ಬೆಂಗಳೂರಿನಲ್ಲಿ ಜನವರಿಯಲ್ಲಿ ದಾಖಲಾದ ಹಿಟ್ ಆಂಡ್ ರನ್ ಪ್ರಕರಣಗಳು, ವಿವರ
ಬೆಂಗಳೂರು ನಗರದಲ್ಲಿ ಹಿಟ್ ಅಂಡ್ ರನ್ ಮತ್ತು ಸರಣಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಟ್ರಾಫಿಕ್ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 8: ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾದ ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಪ್ರಮುಖ ಸಮಸ್ಯೆ. ಇಲ್ಲಿ ಸಂಚಾರಿ ನಿಯಮಗಳು ನಿತ್ಯವೂ ಉಲ್ಲಂಘನೆ ಆಗುತ್ತಲೇ ಇವೆ. ಈ ನಿಟ್ಟಿನಲ್ಲಿ ಒಂದೇ ತಿಂಗಳಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ ಇಲ್ಲಿದೆ.
ಬೆಂಗಳೂರು ನಗರದಲ್ಲಿ ಹಿಟ್ ಅಂಡ್ ರನ್ ಮತ್ತು ಸರಣಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಟ್ರಾಫಿಕ್ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬೆಂಗಳೂರು ನಗರದಲ್ಲಿ ಜನವರಿ 2023 ರಲ್ಲಿ 23 ಮಾರಣಾಂತಿಕ ಮತ್ತು 92 ಮಾರಣಾಂತಿಕವಲ್ಲದ ಹಿಟ್ ಮತ್ತು ರನ್ ಪ್ರಕರಣಗಳು ದಾಖಲಾಗಿವೆ.
ಫೆಬ್ರವರಿ 6ರಂದು ನಗರದಲ್ಲಿ ವ್ಯಕ್ತಿಯೊಬ್ಬರು ರಸ್ತೆ ಗುಂಡಿಗೆ ಬಿದ್ದ ಸಾವನ್ನಪ್ಪಿದರು. ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಸವಾರರಿಗೆ ಅತಿವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತರನ್ನು ಮಾಜಿದ್ ಖಾನ್ (39) ಎಂದು ಗುರುತಿಸಲಾಗಿದೆ. ಕಾರು ಅವರ ಕಾಲಿನ ಮೇಲೆ ಹರಿದಿದ್ದರಿಂದ ಮತ್ತೋರ್ವ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ.

ಆರ್‌ವಿ ಕಾಲೇಜು ಬಳಿ ವಿದ್ಯಾರ್ಥಿನಿ ಬಲಿ
ಘಟನೆಯಲ್ಲಿ ಅಪಘಾತಕ್ಕೆ ಕಾರಣನಾದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಇಂತಹ ಪ್ರಕರಣಗಳ ಗಮನಾರ್ಹ ಏರಿಕೆಗೆ ಸಾಕ್ಷಿಯಾಗಿದೆ. ಫೆಬ್ರವರಿ 2 ರಂದು ಮೈಸೂರು ರಸ್ತೆಯ ಆರ್‌ವಿ ಕಾಲೇಜು ಬಳಿ ಶ್ವೇತಾ ಎಂಬ ವಿದ್ಯಾರ್ಥಿನಿಗೆ ಕಾರು ಡಿಕ್ಕಿ ಹೊಡೆದು 50 ಮೀಟರ್ ದೂರದಲ್ಲಿ ಹೋಗಿ ಬಿದ್ದಿದ್ದಳು. ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಇಲ್ಲದ ಕಾರಣ ಕಾರು ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ ಎಂದು ಅಪಘಾತವನ್ನು ಪ್ರತ್ಯಕ್ಷವಾಗಿ ಕಂಡ ನಿವಾಸಿಗಳು ತಿಳಿಸಿದ್ದಾರೆ.

