Bengaluru Traffic: ಬೆಂಗಳೂರಿನ ವಾಹನ ಸವಾರರಿಗೊಂದು ಸಿಹಿಸುದ್ದಿ; ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯಲ್ಲಿ ಬದಲಾವಣೆ
ಬೆಂಗಳೂರು ನಗರದಲ್ಲಿ ಎಲ್ಲರಿಗೂ ಇಷ್ಟವಾಗದ ಯಾವುದಾದರೂ ಒಂದು ವಿಷಯವಿದ್ದರೆ, ಅದು ಟ್ರಾಫಿಕ್ ಜಾಮ್. ದಿನನಿತ್ಯ ಉಂಟಾಗುವ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಹೈರಾಣಾಗುತ್ತಾರೆ. ಯಾಕಾದರೂ ಈ ರಸ್ತೆಯಲ್ಲಿ ಬಂದೆನೋ, ಯಾಕಾದರೂ ಈ ಸಮಯದಲ್ಲಿ ಬಂದೆಯೋ ಎಂದೆನಿಸದಿರದು.
ಬಿಸಿಲು, ಹೊಗೆಯ ಮಧ್ಯೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಸಿಲುಕಿಕೊಂಡವರು ಗ್ರೀನ್ ಸಿಗ್ನಲ್ ಬಿದ್ದ ಕೂಡಲೇ ತಾ ಮುಂದು, ನಾ ಮುಂದು ಎಂದು ಹಾರ್ನ್ ಹೊಡೆಯುತ್ತಾ ಸಿಗ್ನಲ್ ದಾಟಲು ರೇಸ್‌ಗೆ ಬಿದ್ದವರಂತೆ ವಾಹನ ಚಲಾಯಿಸುತ್ತಾರೆ. ಇಂತಹ ವಾಹನ ಸವಾರರಿಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ.

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ವಿಶೇಷ ಪೊಲೀಸ್ ಆಯುಕ್ತರನ್ನು ನೇಮಿಸಿ, ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ನಗರದ ಟ್ರಾಫಿಕ್ ಸಿಗ್ನಲ್‌ಗಳ ವ್ಯವಸ್ಥೆಯನ್ನೇ ಬದಲಾವಣೆ ಮಾಡಲು ಮುಂದಾಗಿದೆ.
ರಾಜಧಾನಿ, ಉದ್ಯಾನ ನಗರಿ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಟ್ರಾಫಿಕ್ ಸಮಸ್ಯೆಯೂ ಜಾಸ್ತಿಯಾಗುತ್ತಿದೆ. ಒಂದು ಸಿಗ್ನಲ್‌ನಲ್ಲಿ ಒಂದೇ ನಿಮಿಷಯದೊಳಗೆ ಕಿಲೋಮೀಟರ್‌ಗಟ್ಟಲೇ ವಾಹನಗಳು ನಿಂತಿರುತ್ತವೆ.
ಅಷ್ಟೇ ಅಲ್ಲದೆ, ಮೆಟ್ರೋ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಬಿಬಿಎಂಪಿ ಸೇರಿದಂತೆ ಹೆಲವು ಇಲಾಖೆಗಳು ನಡೆಸುತ್ತಿರುವ ಕಾಮಗಾರಿಗಳಿಂದಾಗಿ ರಸ್ತೆಗಳು ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಇದರಿಂದಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಕಳೆದ ಸರ್ಕಾರ ಬೆಂಗಳೂರು ಸಂಚಾರ ಪೊಲೀಸ್ ವಿಭಾಗಕ್ಕೆ ಎಂ.ಎ. ಸಲೀಂ ಅವರನ್ನು ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಅವರು ನಗರದ ಸಂಚಾರ ದಟ್ಟಣೆ ನಿವಾರಿಸಲು ಕೆಲವು ಕ್ರಮಗಳನ್ನು ಕೈಗೊಂಡಿತ್ತಾದರೂ, ಈವರೆಗೆ ಅದನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಇದೀಗ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ನಗರದ ಸಂಚಾರ ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ. ಈ ಮೂಲಕ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನಗಳು ಬಹಳ ಸಮಯದವರೆಗೆ ನಿಲ್ಲುವುದನ್ನು ತಪ್ಪಿಸಿ, ಸಂಚಾರ ದಟ್ಟಣೆ ನಿಯಂತ್ರಿಸುವ ಯೋಜನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಸಿದ್ಧಪಡಿಸಿರುವ ಯೋಜನೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ 136 ಸಂಚಾರ ಸಿಗ್ನಲ್‌ಗಳು ಹಾಗೂ 29 ಸಿಗ್ನಲ್‌ಗಳನ್ನು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಗ್ನಲ್ ವ್ಯವಸ್ಥೆಗಳಾಗಿ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 53.64 ಕೋಟಿ ರೂ. ಖರ್ಚು ಮಾಡಲಾಗುತ್ತದೆ.

ಈ ನೂತನ ವ್ಯವಸ್ಥೆ ಮೂಲಕ ಟ್ರಾಫಿಕ್ ಸಿಗ್ನಲ್‌ಗಳ ಸಮಯವನ್ನು ಸಂಚಾರಿ ಪೊಲೀಸ್ ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವಂತೆ ಮಾಡಲಾಗುತ್ತದೆ. ಇದೇ ವೇಳೆ ಯಾವ ರಸ್ತೆಯ, ಯಾವ ಸಿಗ್ನಲ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿದೆ ಎಂಬುದನ್ನು ಗಮನಿಸಿ, ಆ ಭಾಗದ ಸಿಗ್ನಲ್ ಅನ್ನು ಹಸಿರು ಬಣ್ಣ (ಗ್ರೀನ್ ಸಿಗ್ನಲ್)ಕ್ಕೆ ತಿರುಗಿಸಿ ವಾಹನಗಳು ಸರಾಗವಾಗಿ ಸಂಚರಿಸುವಂತೆ ಮಾಡಲಾಗುತ್ತದೆ.
ಅದರ ಜೊತೆಗೆ ಆಯಾ ಸಿಗ್ನಲ್‌ನಲ್ಲಿನ ವಾಹನ ದಟ್ಟಣೆ ಕುರಿತು ಅಧ್ಯಯನ ನಡೆಸಿ, ಸಿಗ್ನಲ್‌ಗಳ ಸಮಯದಲ್ಲಿ ಬದಲಾವಣೆ ತರಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳೆಯುತ್ತಿರುವ ಮತ್ತು ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವುದು ಮುಖ್ಯವಾಗಿದೆ. ಅದರಂತೆ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಸಂಚಾರ ಪೊಲೀಸರ ನಡುವೆ ಸಮನ್ವಯ ಸಾಧಿಸಲು ಕೆಆರ್‌ಡಿಸಿಎಲ್ ಅಥವಾ ಸಂಚಾರ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.












Click it and Unblock the Notifications