ್) ಪರ ಪ್ರಚಾರ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಈ ಬಾರಿ ತೇಜಸ್ವಿ ಸೂರ್ಯ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಹವಾಲಾ ಹಣ ನೀರಿನಂತೆ ಹರಿಯುತ್ತಿದೆ ಎಂಬ ಊಹಾಪೋಹ ದಟ್ಟವಾಗಿದೆ.
ಚುನಾವಣಾ ಆಯೋಗದ ಅಧಿಕಾರಿಗಳು ಇತ್ತೀಚೆಗೆ ಕಾರಿನಲ್ಲಿ 1.4 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಜೆಪಿಯವರೇ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಸೌಮ್ಯಾ ರೆಡ್ಡಿ ಆರೋಪಿಸಿದ್ದಾರೆ. ಇನ್ನು, ತೇಜಸ್ವಿ ಸೂರ್ಯ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಆರೋಪ ನಿರಾಕರಿಸಿದ್ದಾರೆ. ಈ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಬಿಜೆಪಿ ಹಾಗೂ ಮೂರು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ.
ಬಿಜೆಪಿ ಸೇರಿದಂತೆ ಪಕ್ಷದ ಗಡಿಗಳನ್ನು ಮೀರಿ ನಾಯಕರೊಂದಿಗೆ ರಾಮಲಿಂಗ ರೆಡ್ಡಿ ಅವರ ಬಾಂಧವ್ಯ ಮತ್ತು ಸಾಮಾನ್ಯ ಜನರಿಂದ ಅವರು ಪಡೆಯುತ್ತಿರುವ ಗೌರವ ಕೂಡ ಅವರ ಮಗಳ ಗೆಲುವಿಗೆ ಕಾರಣವಾಗಬಹುದು. ಬಿಜೆಪಿ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ನ ಮತಗಳು ಕೂಡ ಅವರಿಗೆ ಹೋಗುವ ಸಂಭವವಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ರಾಮಲಿಂಗಾ ರೆಡ್ಡಿ ಅವರು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಕಾರ್ಪೊರೇಟರ್‌ಗಳು ಸೇರಿದಂತೆ ಎಲ್ಲಾ ನಾಯಕರನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದಾರೆ.

ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪವಾಗಿರುವ ಅಹಿಂದ ಮತಗಳನ್ನು ಒಟ್ಟುಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಒಕ್ಕಲಿಗರು ಸೌಮ್ಯಳನ್ನು ತಮ್ಮ ಮಗಳಂತೆ ಪರಿಗಣಿಸಿ ಆಶೀರ್ವದಿಸುವಂತೆ ಕೋರಿದ್ದಾರೆ.
ದಕ್ಷಿಣ ಕ್ಷೇತ್ರದಲ್ಲಿ ರೆಡ್ಡಿಗಳು ಮತ್ತು ನಾಯ್ಡುಗಳು ಸೇರಿದಂತೆ ತೆಲುಗು ಮಾತನಾಡುವ ಜನಸಂಖ್ಯೆಯ ಪ್ರಮುಖ ಭಾಗವು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಒಲವು ತೋರುತ್ತದೆ. ಆದರೆ, ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಮಾತನಾಡುವ ಒಕ್ಕಲಿಗರು ಯಾವುದೇ ನಿರ್ಧಾರದಲ್ಲಿಲ್ಲ. ಅವರು ಜೆಡಿಎಸ್ ಪರವಾಗಿ ಇದ್ದು ಬ್ರಾಹ್ಮಣರಾದ ತೇಜಸ್ವಿ ಸೂರ್ಯಗೆ ಮತ ಚಲಾಯಿಸಬಹುದು.
ಆದರೆ ಮಾವಳ್ಳಿ ಬಡಾವಣೆಯ ಅಂಗಡಿಯ ವ್ಯಾಪಾರಿ ಸೂರ್ಯನಾರಾಯಣ ಅವರ ಅಭಿಪ್ರಾಯವೇ ಬೇರೆ. "ಈ ಹಿಂದೆ ಬಿಜೆಪಿ ಜೊತೆಗಿದ್ದೇವೆ ಎಂದು ಹೇಳಿಕೊಂಡಿದ್ದ ಅನೇಕ ಮತದಾರರು ಈ ಬಾರಿ ಪರಿಸ್ಥಿತಿಯು ನೀರಸವಾಗಿರುವುದರಿಂದ ತಮ್ಮ ಸ್ಥಾನವನ್ನು ಬದಲಾಯಿಸಬಹುದು" ಎಂದು ಅವರು ಹೇಳುತ್ತಾರೆ.
ಮೂರು ದಶಕಗಳಿಂದ ಈ ಕ್ಷೇತ್ರ ಬಿಜೆಪಿ ಕೋಟೆಯಾಗಿರುವ ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ವಿಚಾರವಾಗಿ ಬ್ರಾಹ್ಮಣರೂ ಕೂಡ ತಿರುಗಿಬಿದ್ದಿದ್ದಾರೆ. ಜೊತೆಗೆ ಈ ಬಾರಿ ತೇಜಸ್ವಿ ಸೂರ್ಯ ತಮ್ಮ ಕೆಲಸಗಳನ್ನು ಹೇಳದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವರ್ಚಸ್ಸಿನ ಮೇಲೆ ಮತ ಕೇಳುತ್ತಿದ್ದಾರೆ. ಸೌಮ್ಯ ರೆಡ್ಡಿ ಕಾಂಗ್ರೆಸ್ ಗ್ಯಾರಂಟಿ ಮತ್ತು ತಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರ ಕೆಲಸಗಳನ್ನು ಮುಖ್ಯವಾಗಿ ಪ್ರಚಾರಕ್ಕೆ ಬಳಸುತ್ತಿದ್ದಾರೆ.
ಕಾಂಗ್ರೆಸ್ ಐದು ಗ್ಯಾರಂಟಿಗಳ ಕಾರಣದಿಂದಾಗಿ ಕಾರ್ಮಿಕ ವರ್ಗ, ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಕ್ಷೇತ್ರದಾದ್ಯಂತ ಸುಮಾರು 60 ಕೊಳೆಗೇರಿಗಳಲ್ಲಿ ನೆಲೆಸಿದ್ದಾರೆ. ಇವರ ಮತಗಳು ಸೌಮ್ಯ ರೆಡ್ಡಿ ಪಾಲಾಗಲಿದೆ ಎನ್ನು ವಿಶ್ವಾಸದಲ್ಲಿದೆ ಕಾಂಗ್ರೆಸ್.












Click it and Unblock the Notifications