Tunnel Road: ಟನಲ್ ರಸ್ತೆಯಿಂದ ಬೆಂಗಳೂರಿಗೆ ಈ ಅಪಾಯ: ತೇಜಸ್ವಿ ಸೂರ್ಯ ಎಚ್ಚರಿಕೆ
ಬೆಂಗಳೂರಿಗೆ ಟನಲ್ ರಸ್ತೆ ಬೇಡವೇ ಬೇಡ ಎಂದು ತೇಜಸ್ವಿ ಸೂರ್ಯ ವಿರೋಧಿಸುತ್ತಿದ್ದಾರೆ. ಇಂದು ರಾಜ್ಯ ಸರ್ಕಾರದ ಉದ್ದೇಶಿತ ಟನಲ್ ರೋಡ್ ಯೋಜನೆಯ ವಿರುದ್ಧ ಹಾಗೂ ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದರ ವಿರುದ್ಧ ಇಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಟನಲ್ ರಸ್ತೆ ನಿರ್ಮಾಣವಾದರೆ ಬೆಂಗಳೂರಿಗೆ ಈ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುರಂಗ ರಸ್ತೆ ಯೋಜನೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಲ್ಲ. ಸುರಂಗ ರಸ್ತೆಗಳು ನಗರಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ ಖಾಸಗಿ ಸಾರಿಗೆಯ ಮೇಲೆ ಹೆಚ್ಚು ಅವಲಂಬನೆ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ ಎಂಬ ಮೂಲ ಕಾರಣವನ್ನು ಪರಿಹರಿಸದೆ, ಕೇವಲ ಒಂದು ಜಂಕ್ಷನ್‌ನಿಂದ ಇನ್ನೊಂದಕ್ಕೆ ಸಂಚಾರವನ್ನು ಸ್ಥಳಾಂತರಿಸುತ್ತವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಅಲ್ಲದೆ ಈ ಯೋಜನೆಯು ಸೂಕ್ತವಾದ ಪರಿಸರ ಅಥವಾ ಭೂವೈಜ್ಞಾನಿಕ ಪರಿಣಾಮಗಳ ಅಧ್ಯಯನವಿಲ್ಲದೆ ಮುಂದುವರೆದಿರುವುದರಿಂದ, ಲಾಲ್‌ಬಾಗ್‌ನ ಪರಿಸರ ಮತ್ತು 3,000 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪೆನಿನ್ಸುಲಾರ್ ಬಂಡೆ ಎಂಬ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಕ್ಕೆ ಶಾಶ್ವತ ಹಾನಿ ಉಂಟುಮಾಡುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದ್ದಾರೆ. ಬೆಂಗಳೂರಿಗೆ ದೂರದೃಷ್ಟಿಯ ಮೂಲಸೌಕರ್ಯ ಬೇಕೇ ಹೊರತು, ಅದರ ಪರಂಪರೆ ಮತ್ತು ಪರಿಸರವನ್ನು ನಾಶಪಡಿಸುವ ಇಂತಹ ಅವಿವೇಕದ ಯೋಜನೆಗಳಲ್ಲ ಎಂದು ಖಂಡಿಸಿದ್ದಾರೆ.
ಈ ಯೋಜನೆಗೆ ಸಾವಿರಾರು ಕೋಟಿಗಳನ್ನು ಖರ್ಚು ಮಾಡುವ ಬದಲು, ರಾಜ್ಯ ಸರ್ಕಾರವು ಸುಸ್ಥಿರವಾದ, ದೀರ್ಘಕಾಲೀನ ಸಾರಿಗೆ ಪರಿಹಾರಗಳಲ್ಲಿ ಹೂಡಿಕೆ ಮಾಡಿ. ಈ ಮೂಲಕ ಎಲ್ಲರಿಗೂ ಸುಲಭವಾಗಿ ಮತ್ತು ಸಮರ್ಥವಾಗಿ ಲಭ್ಯವಿರುವ ಸಾರ್ವಜನಿಕ ಸಂಚಾರಕ್ಕಾಗಿ ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಜಾಲಗಳನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಹಿ ಸಂಗ್ರಹ ಅಭಿಯಾನ
ಇಂದು ಲಾಲ್‌ಬಾಗ್‌ನಲ್ಲಿ ಟನಲ್ ರೋಡ್ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ಕೂಡ ನಡೆಯಿತು. ಈ ವೇಳೆ ನೂರಾರು ಮಂದಿ ಟನಲ್ ರೋಡ್ ಬೇಡ ಎಂದು ಸಹಿ ಹಾಕಿದ್ದಾರೆ. ನಗರವನ್ನು ನಾಗರಿಕರಿಗಾಗಿ ನಿರ್ಮಿಸಿ, ಗುತ್ತಿಗೆದಾರರಿಗಾಗಿ ಅಲ್ಲ ಎಂದು ಜನರು ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಈಗಲಾದರೂ ಅವರ ಮಾತನ್ನು ಕೇಳಿ ಈ ವಿನಾಶಕಾರಿ ಯೋಜನೆಯನ್ನು ಕೈಬಿಡುತ್ತದೆಯೇ? ಎಂದು ತೇಜಸ್ವಿ ಸೂರ್ಯ ಕೇಳಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರ ನಿರ್ಮಿಸಲು ಹೊರಟಿರುವ ನಿಷ್ಪ್ರಯೋಜಕ, ಅಪಾಯಕಾರಿ ಸುರಂಗ ರಸ್ತೆ ಯೋಜನೆಯನ್ನ ನಿಲ್ಲಿಸುವಂತೆ ಒತ್ತಾಯಿಸಿದ್ದೇವೆ. ಲಾಲ್‌ಬಾಗ್ ಪೂರ್ವದ್ವಾರದ ಡಬಲ್ ರೋಡ್ ಬಳಿ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಯಿತು. ಬೆಂಗಳೂರು ರಕ್ಷಿಸಿ-ಟನಲ್ ರೋಡ್ ನಿಲ್ಲಿಸಿ ಎಂದು ಆರ್.ಅಶೋಕ್ ಕರೆ ನೀಡಿದ್ದಾರೆ.












Click it and Unblock the Notifications