Bengaluru 2nd Airport: ಇಲ್ಲಿ ಏರ್‌ಪೋರ್ಟ್ ಸ್ಥಾಪಿಸಲ್ಲ: 50 ಕಿಮೀ. ಒಳಗೇ ನಿರ್ಮಾಣ: 33 ರಾಜಕಾರಣಿಗಳಿಗೆ ಹಿನ್ನಡೆ
ಬೆಂಗಳೂರು, ಏಪ್ರಿಲ್ 08: ಬೆಂಗಳೂರಿನ ಜನರ ಚಿತ್ತ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆತ್ತ ನೆಟ್ಟಿದೆ. ಏಕೆಂದರೆ ಇಂದು ಕೇಂದ್ರದ ತಂಡ ಸ್ಥಳ ಪರಿಶೀಲನೆಗೆ ಬಂದಿದ್ದಾರೆ. ಈ ಸಂಬಂಧ ಕೈಗಾರಿಕೆ ಮತ್ತು ಮೂಲಸೌಕರ್ಯಾಭಿವೃದ್ಧಿ ಇಲಾಖೆ ಸಚಿವ ಎಂ.ಬಿ ಪಾಟೀಲ್ ಅವರು ಮಹತ್ವದ ವಿಚಾರ ತಿಳಿಸಿದ್ದಾರೆ. ಮೂರು ಸ್ಥಳಗಳಲ್ಲಿ ಒಂದು ಫೈನಲ್ ಆಗಲಿದೆ. ಆದರೆ ಯಾವ ಕಾರಣಕ್ಕೆ ಶಿರಾದಲ್ಲಿ ಬೆಂಗಳೂರು ಹೊಸ ವಿಮಾನ ನಿಲ್ದಾಣ ನಿರ್ಮಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ 33 ಶಾಸಕರಿಗೆ ಹಿನ್ನಡೆ ಆಗಿದೆ.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಪ್ರಸ್ತಾವನೆ ಶುರುವಾದಾಗಿನಿಂದಲೂ ತುಮಕೂರು ಜಿಲ್ಲೆಯ, ಶಿರಾ ವ್ಯಾಪ್ತಿಯಲ್ಲಿ ನಿರ್ಮಿಸಬೇಕೆಂಬ ಕೂಗು, ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಎಂಬಿ ಪಾಟೀಲ್ ಅವರು ಸ್ವತಃ ನಾವು ಈ ಬಗ್ಗೆ ಒತ್ತಾಯಿಸಿದ್ದ ಗೃಹ ಸಚಿವರ ಗಮನಕ್ಕೂ ತಂದಿದ್ದೇವೆ. ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿ ಮಾತ್ರವೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವೆಂದು ಅವರು ತಿಳಿಸಿದ್ದಾರೆ. ಇದರಿಂದ 33 ಶಾಸಕರಿಗೆ ಹಿನ್ನಡೆ ಆದಂತಾಗಿದೆ.

ನಗರದ 50 ಕಿಮೀ ಒಳಗಡೆ ನಿರ್ಮಾಣ..
ಕನಕಪುರ ರಸ್ತೆಯಲ್ಲಿ ಎರಡು ಹಾಗೂ ಕುಣಿಗಲ್ ಬಳಿ ಒಂದು ಸೇರಿ ಒಟ್ಟು ಮೂರು ಜಾಗಗಳನ್ನು ಗುರುತಿಸಿದ್ದು, ಅವುಗಳ ಪರಿಶೀಲನೆಯು ಮಂಗಳವಾರದಿಂದ ನಡೆಯಲಿದೆ. ಇವೆಲ್ಲವು ಬೆಂಗಳೂರಿನಿಂದ 50 ಕಿಲೋ ಮೀಟರ್ ಒಳಗಡೆ ಇವೆ. ಈ ಸ್ಥಳ ಬಿಟ್ಟು 150 ಕಿಲೋ ಮೀಟರ್ ದೂರದಲ್ಲಿ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಿಸಿದರೆ ಪ್ರಯೋಜನವಿಲ್ಲ ಎಂದು ಅವರು ವಿವರಿಸಿದ್ದಾರೆ.
ದೂರದ ಪ್ರದೇಶದಲ್ಲಿ ಏರ್‌ಪೋರ್ಟ್ ನಿರ್ಮಿಸಿದರೆ ಯಾವ ಕಂಪನಿಗಳು ಕೈಗಾರಿಕೆ ಮಾಡಲು ಮುಂದೆ ಬರುವುದಿಲ್ಲ. ಹೂಡಿಕೆ ಅಸಾಧ್ಯವಾಗುತ್ತದೆ. ಇದೆಲ್ಲ ವಿಚಾರವಾಗಿ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ವಿಮಾನಯಾನ ಸಚಿವರ ಜೊತೆಗೆ ಚರ್ಚಿಸಿದ್ದೇವೆ. ಈ ಎರಡ ಕಡೆಗೆ ಜಾಗ ಗುರುತಿಸಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾಕೆ ಈ ಜಾಗಗಳಲ್ಲೇ ನಿರ್ಮಿಸಬೇಕು ಎಂಬುದನ್ನು ಕೇಂದ್ರಕ್ಕೆ ತಿಳಿಸಿದ್ದೇವೆ ಎಂದರು.

ಗುರುತಿಸಲಾದ ಮೂರು ಸ್ಥಳದಲ್ಲಿ ಕೇಂದ್ರ ತಂಡ ಎಲ್ಲಿ ನಿರ್ಮಿಸಲು ಜಾಗ ಅಂತಿಮಗೊಳಿಸುತ್ತದೋ ಅಲ್ಲಿ ನಿರ್ಮಾಣ ಮಾಡಲಾಗುವುದು. ಇಂದಿನಿಂದ ಜಾಗ ಪರಿಶೀಲನೆ ನಡೆಯಲಿದೆ. ಅಂತಿಮವಾದ ಬಳಿಕ ಕಂಪನಿಯಿಂದ ಸಾಧ್ಯಾಸಾಧ್ಯತೆ ವರದಿ ಪಡೆಯಲಾಗುವುದು. ನಂತರ ನಿರ್ಮಾಣ ಸ್ಥಳಕ್ಕೆ ಒಪ್ಪಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಇದರಿಂದಾಗಿ ಪಕ್ಷಾತೀತವಾಗಿ ಶಿರಾದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣವಾದರೆ ಅನುಕೂಲ ಎಂದು ಸರ್ಕಾರವನ್ನು ಆಗ್ರಹಿಸಿದ್ದ 33 ಶಾಸಕರಿಗೆ ಹಿನ್ನಡೆ ಆಗಿದೆ. ಇವರೆಲ್ಲರು ಶಾಸಕ ಟಿಬಿ ಜಯಚಂದ್ರ ಅವರ ನೇತೃತ್ವದಲ್ಲಿ ಸಹಿ ಹಾಕಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಅದರ ಬೆನ್ನಲ್ಲೆ ಶಿರಾದಲ್ಲಿ ಯೋಜನೆ ಅನುಷ್ಠಾನ ಕನಸಾಗಿಯೇ ಉಳಿದಿದೆ.

ಇನ್ನು ಹೆಚ್ಚಿನ ಬೇಡಿಕೆ ಕೇಳಿ ಬಂದಿದ್ದ ಉತ್ತರ ಕರ್ನಾಟಕದಲ್ಲೂ ಬೆಳಗಾವಿ ಇಲ್ಲವೇ ಹುಬ್ಬಳ್ಳಿ ಭಾಗದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಚಿಂತನೆ ಇದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ..












Click it and Unblock the Notifications