Bengaluru Traffic: ಶೀಘ್ರದಲ್ಲೇ ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ಸಂಚಾರ ಆರಂಭ ಸಾಧ್ಯತೆ!
ಬೆಂಗಳೂರು, ಜುಲೈ 16: ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಸಮಸ್ಯೆ ಮುಂದಿನ ದಿನಗಳಲ್ಲಿ ಸ್ವಲ್ಪ ಕಡಿಮೆಯಾಗಲಿದೆ. ಜುಲೈ 19 ರೊಳಗೆ ಹೆಚ್ಚುವರಿ ಲೇನ್‌ನ ಡೌನ್ ರಾಂಪ್‌ಗೆ ಅಡಿಪಾಯ ಹಾಕುವ ಕೆಲಸ ಪೂರ್ಣಗೊಳ್ಳಲಿದ್ದು, ಮುಂದಿನ ವಾರದಿಂದ ಹೆಬ್ಬಾಳ ರಸ್ತೆಯಲ್ಲಿ ಸಂಚಾರ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.
ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಬಿಡಿಎ ಕೆಲಸ ಮಾಡುತ್ತಿದ್ದು, ಹೆಚ್ಚುವರಿ ಡೌನ್ ರ್‍ಯಾಂಪ್‌ಗೆ ಅಡಿಪಾಯ ಹಾಕುತ್ತಿದೆ. ಶನಿವಾರ ಸ್ಥಳ ಪರಿಶೀಲನೆ ನಡೆಸಿದ ಬಿಡಿಎ ಅಧಿಕಾರಿಗಳು, ಸರ್ವಿಸ್ ರಸ್ತೆಯಲ್ಲಿ ಡೌನ್ ರ್‍ಯಾಂಪ್ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿರುವುದನ್ನು ಗಮನಿಸಿದ್ದಾರೆ.

ಜುಲೈ 19 ರೊಳಗೆ ಸರ್ವಿಸ್ ರಸ್ತೆಯ ಎರಡು ಸ್ಥಳಗಳಲ್ಲಿ ಅಡಿಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಚ್ಚಲಾಗುವುದು ಎಂದು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಸುರೇಶ್ ಆರ್ ತಿಳಿಸಿದ್ದಾರೆ ಎಂದು ಡಿಹೆಚ್ ಎಂದು ಹೇಳಿದೆ. ಶೀಘ್ರದಲ್ಲೇ ಸರ್ವಿಸ್ ರಸ್ತೆಯಲ್ಲಿ ಸಂಚಾರ ಪುನರಾರಂಭಿಸಬಹುದು ಎಂದು ಅವರು ಹೇಳಿದರು.
ಕಾಮಗಾರಿ ಮುಗಿಯಲು ಒಂದೂವರೆ ವರ್ಷ
ಡೌನ್ ರ್‍ಯಾಂಪ್‌ಗೆ ಅಡಿಪಾಯ ಹಾಕಿದ ನಂತರ ಪಕ್ಕದ ಗೋಡೆಗಳ ನಿರ್ಮಾಣದಂತಹ ಕೆಲಸಗಳು ನಡೆಯಬೇಕಿದ್ದು, ಯೋಜನೆ ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ ಎಂದು ಹೇಳಿದರು. ನಗರದಲ್ಲಿ ಆಗಾಗ್ಗೆ ಮಳೆಯಾಗುತ್ತಿರುವ ಕಾರಣ ಕೆಲಸ ನಿರಂತರವಾಗಿ ನಡೆಯಲು ಅಡ್ಡಿಯಾಗುತ್ತಿದೆ.
ಮಳೆಯ ಕಾರಣ ಪ್ರತಿದಿನ ಕೆಲಸವು ಕೆಲವು ಗಂಟೆಗಳ ಕಾಲ ವಿಳಂಬವಾಗುತ್ತದೆ. ಕಾಂಕ್ರೀಟ್ ಸುರಿದು ಎರಡು ಸ್ಥಳಗಳನ್ನು ಮುಚ್ಚಲು ಮೂರು ದಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಪೊಲೀಸರು ಹೆಬ್ಬಾಳ ಮೇಲ್ಸೇತುವೆ ಡೌನ್ ರಾಂಪ್‌ನಲ್ಲಿರುವ ಸೆಂಟ್ರಲ್ ಮೀಡಿಯನ್ ಅನ್ನು ತೆಗೆದುಹಾಕಿದ್ದಾರೆ, ವಿಮಾನ ನಿಲ್ದಾಣದ ಮಾರ್ಗದಿಂದ ವಾಹನಗಳಿಗೆ ಸಂಚಾರ ಸುಗಮವಾಗಿಸಿದ್ದಾರೆ.
ಟ್ರಾಫಿಕ್ ಕಡಿಮೆ ಮಾಡಲು ಹರಸಾಹಸ
ನಗರದಲ್ಲಿ ಹಲವು ಜಂಕ್ಷನ್‌ಗಳಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ಇದ್ದು, ಹೆಬ್ಬಾಳ ಜಂಕ್ಷನ್ ಕೂಡ ಅದರಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗವಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ವಿಮಾನ ನಿಲ್ದಾಣದಿಂದ ನಗರಕ್ಕೆ ಬರಲು ಈಗಿರುವ ಎರರು ಪಥದ ಜೊತೆ ಮತ್ತೆ ಮೂರು ಪಥಗಳನ್ನು ಸೇರಿಸಿ ಒಟ್ಟು ಐದು ಪಥದ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ.
ಪಥ ವಿಸ್ತರಣಗೆ 2016ರಲ್ಲೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕಾರ್ಯಾದೇಶ ನೀಡಲಾಗಿತ್ತು. 2017ರಲ್ಲೇ ಕೆಲಸ ಆರಂಭಿಸಿ ಕಂಬಗಳ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಮತ್ತೆ ಕೆಲಸ ಆರಂಭವಾಗಿದ್ದು, ಸರ್ವಿಸ್ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿತ್ತು.












Click it and Unblock the Notifications