224 ಮಾರಣಾಂತಿಕವಲ್ಲದ ಪ್ರಕರಣ
ಕಳೆದ ವರ್ಷ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಬೆಂಗಳೂರು ನಗರದಲ್ಲಿ 2022ರಲ್ಲಿ 838 ಮಾರಣಾಂತಿಕ ಪ್ರಕರಣಗಳು ಹಾಗೂ 224 ಮಾರಣಾಂತಿಕವಲ್ಲದ ಹಿಟ್ ಮತ್ತು ರನ್ ಪ್ರಕರಣಗಳು ದಾಖಲಾಗಿವೆ. ಇದೇ 2021ಕ್ಕೆ ಹೋಲಿಸಿದರೆ 38.27% ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. 2021 ರಲ್ಲಿ ನಗರದಲ್ಲಿ 162 ಮಾರಣಾಂತಿಕ ಮತ್ತು 562 ಮಾರಣಾಂತಿಕವಲ್ಲದ ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿವೆ. ಮಾರಣಾಂತಿಕವಲ್ಲದ ಹಿಟ್ ಮತ್ತು ರನ್ ಅಪಘಾತಗಳ ಪ್ರಕರಣಗಳಲ್ಲಿ 2021ಕ್ಕೆ ಹೋಲಿಸಿದರೆ 2022ರಲ್ಲಿ 49.11% ರಷ್ಟು ಏರಿಕೆ ಕಂಡಿದೆ.

18ರಿಂದ 22 ವರ್ಷದ ಯುವಕರೇ ಅಧಿಕ
ಸಂಚಾರ ತಜ್ಞ ಎಂಎನ್ ಶ್ರೀಹರಿ ಅವರ ಪ್ರಕಾರ, ಹೆಚ್ಚುತ್ತಿರುವ ಅಪಘಾತಗಳಿಗೆ ಯುವಕರ ಅಜಾಗರೂಕತೆಯ ಚಾಲನೆಯೇ ಕಾರಣ. ಇತ್ತೀಚಿನ ದಿನಗಳಲ್ಲಿ ಯುವಕರು, ವಿಶೇಷವಾಗಿ 18ರಿಂದ 22 ವರ್ಷ ವಯಸ್ಸಿನ ಜನರು ರಸ್ತೆಯಲ್ಲಿ ಚಾಲನೆಯಲ್ಲಿ ಅಜಾಗರೂಕಯಿಂದ ಓಡಿಸುತ್ತಾರೆ. ಟ್ರಾಫಿಕ್ ಪೊಲೀಸರು ಯುವ ವಯಸ್ಕರಿಗೆ ಸುರಕ್ಷಿತ ಚಾಲನೆಯ ಮಹತ್ವದ ಬಗ್ಗೆ ತಿಳಿ ಹೇಳಲು ಹಲವಾರು ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಪ್ರಾರಂಭಿಸಿದ್ದಾರೆ. ಆದರೆ ಇವುಗಳು ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಕಳಪೆ ಮೂಲಸೌಕರ್ಯ ಮತ್ತು ಕಳಪೆ ರಸ್ತೆ ಪರಿಸ್ಥಿತಿಗಳು ಸಹ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ನಂಬರ್ ಪ್ಲೇಟ್ ಮತ್ತು ವಾಹನದ ಮಾದರಿ ಸೆರೆ
ಪೊಲೀಸ್ ಇಲಾಖೆಯು ನಗರದ ವಿವಿಧ ಭಾಗಗಳಲ್ಲಿ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಇದರಿಂದಾಗಿ ನಿಯಮ ಉಲ್ಲಂಘಿಸಿದ ಆರೋಪಿಗಳನ್ನು ಕಂಡುಹಿಡಿಯಲು ಸುಲಭವಾಗಿದೆ. ಇದರಲ್ಲಿ ನಂಬರ್ ಪ್ಲೇಟ್ ಮತ್ತು ವಾಹನದ ಮಾದರಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಸುರಕ್ಷಿತ ಚಾಲನೆಯ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಇಲಾಖೆಯು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications