Bengaluru Weather: ಇಂದು ರಾಜಧಾನಿಗೆ ಭಾರೀ ಮಳೆ ಆರ್ಭಟ, ಯೆಲ್ಲೋ ಅಲರ್ಟ್: ನೆನ್ನೆ ಮಳೆಗೆ ಸಂಚಾರ ಅಸ್ತವ್ಯಸ್ತ!
ಬೆಂಗಳೂರು, ಜೂನ್ 11: ಬೆಂಗಳೂರಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸಂಜೆ ಸುರಿಯುತ್ತಿದ್ದ ಮಳೆ ಇದೀಗ ರಾತ್ರಿಗೆ ಶಿಫ್ಟ್ ಆದಂತೆ ಕಾಣುತ್ತಿದೆ. ಜೋರು ಮಳೆಗೆ ಪ್ರಮುಖ ರಸ್ತೆಗಳೇ ಜಲಾವೃತಗೊಂಡಿವೆ. ಮರ ಕೊಂಬೆಗಳು ಅಲ್ಲಲ್ಲಿ ಮುರಿದು ಬಿದ್ದಿವೆ. ಬೊಮ್ಮನಹಳ್ಳಿಯಲ್ಲಿ ಬರೋಬ್ಬರಿ 54.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕೋರಮಂಗಲ, ಸಿಂಗಸಂದ್ರ ಸೇರಿದಂತೆ ಈ ಭಾಗದ ಸುತ್ತಮುತ್ತ ಹೆಚ್ಚಿನ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬಾರಿ ಮುಂಗಾರು ಮಳೆ ಆರ್ಭಟಿಸುವುದು ನಿಕ್ಕಿಯಾಗಿದೆ. ಈ ಕಾರಣದಿಂದ ಇಂದು ಜೂನ್ 11ರಂದು ಬುಧವಾರ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಕನಿಷ್ಠ 65.5 ಮಿಲಿ ಮೀಟರ್‌ನಿಂದ 110.5 ಮಿಲಿ ಮೀಟರ್‌ವರೆಗೆ ಮಳೆ ದಾಖಲಾಗುವ ನಿರೀಕ್ಷೆ ಇದೆ. ಅಂದೆ ಬೆಂಗಳೂರಿನಲ್ಲಿ ಇಂದು ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ನೆನ್ನೆ ಸುರಿದ ಮಳೆಯಿಂದಾಗಿ ನಗರದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿವೆ. ಕೋರಮಂಗಲದಲ್ಲಿ 41.5 ಮಿ.ಮೀ, ಸಿಂಗಸಂದ್ರ-2 36.5 ಮಿ.ಮೀ, ಬಿಟಿಎಂ ಬಡಾವಣೆ- 34 ಮಿ.ಮೀ, ಎಚ್‌ಎಸ್‌ಆರ್ ಬಡಾವಣೆ 28 ಮಿ.ಮೀ, ಸಂಪಂಗಿರಾಮನಗರ 26, ಎಚ್‌ಎಎಲ್ ವಿಮಾನ ನಿಲ್ದಾಣ 21.5, ಮಿ.ಮೀ, ಮಾರತ್ತಹಳ್ಳಿ 21 ಮಿ.ಮೀ, ಪುಲಕೇಶಿ ನಗರ 19.50 ಮಿ.ಮೀ, ದಯಾನಂದನಗರ 16.5 ಮಿ.ಮೀ, ಬೆಳ್ಳಂದೂರು 15 ಮಿ.ಮೀ, ಬಿಳೇಕಹಳ್ಳಿ 15 ಮಿ.ಮೀ, ವಿವಿ ಪುರಂ 14ಮಿ.ಮೀ, ಅರಕೇರೆ 13ಮಿ.ಮೀ, ಹೊರಮಾವು 13ಮಿ.ಮೀ, ಹಂಪಿನಗರ 13ಮಿ.ಮೀ. ಮಳೆ ಆಗಿದೆ. ಉಳಿದೆ ಕೆಲವು ಕಡೆಗಳಲ್ಲಿ ಸಾಮಾನ್ಯ ಮಳೆ ದಾಖಲಾಗಿದೆ.
ಮಳೆ ನೀರು ನಿಂತು ಸಮಸ್ಯೆ: ಟ್ರಾಫಿಕ್ ಸಲಹೆ
ನೆನ್ನೆ ಹಗುರ ಮಳೆ ಬಂದ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗಿಲ್ಲ. ಆದರೆ ಹೆಚ್ಚು ಮಳೆ ದಾಖಲಾದ ಪ್ರದೇಶಗಳ ಬಡಾವಣೆಗಳ ತಗ್ಗು ಪ್ರದೇಶಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಆಗಿದೆ.ಇಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸಿಂಗಸಂದ್ರ ಮೆಟ್ರೋ ನಿಲ್ದಾಣದಿಂದ ನಗರದ ಕಡೆಗೆ ಸಂಚಾರ ಸಮಸ್ಯೆ ಉಂಟಾಯಿತು. ಕೆಲವೆಡೆ ಬೆಳಗ್ಗೆವರೆಗೂ ನೀರು ನಿಂತಿದ್ದು ಕಂಡು ಬಂತು.
ಇನ್ನು ಆಟೋ ಮಾರ್ಟ್ ಬಳಿ ಮಳೆ ನೀರು ನಿಂತಿರುವುದರಿಂದ 14 ನೇ ಮುಖ್ಯ ರಸ್ತೆ ಎಚ್‌ಎಸ್‌ಆರ್ ಲೇಔಟ್ ಕಡೆಗೆ ಸಂಚಾರ ನಿಧಾನಗತಿಯಲ್ಲಿರಲಿದೆ. ಅದೇ ರೀತಿ ಭದ್ರಪ್ಪ ಲೇಔಟ್ ರೈಲ್ವೆ ಕೆಳ ಸೇತುವೆಯ ರಸ್ತೆಯಲ್ಲಿ ಎರಡು ಅಡಿಯಷ್ಟು ಮಳೆ ನೀರು ನಿಂತಿರುವುದರಿಂದ ಡಾಲರ್ಸ್ ಕಾಲೋನಿ ಕಡೆಗೆ ನಿಧಾನಗತಿಯ ವಾಹನ ಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನಿಡಿದ್ದಾರೆ.












Click it and Unblock the Notifications