Bengaluru Rains: ನಗರದ ಒಂದು ವಾರದ ಹವಾಮಾನ ಮುನ್ಸೂಚನೆ
ಬೆಂಗಳೂರು, ಜೂನ್ 26: ಮುಂಗಾರು ಮಳೆ ರಾಜ್ಯದ ಅನೇಕ ಭಾಗಗಳಲ್ಲಿ ಚುರುಕು ಪಡೆದಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಸುವ ಲಕ್ಷಣಗಳು ಕಂಡು ಬಂದಿವೆ. ಮುಂದಿನ ಜುಲೈ 01 ರವರೆಗೆ ಬೆಂಗಳೂರಿನ ಮಟ್ಟಿಗೆ ಹವಾಮಾನದಲ್ಲಿ ಹಲವು ಬದಲಾವಣೆಗಳು ಆಗಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಕೆಲವು ದಿನದಿಂದ ನಗರದಲ್ಲಿ ಅಲ್ಲಲ್ಲಿ ಹಗುರ ಮಳೆ ಆಗುತ್ತಿದ್ದು, ಒಂದೆರಡು ಕಡೆಗಳಲ್ಲಿ ಜೋರು ಮಳೆ ಆಗಿದೆ. ಮಳೆ ಜೊತೆಗೆ ಸೆಕೆಯ ಅನುಭವ ಸಹ ಆಗುತ್ತಿದೆ. ಕನಿಷ್ಠ ತಾಪಮಾನದಲ್ಲಿ ತುಸು ಬದಲಾವಣೆ ಆಗಿದ್ದರಿಂದ ಬೆಳಗ್ಗೆ ಚಳಿಯ ವಾತಾವರಣ ಆಗುತ್ತಿದೆ.

ಮುಂದಿನ ಒಂದು ವಾರ ಕಾಲ ನಗರದಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಅಬ್ಬರಿಸಲಿದೆ ಎಂದು ಅಂದಾಜಿಸಲಾಗಿದೆ. ಬುಧವಾರ ಬೆಳಗ್ಗೆಯಿಂದಲೇ ಮಬ್ಬು ಕವಿದ ವಾತಾವರಣ, ತಾಪಮಾನದಲ್ಲಿ ಇಳಿಕೆ ಕಂಡು ಬಂದಿದ್ದು, ಇದೇ ವಾತಾವರಣ ಮುಂದುವರಿಯಲಿದೆ.
ಮಂಗಳವಾರ ರಾತ್ರಿ ಕೆಲವೆಡೆ ಸೋನೆ ಮಳೆ
ಮಂಗಳವಾರ ರಾತ್ರಿ ಬಸವನಗುಡಿ, ಜಯನಗರ, ಜಯನಗರ, ರಾಜಮಹಲ್ ಗುಟ್ಟಹಳ್ಳಿ ಸೇರಿದಂತೆ ಒಂದಷ್ಟು ಬಡಾವಣೆಗಳಲ್ಲಿ ಆಗಾಗ ತುಂತುರು ಮಳೆ ಕಂಡು ಬಂತು. ಎಲ್ಲಿಯೂ ಜೋರು ಮಳೆ ಆಗಲಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಆಗುವ ಸಂಭವ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ತಿಳಿಸಿದೆ.
ಬೆಂಗಳೂರಿನಲ್ಲಿ ಎಷ್ಟಿರಲಿದೆ ತಾಪಮಾನ
ಗುಡುಗು ಸಹಿತ ಹಗುರದಿಂದ ಸಾಧಾರಣ ಆಗಾಗ ಜೋರು ಮಳೆ ಬರಲಿದೆ. ಹೀಗಾಗಿ ನಗರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.

ಬೆಂಗಳೂರು ನಗರವು ರಾಜ್ಯದ ದಕ್ಷಿಣ ಒಳನಾಡು ವ್ಯಾಪ್ತಿಗೆ ಬರುತ್ತದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸುಳಿಗಾಳಿ, ಬದಲಾವಣೆಗಳ ಕಾರಣದಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದೆ. ಸದ್ಯ ಕೊಡಗು, ಶಿವಮೊಗ್ಗ, ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ಅನೇಕ ಕಡೆ ಮಳೆ ಆಗುತ್ತಿದೆ.
ಇಂದು ನಗರದಲ್ಲಿ ಮಳೆ
ಬೆಂಗಳೂರಿನಲ್ಲಿ ಮಾತ್ರ ಈಗಲೋ ಆಗಲೋ ಮಳೆ ಬರುವ ಮುನ್ಸೂಚನೆ ಇದ್ದು, ಇಂದು ಸಂಜೆ ಬಳಿಕ ಕೋರಮಂಗಳ, ಮಾರತ್ತಹಳ್ಳಿ, ಹೆಬ್ಬಾಳ, ಯಲಹಂಕ, ನಗರದ ವಿವಿಧೆಡೆ ಮಳೆ ಬರುವ ಸಾಧ್ಯತೆ ಇದೆ. ಆದರೆ ಕೆಲವು ದಿನಗಳಿಂದ ಎಲ್ಲಿಯೂ ವ್ಯಾಪಕ ಮಳೆ ಆದ ಬಗ್ಗೆ ವರದಿ ಆಗಿಲ್ಲ.
ಮುಂದಿನ ವಾರ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ. ಬಿಬಿಎಂಪಿಯು ಬಿರುಗಾಳಿ ಸಹಿತ ಬರುವ ಮಳೆಯಿಂದ ಉಂಟಾಗುವ ಹಾನಿ, ಮರ, ಮರದ ಕೊಂಬೆ ತೆರವಿಗೆ ಸೂಕ್ತ ರೀತಿಯಲ್ಲಿ ಸಜ್ಜಾಗಿದ್ದಾರೆ. ಸಿಬ್ಬಂದಿಗೆ ಬಿಬಿಎಂಪಿ ಆಯುಕ್ತರು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.












Click it and Unblock the Notifications