Bengaluru Rains: ನಾವು ಫುಲ್ ರೆಡಿ ಅನ್ನೋ ಬಿಬಿಎಂಪಿಯದ್ದು ಮತ್ತದೇ ರಾಗ.. ಅದೇ ಹಾಡು
ಬೆಂಗಳೂರು, ಸೆ 1: ಮುಂಗಾರು ಮಳೆ ಕೈ ಕೊಟ್ಟು ಬಿಸಿಲ ತಾಪ ಹೆಚ್ಚಾಗಿದ್ದ ಬೆಂಗಳೂರಿಗೆ ನಿನ್ನೆ (ಆಗಸ್ಟ್ 31) ರಾತ್ರಿ ವರುಣದೇವ ಕೃಪೆ ತೋರಿದ್ದಾನೆ. ನಿನ್ನೆ ರಾತ್ರಿ 9 ರ ಸುಮಾರಿಗೆ ಶುರುವಾದ ಮಳೆಯ ಅಬ್ಬರ ಬೆಳಗಿನ ಜಾವವಾದರೂ ನಿಂತಿರಲಿಲ್ಲ..
ಮಳೆ ಬಂದು ರಾಜಧಾನಿಯನ್ನು ತಂಪು ಮಾಡಿದರೆ, ಮಳೆಯಿಂದ ಆದ ಅನಾಹುತಗಳಿಂದ ಜನ ನಿದ್ದೆಗೆಟ್ಡಿದ್ದಾರೆ. ಬಿಬಿಎಂಪಿ ಕಂಟ್ರೋಲ್ ರೂಮ್ ಗೆ ದೂರುಗಳ ಸರಮಾಲೆಯೇ ಹೋಗಿತ್ತು. ಅದೆಷ್ಟರ ಮಟ್ಟಿಗೆ ಪಾಲಿಕೆ ಸೂಕ್ತ ಪರಿಹಾರ ಕೊಟ್ಟಿದೆಯೋ ಎನ್ನುವ ಮಾಹಿತಿ ಸದ್ಯಕ್ಕಿಲ್ಲ.

ನಿನ್ನೆ ರಾತ್ರಿ 9 ಗಂಟೆಗೆ ಏಕಾಏಕಿ ಶುರುವಾದ ಜೋರು ಮಳೆ ಸತತ ಒಂದೂವರೆ ಗಂಟೆಗಳ ಕಾಲ ಬಿಟ್ಟು ಬಿಡದೇ ಅಬ್ಬರಿಸಿತ್ತು. ಬಳಿಕ ಕೊಂಚ ಅಬ್ಬರವನ್ನ ಕಡಿಮೆ ಮಾಡಿಕೊಂಡ ಮಳೆರಾಯ ರಾತ್ರಿ ಇಡೀ ಸೋನೆ ಮಳೆಯಾಗಿ, ಆಗಾಗ ಜೋರಾಗಿ ಅಬ್ಬರಿಸಿತ್ತು.
ಮಳೆ ಬರೋದಕ್ಕೆ ಶುರುವಾಗುತ್ತಿದ್ದಂತೆಯೇ ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಪದ್ಮನಾಭನಗರ, ಹಬ್ಬಾಳ, ಸಂಪಗಿರಾಮನಗರ, ಗೊರಗುಂಟೆ ಪಾಳ್ಯ, ಆರ್ ಎಂವಿ ಲೇಔಟ್, ಸಹಕಾರ ನಗರ, ಶಾಂತಿನಗರ ಬೊಮ್ಮಸಂದ್ರ ಸೇರಿದಂತೆ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿತ್ತು.
ಬಿಬಿಎಂಪಿ ಸಿಬ್ಬಂದಿಗಳು ನೀರು ಹೊರ ಹಾಕಲು ಮೋಟರ್ ಗಳನ್ನ ಬಳಿಸಿ ನೀರಿನ್ನ ಹೊರ ಹಾಕಲು ಪ್ರಯತ್ನ ಪಡುತ್ತಿದ್ದರೆ ಮನೆಯವರು ಅಯ್ಯೋ ಇದೇನಲ್ಲ ಕರ್ಮ ನಮಗೆ ಅಂತಾ ಮಳೆ ನೀರಿನ ಜೊತೆಗೆ ಮೋರಿ ನೀರನ್ನ ಮನೆಯಿಂದ ಹೊರ ಹಾಕಲು ಹರಸಾಹಸ ಪಡುತ್ತಿದ್ದರು.

