Bengaluru Satellite Town Ring Road: 4 ಕಡೆಗಳಲ್ಲಿ ಡ್ರೋನ್ ಲ್ಯಾಂಡಿಂಗ್ ಸೌಲಭ್ಯ- ಎಲ್ಲೆಲ್ಲಿ? ಎಷ್ಟು ವೆಚ್ಚ? ಅಂಕಿಅಂಶ
ಬೆಂಗಳೂರು, ಜುಲೈ 25: ಬೆಂಗಳೂರಿನ ಸುತ್ತಲೂ 288 ಕಿಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಅನ್ನು ನಿರ್ಮಿಸಲಾಗುತ್ತಿದೆ. ಈ ರೋಡಿನಲ್ಲಿ ಬರುವ ನಾಲ್ಕು ಆಯಕಟ್ಟಿನ ಸ್ಥಳಗಳಲ್ಲಿ ಡ್ರೋನ್ ಲ್ಯಾಂಡಿಂಗ್ ಸೌಲಭ್ಯವನ್ನು ಒದಗಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜಿಸುತ್ತಿದೆ.
17,000 ಕೋಟಿ ರೂಪಾಯಿ ವೆಚ್ಚದ ಎಸ್‌ಟಿಆರ್‌ಆರ್ ಯೋಜನೆಯು ನಾಲ್ಕು ಹಾಗೂ ಆರು ಪಥಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಅನ್ನು ಹೊಂದಲಿದೆ. ಇದು ಬೆಂಗಳೂರು ಸುತ್ತಲಿನ 12 ಸ್ಯಾಟಲೈಟ್ ಟೌನ್‌ಗಳನ್ನು ಸಂಪರ್ಕಿಸುತ್ತದೆ.

ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ತಟ್ಟೆಕೆರೆ, ಮಾಗಡಿ, ರಾಮನಗರ, ಕನಕಾಡಿ ಪಟ್ಟಣಗಳು ಈ ಯೋಜನೆ ಅಡಿಯಲ್ಲಿ ಬರುತ್ತವೆ.
ವೈದ್ಯಕೀಯ ತುರ್ತು ಪರಿಸ್ಥಿತಿಗಳು, ರಸ್ತೆ ಅಪಘಾತಗಳು ಮತ್ತು ಅಂಗಗಳ ಸಾಗಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ದಾಬಸ್‌ಪೇಟೆ, ಮಾಲೂರು, ಕನಕಪುರ ಮತ್ತು ಬೆಳಗೊಂದಪಲ್ಲಿ (ತಮಿಳುನಾಡು) ಗಳಲ್ಲಿ ಡ್ರೋನ್ ಲ್ಯಾಂಡಿಂಗ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಎನ್‌ಎಚ್‌ಎಐ ಅಧಿಕಾರಿಗಳು ಮನಿಕಂಟ್ರೋಲ್‌ಗೆ ತಿಳಿಸಿದ್ದಾರೆ.
'ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಡ್ರೋನ್ ಲ್ಯಾಂಡಿಂಗ್ ಸೌಲಭ್ಯಗಳನ್ನು ಪಡೆಯುವ ಭಾರತದ ಮೊದಲ ಹೆದ್ದಾರಿಯಾಗಲಿದೆ. ಪ್ರಮುಖ ಸ್ಥಳಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸುವ ಮೂಲಕ, 2035 ಅಥವಾ 2047 ರ ವೇಳೆಗೆ ಡ್ರೋನ್ ಟ್ಯಾಕ್ಸಿಗಳು ನಮ್ಮ ರಸ್ತೆಗಳಲ್ಲಿ ಸಾಮಾನ್ಯವಾಗಲಿವೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ' ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ಹೇಳಿದ್ದಾರೆ.

ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಜೊತೆಗೆ ಈ ಸೌಲಭ್ಯಗಳು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
'ಉದಾಹರಣೆಗೆ, ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಪ್ರಯಾಣಿಕರು ಡ್ರೋನ್ ಟ್ಯಾಕ್ಸಿಯನ್ನು ಬಳಸಿಕೊಂಡು ತಾವು ಗೊತ್ತುಪಡಿಸಿದ ಸ್ಥಳಗಳಲ್ಲಿ ಅನುಕೂಲಕರವಾಗಿ ಇಳಿಯಬಹುದು. ನಂತರ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ಗೆ ಸಂಪರ್ಕ ಹೊಂದಬಹುದು. ಯಾವುದೇ ತೊಂದರೆಯಿಲ್ಲದೆ ಸರಾಗವಾಗಿ ಬೆಂಗಳೂರು ವಿಮಾನ ನಿಲ್ದಾಣ ಅಥವಾ ಇತರ ಸ್ಥಳಗಳನ್ನು ತಲುಪಬಹುದು' ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಮೊದಲ ವಿಭಾಗವು ಡಿಸೆಂಬರ್ 2023 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಉದ್ದಕ್ಕೂ ಕ್ಲೋವರ್ಲೀಫ್ ಛೇದಕಗಳಲ್ಲಿ ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಹೆಲಿಪ್ಯಾಡ್‌ಗಳನ್ನು ಹೊಸಕೋಟೆ ಬಳಿಯ ಕೊಳತ್ತೂರಿನಲ್ಲಿ (ಮೂರು ಹೆಲಿಪ್ಯಾಡ್‌ಗಳು), ರಾಮನಗರ (ಎರಡು ಹೆಲಿಪ್ಯಾಡ್‌ಗಳು), ದಾಬಸ್‌ಪೇಟೆ (ಮೂರು ಹೆಲಿಪ್ಯಾಡ್‌ಗಳು) ಮತ್ತು ಕೃಷ್ಣಗಿರಿಗಳಲ್ಲಿ (ಮೂರು ಹೆಲಿಪ್ಯಾಡ್‌ಗಳು) ಸ್ಥಾಪಿಸಲಾಗುವುದು ಎಂದು ಎನ್‌ಎಚ್‌ಎಐ ನಿರ್ದೇಶಕಿ ಅರ್ಚನಾ ಕುಮಾರ್ ಮನಿಕಂಟ್ರೋಲ್‌ಗೆ ತಿಳಿಸಿದ್ದಾರೆ.
'ಬೆಂಗಳೂರು ವಿಮಾನ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ ರಸ್ತೆ ಸಂಚಾರವನ್ನು ಬೈಪಾಸ್ ಮಾಡುವ ಕಂಪನಿಗಳು ಹೆಲಿ-ಟ್ಯಾಕ್ಸಿಗಳನ್ನು ಈಗಾಗಲೇ ನಡೆಸುತ್ತಿವೆ. ಭವಿಷ್ಯದಲ್ಲಿ ಡ್ರೋನ್ ಟ್ಯಾಕ್ಸಿಗಳಿಗೆ ಇದೇ ರೀತಿಯ ಬೇಡಿಕೆ ಇರಲಿದೆ. ಪ್ರಮುಖ ಕ್ಲೋವರ್ಲೀಫ್ ಇಂಟರ್ಸೆಕ್ಷನ್‌ಗಳಲ್ಲಿನ ಹೆಲಿಪ್ಯಾಡ್‌ಗಳು ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಒದಗಿಸಲಿವೆ' ಎಂದು ಅವರು ಹೇಳಿದ್ದಾರೆ.












Click it and Unblock the Notifications