Bengaluru Weather Alert: ಇಂದು ನಗರಾದ್ಯಂತ ವ್ಯಾಪಕ ಮಳೆ ನಿರೀಕ್ಷೆ, ಸವಾರರು ಗಮನಿಸಿ! ಇಲ್ಲಿದೆ ಮುನ್ಸೂಚನೆ
ಬೆಂಗಳೂರು, ಜೂನ್ 10: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿತ್ಯ ಅಲ್ಲಲ್ಲಿ ಹಗುರ, ತುಂತುರು ಮಳೆ ಆಗುತ್ತಿದೆ. ಕಳೆದ ಎರಡು ದಿನಗಳಿಂದ ಮುಂಗಾರು ಮಳೆ ಚುರುಕಾಗಿದೆ. ಇಂದು ಮಂಗಳವಾರ (ಜೂನ್ 10) ಸಂಜೆ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜೋರು ಮಳೆ ನಿರೀಕ್ಷೆ ಇದೆ. ಮುಂದಿನ ಮೂರರಿಂದ ಐದು ದಿನ ಇದೇ ರೀತಿ ಮಳೆ ಸಂಭವವಿದೆ. ಸೋಮವಾರ ಸಂಜೆ ಸುರಿದ ಮಳೆಗೆ ನಗರದ ವಿವಿಧ ಭಾಗಗಳಲ್ಲಿ ವಾಟರ್‌ಲಾಗಿಂಗ್ ಸಮಸ್ಯೆ ಎದುರಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಯಿತು.
ರಾಜ್ಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮಳೆ ತೀವ್ರತೆ ಹೆಚ್ಚಿರುವ ಕಾರಣಕ್ಕೆ ನಗರದಲ್ಲಿ ಇಂದು ತಾಪಮಾನವು 32ರಿಂದ 30 ಡಿಗ್ರಿ ಸೆಲ್ಸಿಯಸ್‌ಗೆ ಗರಿಷ್ಠ ತಾಪಮಾನ ಕುಸಿಯಲಿದೆ. ಬೆಳಗ್ಗೆಯಿಂದ ಮಬ್ಬು ವಾತವರಣ ಕಂಡು ಬರಲಿದೆ. ಸಂಜೆ ಹೊತ್ತಿಗೆ ವ್ಯಾಪಕ ಮಳೆ ನಿರೀಕ್ಷೆ ಇದೆ. ಆಗ್ನಯ ಬಂಗಾಳಕೊಲ್ಲಿ ಭಾಗದಲ್ಲಿ ಹಾಗೂ ಭೂ ಮೇಲ್ಮೈನಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದ ಪ್ರಭಾವದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.

ಮಳೆಗೆ ವಿವಿಧೆಡೆ ಸಂಚಾರ ಸಮಸ್ಯೆ
ಸೋಮವಾರ ಬೆಂಗಳೂರಿನಲ್ಲಿ ಎಚ್‌ಎಲ್‌ನಲ್ಲಿ ಹೆಚ್ಚು 22.5 ಮಿ.ಮೀ., ಮಾರತ್ತಹಳ್ಳಿ 20.5 ಮಿ.ಮೀ., ಬಾನಸವಾಡಿ ಪೂರ್ವ 19 ಮಿ.ಮೀ., ಬೆಳ್ಳಂದೂರು 16.5 ಮಿ.ಮೀ., ಜಕ್ಕೂರು 13.516.5 ಮಿ.ಮೀ., ಎಚ್‌ಎಸ್‌ಆರ್ ಬಡಾವಣೆ 11.5 16.5 ಮಿ.ಮೀ, ವಿದ್ಯಾರಣ್ಯಪುರ 11 16.5 ಮಿ.ಮೀ. ಮಳೆ ದಾಖಲಾಗಿದೆ. ವಿವಿಧ ಕಡೆಗಳಲ್ಲಿ ಹಗುರ ಮಳೆ ಆಗಿದ್ದು, ಬೆಂಗಳೂರು ಹೊರ ವರ್ತುಲ ರಸ್ತೆಗಳ (ORR) ಬೆಳ್ಳಂದೂರು, ಮಾರತ್ತಹಳ್ಳಿ ಸುತ್ತಮುತ್ತ ಕೆಲವೆಡೆ ರಸ್ತೆ ಮೇಲೆ ಮಳೆ ನೀರು ನಿಂತು ಸಮಸ್ಯೆ ಆಯಿತು. ವಾಹನ ಸಂಚಾರ ನಿಧಾನವಾಗಿದ್ದಲ್ಲದೇ, ಅಲ್ಲಲ್ಲಿ ಟ್ರಾಫಿಕ್ ಜಾಮ್ ಸಹ ಕಂಡು ಬಂತು. ಕಚೇರಿಯಿಂದ ಮನೆ ಹೋಗುವವರು ಮಳೆ ನೆದ್ದು, ಟ್ರಾಫಿಕ್‌ನಲ್ಲಿ ಸಿಲುಕಿ ಕಿರಿ ಕಿರಿ ಅನುಭವಿಸಬೇಕಾಯಿತು. ನಗರದ ಅಸ್ಸಾಯೀ ರಸ್ತೆಯಲ್ಲಿ ಅಡ್ಡವಾಗಿ ಮರ ಧರೆಗೆ ಉರುಳಿ ಬಿದ್ದಿದ್ದು, ಕೆಲ ಕಾಲ ಸಂಚಾರ ತೊಂದರೆ ಆಯಿತು.
ಮುಂದಿನ ಮೂರು ದಿನಗಳು ನಗರದಲ್ಲಿ ತುಂತುರು ಮಳೆ ಬರಲಿದ್ದು, ಇಂದು ಸಂಜೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ನಗರಾದ್ಯಂತ ತಂಪು ಗಾಳಿ ಬೀಸುವಿಕೆ ಹೆಚ್ಚಾಗಿದೆ. ಈ ವಾರ ಪೂರ್ತಿ ನಗರದ ಕನಿಷ್ಠ ತಾಪಮಾನ 20-21 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 30-32 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಲಕ್ಷಣ ಇದೆ.
ಮೂರು ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಮಳೆ: ಐಎಂಡಿ
ಮಂಗಳವಾರ ಮುಂದಿನ ಮೂರು ಗಂಟೆಗಳಲ್ಲಿ ಬೀದರ್, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಲಘು ಮಳೆ ಆಗಲಿದೆ. ಭೂ ಮೇಲ್ಮೈ ಮೇಲಿನ ಬಿರುಗಾಳಿ (ವೈಪರೀತ್ಯ) ಕಾರಣದಿಂದ ಈ ಭಾಗದಲ್ಲಿ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಕೇಂದ್ರವು ಮಂಗಳವಾರ ಬೆಳಗ್ಗೆ ಮುನ್ಸೂಚನೆ ನೀಡಿದೆ.












Click it and Unblock the Notifications