Bengaluru Rain: ಬೆಂಗಳೂರಿನಲ್ಲಿ ಧಾರಾಕಾರ ಮಳೆ ಶುರು: ರಾತ್ರಿ ಮತ್ತಷ್ಟು ಜೋರು ಮಳೆ!
ಸೆಪ್ಟೆಂಬರ್ ಆರಂಭದಿಂದಲೂ ಬೆಂಗಳೂರಿಗೆ ವರುಣನ ಕೃಪೆ ಸಿಕ್ಕಿದೆ. ಮಂಗಳವಾರ ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿತ್ತು. ಬುಧವಾರ ಮಧ್ಯಾಹ್ನದಿಂದ ಕೂಡ ನಗರದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸಂಜೆ ವೇಳೆಗೆ ಮಳೆ ಬಿರುಸು ಪಡೆದುಕೊಂಡಿದೆ.
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ನೈಋತ್ಯ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಂಗೇರಿ, ಉತ್ತರಹಳ್ಳಿ ರಸ್ತೆ, ಉತ್ತರಹಳ್ಳಿ, ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಕುಮಾರಸ್ವಾಮಿ ಲೇಔಟ್, ಅಂಜನಾಪುರ, ಗೊಟ್ಟಿಗೆರೆ, ಸಿಂಗಸಂದ್ರ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ವರದಿಯಾಗಿದೆ.

ಲಗ್ಗೆರೆ, ರಾಜಾಜಿನಗರ, ವಿಜಯನಗರ, ನಂದಿನಿ ಲೇಔಟ್, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಸಂಜೆ ಮಳೆ ಶುರುವಾಗಿದ್ದು, ರಾತ್ರಿ ಬಿರುಸು ಮಳೆಯನ್ನು ನಿರೀಕ್ಷೆ ಮಾಡಲಾಗಿದೆ. ಕಚೇರಿ, ಶಾಲೆಗಳು ಮುಗಿದು ಮನೆ ಸೇರುವ ಹೊತ್ತಿನಲ್ಲಿ ಮಳೆ ವ್ಯಾಪಕವಾಗಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಹಲವು ರಸ್ತೆಗಳಲ್ಲಿ ನೀರು ನಿಂತ ಕಾರಣ ನಿಧಾನ ಗತಿಯ ಟ್ರಾಫಿಕ್‌ಗೆ ಕಾರಣವಾಗಿದೆ.
ರಾತ್ರಿ ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ
ಬಂಗಾಳಕೊಲ್ಲಿ ಸಮುದ್ರದ ವಾಯವ್ಯ ಮತ್ತು ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ನಗರದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಆಗಸ್ಟ್‌ನಲ್ಲಿ ಅತಿ ಹೆಚ್ಚು ತಾಪಮಾನ ಕಂಡ ಬಳಿಕ ಬೆಂಗಳೂರು ಈಗ ತಂಪಾಗಿದ್ದು, ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಂಗಳವಾರ ಸಂಜೆಯಿಂದ ಬುಧವಾರ ಬೆಳಗ್ಗೆ 11 ಗಂಟೆಯವರೆಗೆ ನಗರದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ 38 ಮಿಮೀ ಮಳೆಯಾಗಿದೆ. ಜ್ಞಾನಭಾರತಿಯಲ್ಲಿ 34 ಮಿಮೀ ಮಳೆ ಸುರಿದಿದೆ. ಉತ್ತರಹಳ್ಳಿ 24 ಮಿಮೀ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 22.3 ಮಿಮೀ, ಹೆಚ್‌ಎಎಲ್‌ನಲ್ಲಿ 21.8 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ಬನ್ನೇರಘಟ್ಟದ ಡೆಕತ್‌ಲಾನ್ ಬಳಿ ಮುಖ್ಯ ರಸ್ತೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ದೇವಸ್ಥಾನಗಳಲ್ಲಿ ಜನ ಸಂದಣಿ ಹೆಚ್ಚಾಗಿದ್ದು, ಮಳೆಯಿಂದ ಪರದಾಡುವಂತಾಗಿದೆ.
ಮೊದಲ ಆರು ದಿನದಲ್ಲೇ ವಾಡಿಕೆಯ ಅರ್ಧದಷ್ಟು ಮಳೆಯಾಗಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಎರಡು ಪಟ್ಟು ಮಳೆಯಾಗುವ ಸಾಧ್ಯತೆ ಕೂಡ ಇದೆ. ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಾಧಾರಣವಾಗಿ 208.3 ಮಿಮೀ ಮಳೆಯಾಗುತ್ತದೆ. ಆದರೆ ಮೊದಲ ಆರು ದಿನಗಳಲ್ಲಿ ನಗರದಲ್ಲಿ 116.1 ಮಿಮೀ ಮಳೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ವಾರದ ವೇಳೆಗೆ ವಾಡಿಕೆ ಮಳೆ ಪ್ರಮಾಣವನ್ನು ಮೀರಲಿದೆ.












Click it and Unblock the Notifications