Bengaluru rain: ಮಂಗಳವಾರ ಮುಂದುವರಿದ ಹಿಂಗಾರು ಮಳೆ ಅಬ್ಬರ, ಸಂಚಾರ ಅಸ್ತವೆಸ್ತ, ದಾಖಲಾದ ಮಳೆ ವಿವರ
ಬೆಂಗಳೂರು, ನವೆಂಬರ್ 07: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರವು ಮಳೆ ಮುಂದುವರಿದಿದೆ. ಇಂದು ಮಧ್ಯಾಹ್ನ ನಂತರ ಶುರುವಾರ ಮಳೆ ಅನೇಕ ಬಡಾವಣೆಗಳಲ್ಲಿ ಸುರಿಯಿತು. ಇದರಿಂದ ಕೆಲವೆಡೆ ರಸ್ತೆ ಸಂಚಾರ ಅಸ್ತವೆಸ್ತವಾಯಿತು. ಕಳೆದ 24 ಗಂಟೆಗಳಲ್ಲಿ ಯಲಹಂಕದಲ್ಲಿ 164 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇಂದು ಸಹ ತಡರಾತ್ರಿವರೆಗೆ ಮಳೆ ಮುಂದುವರೆಯುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಾದ್ಯಂತ ಕೆಲವು ದಿನಗಳಿಂದ ತಂಪು ವಾತಾವರಣ ಕಂಡು ಬರುತ್ತಿದೆ. ತಾಪಮಾನದಲ್ಲಿ ಇಳಿಕೆ ಆಗಿದೆ. ಸೋಮವಾರ ಹಿಂಗಾರು ಮಳೆಯ ಅಬ್ಬರಕ್ಕೆ ನಗರ ನಲುಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಚಳಿ ವಾತಾವರಣ ಕಂಡು ಬಂದಿದ್ದು. ಸಂಜೆ 6 ಗಂಟೆ ಹೊತ್ತಿಗೆ ಮಹಾದೇವಪುರ ವಲಯ ವ್ಯಾಪ್ತಿಯ ಹಗದೂರಿನಲ್ಲಿ 20 ಮಿಲಿ ಮೀಟರ್ ಮಳೆ ದಾಖಲಾಯಿತು.

ಇನ್ನೂ ಸಂಪಂಗಿ ರಾಮನಗರದಲ್ಲಿ 19 ಮಿ.ಮೀ, ಬಸವನಗುಡಿ 17.5ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 15.5ಮಿ.ಮೀ, ಕಮ್ಮನಹಳ್ಳಿ ಮತ್ತು ಕುಶಾಲನಗರದಲ್ಲಿ ತಲಾ 12 ಮಿಲಿ ಮೀಟರ್ ಮಳೆ ಆಯಿತು.
ಕೆಲವೆಡೆ ಬಿರುಸಾಗಿ ಸುರಿದ ಮಳೆ
ಕೋರಮಂಗಲ, ಹೆಬ್ಬಾಳ, ಜಯನಗರ, ಚಾಮರಾಪೇಟೆ, ಲಾಲ್‌ಬಾಗ್ ರಸ್ತೆ, ಟೌನ್‌ಹಾಲ್, ಮಲ್ಲೇಶ್ವರ, ಶೇಷಾದ್ರಿಪುರಂ, ನಾಗವಾರ, ನಂದಿನಿ ಬಡಾವಣೆ, ಬೊಮ್ಮನಹಳ್ಳಿ, ದಾಸರಹಳ್ಳಿ ಸೇರಿದಂತೆ ಬೆಂಗಳೂರು ಬಹುತೇಕ ಎಲ್ಲ ಕಡೆಗಳಲ್ಲೂ ತುಂತುರುನಿಂದ ಸಾಧಾರಣವಾಗಿ ಮಳೆ ದಾಖಲಾಗಿದೆ. ಒಂದೆರಡು ಕಡೆಗಳಲ್ಲಿ ಬಿರುಸು ಮಳೆ ಸುರಿಯಿತು.
ಚಳಿಗೆ ಜನರು ಬೆಚ್ಚಗಿನ ಧಿರಿಸಿನ ಮೊರೆ ಹೋಗಿದ್ದಾರೆ. ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತದ್ದು ಸಾಮಾನ್ಯ ಎಂಬಂತಾಗಿದೆ. ಬಿಜಿಎಸ್ ಮೇಲ್ಸೇತುವೆ, ಲಾಕ್‌ಬಾಗ್ ರಸ್ತೆ, ಕೋರಮಂಗಲ ಕೆಲವು ಪ್ರಮುಖ ರಸ್ತೆಗಳು, ಯಲಹಂಕದ ಕೆಲವು ರಸ್ತೆಗಳಲ್ಲಿ ಮಳೆ ನಿಂತು ಸಂಚಾರ ಅಸ್ತವೆಸ್ತವಾಗಿದೆ. ರಸ್ತೆ ಅಂಡರ್‌ಪಾಸ್‌ಗಳು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು ಕಂಡು ಬಂತು.

ಎರಡು ದಿನ ಮಳೆ ಮುಂದುವರಿಕೆ
ನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಇದೇ ರೀತಿಯ ಜೋರು ಮಳೆಯ ವಾತಾವರಣವೇ ಮುಂದುವರಿಯಲಿದೆ. ದಿನವಿಡೀ ಮೋಡ ಕವಿದ ಮಬ್ಬು ವಾತಾವರಣ ಕಂಡು ಬರಲಿದೆ. ತೇವ ಭರಿತ ಗಾಳಿ ಬೀಸುವುದರಿಂದ ಚಳಿ ಪ್ರಮಾಣ ಹೆಚ್ಚಾಗಿರಲಿದ್ದು, ಗರಿಷ್ಠ ತಾಪಮಾನದಲ್ಲಿ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ನೆನ್ನೆ ಸೋಮವಾರ ನಗರದಲ್ಲಿ ಯಲಹಂಕದಲ್ಲಿ 164 ಮಿಲಿ ಮೀಟರ್ ಮಳೆ ಬಿದ್ದಿದೆ. ಜಿಟಿ ಜಿಟಿ ರೂಪದಲ್ಲಿದ್ದ ಮಳೆ ರಾತ್ರಿಯಾಗುತ್ತಿದ್ದಂತೆ ಅಬ್ಬರಿಸಲು ಶುರುವಿಟ್ಟುಕೊಂಡಿತು. ತಡರಾತ್ರಿವರೆಗೂ ಒಂದೇ ಸಮನೆ ಸುರಿಯಿತು. ಇದರಿಂದ ಅನೇಕ ರಸ್ತೆ ಅಂಡರ್‌ಪಾಸ್‌ಗಳು ಜಲಾವೃತಗೊಂಡವು. ತಗ್ಗುಪ್ರದೇಶದ ನಿವಾಸಿಗಳಿಗೆ ಈ ರಣಮಳೆ ಭಾರಿ ಸಂಕಷ್ಟ ಒಡ್ಡಿತು. ಸಂಚಾರವು ಅಸ್ತೆವೆಸ್ತವಾಯಿತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.












Click it and Unblock the Notifications