ಇನ್ನೂ ಮಳೆಯಿಂದ ಬೆಂಗಳೂರಿನ ಬಹುತೇಕ ರಸ್ತೆಗಳು ಕೆರೆಗಳಂತೆ ಆಗಿದ್ದು, ಶೇಷಾದ್ರಿಪುರಂ ಅಂಡರ್ ಪಾಸ್ ನಲ್ಲಿ ಖಾಸಗಿ ಬಸ್ ಒಂದು ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿತ್ತು. ಇನ್ನು ಭದ್ರಪ್ಪ ಲೇಔಟ್ ನ ರೈಲ್ವೇ ಅಂಡರ್ ಪಾಸ್ ನಲ್ಲಿ ಆಟೋ ಒಂದು ಮುಳುಗಿ ನಿಂತಿತ್ತು. ಜೊತೆಗೆ ಬೆಂಗಳೂರಿನ ನಾನಾ ಕಡೆ ಮರಗಳು ಧರೆಗೆ ಉರುಳಿದ್ದವು.
ಎಂದಿನಂತೆ ಹಲವು ಮನೆಗಳಿಗೆ ನೀರು ನುಗ್ಗಿ ಜನರ ಪಾಡು ಹೇಳ ತೀರದ್ದಾಗಿತ್ತು.. ಇಷ್ಟು ದಿನ ಮಳೆ ಬಂದರೆ ಸಾಕು ಅನ್ನುತಿದ್ದ ಜನ ಈಗ ಬಂದಂತಹ ಒಂದೇ ಒಂದು ಮಳೆಗೆ ಕೈ ಮುಗಿತಿದ್ದಾರೆ. ಮಳೆ ಮಾಡಿರುವ ಆವಾಂತರವು ಸಾಕಪ್ಪಾ ಸಾಕು ಅಂತಿದ್ದಾರೆ. ಅದರೆ ಜೊತೆಗೆ ಬಂದಂತಹ ಒಂದೇ ಒಂದು ಮಳೆಗೆ ನಮ್ಮ ಪರಿಸ್ಥಿತಿ ಈ ತರಹ ಆದರೆ ಇನ್ಮುಂದೆ ನಮ್ಮ ಕತೆ ಏನು?
ಪ್ರತೀ ದಿನ ಮಳೆ ಬಂದರೆ ಏನಪ್ಪ ಮಾಡೋದು ಅಂತ ತಲೆ ಮೇಲೆ ಕೈ ಹೊತ್ತಿದ್ದಾರೆ. ಇಷ್ಟು ದಿನ ಮಳೆಯೇ ಇಲ್ಲ ಅಂತಿದ್ದ ಸಿಲಿಕಾನ್ ಸಿಟಿಗೆ ಒಂದೇ ದಿನದ ಮಳೆ ಅಯ್ಯೋ ಸಾಕಪ್ಪ, ಮಳೆಯ ಸಹವಾಸ ಅನ್ನೋ ಆಗೇ ಆಗಿದೆ.. ಪ್ರತಿಬಾರಿ ಮಳೆ ಬಂದಾಗಲೂ ನಾವು ಫುಲ್ ರೆಡಿ ಅನ್ನೋ ಬಿಬಿಎಂಪಿ ಮಾತ್ರ ಮತ್ತೇದೇ ಹಳೆಯ ಚಾಳಿಯಂತೆ ಬೆಂಗಳೂರಿನ ಮಾನ ಹೋಗುವಂತೆ ಮಾಡುತ್ತಿದ್ದಾರೆ.












Click it and Unblock the Notifications