Bengaluru Rain: ನಗರದಲ್ಲಿ ಇಂದು ಮಧ್ಯಾಹ್ನವರೆಗೆ 36ಮಿಮೀ. ಮಳೆ ದಾಖಲು, ಮೇ 10ರವರೆಗೆ ಮಳೆ ಸಾಧ್ಯತೆ
ಬೆಂಗಳೂರು, ಮೇ 06: ಬದಲಾದ ಹವಾಮಾನ ವೈಪರಿತ್ಯಗಳಿಂದ ಬರುತ್ತಿರುವ ಮಳೆ ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನವು ಮುಂದುವರೆಯಿತು. ವಿವಿಧ ಪ್ರದೇಶಗಳಲ್ಲಿ ಸುಮಾರು 30ನಿಮಿಷಗಳಿಗೂ ಹೆಚ್ಚು ಕಾಲ ಆರ್ಭಟಿಸಿ ತಣ್ಣಗಾಯಿತು. ಸಂಜೆ ಇಲ್ಲವೇ ರಾತ್ರಿ ಮತ್ತೆ ಮಳೆ ಬರಲಿದೆ. ಮೇ 10ರವರೆಗೆ ನಗರದಲ್ಲಿ ಹೀಗೆ ಮಳೆ ಬರಲಿದೆ ಎಂಬ ಮುನ್ಸೂಚನೆ ದೊರೆತಿದೆ.
ಬಂಗಾಳಕೊಲ್ಲಿಯಲ್ಲಿ ಹೆಚ್ಚಾಗಿರುವ ಸೈಕ್ಲೋನ್ ತೀವ್ರತೆಯ ಪ್ರಭಾವ ಬೆಂಗಳೂರಿನಲ್ಲಾಗಿದೆ. ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವಾರಣ ಇತ್ತು. ಮಧ್ಯಾಹ್ನ ದಿಢೀರನೇ ಶುರುವಾದ ಮಳೆ ಸುಮಾರು ಅರ್ಧ ಗಂಟೆ ಸುರಿಯಿತು. ವಿದ್ಯಾಪೀಠದಲ್ಲಿ ಅಧಿಕ 36ಮಿ.ಮೀ, ಬೊಮ್ಮನಹಳ್ಳಿಯಲ್ಲಿ 16 ಮಿ.ಮೀ, ಸಿಂಗಸಂದ್ರ (1) 15 ಮಿ.ಮೀ, ಸಂಪಂಗಿರಾಮನಗರದಲ್ಲಿ 12ಮಿ.ಮೀ, ಮಳೆ ಬಿದ್ದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ಮಾಡಿದೆ.

ಅಷ್ಟೇ ಅಲ್ಲದೇ ವಿಜಯನಗರ, ಹಂಪಿನಗರ, ನಾಯಂಡಹಳ್ಳಿ, ಚಂದ್ರಾಬಡಾವಣೆ, ರಾಜರಾಜಿನಗರ, ಹೆಬ್ಬಾಳ, ಜಯನಗರ, ಬಸವನಗುಡಿ, ಮೇಜೆಸ್ಟಿಕ್ ಸುತ್ತಮುತ್ತ, ಚಾಮರಾಜಪೇಟೆ, ಮೈಸೂರು ರಸ್ತೆಗಳಲ್ಲಿ ಕೆಲ ಹೊತ್ತು ಧಾರಾಕಾರವಾಗಿ ಮಳೆ ಬಿದ್ದಿದೆ. ಉಳಿದೆಡೆ ಹಗುರದಿಂದ ಸಾಧಾರಣವಾಗಿ ಮಳೆ ದಾಖಲಾಗಿದೆ.
ಏಕಾಎಕಿ ಬಂದ ಮಳೆಗೆ ಕೆಲವು ರಸ್ತೆಗಳಲ್ಲಿ ಮೇಲೆ ಒಳಚರಂಡಿ ನೀರು ಉಕ್ಕಿ ಹರಿಯಿತು. ಲಾಲ್ ಬಾಗ್, ಜೆಸಿ ರಸ್ತೆ, ಕೆ.ಆರ್ ಮಾರುಕಟ್ಟೆ, ಬಿಬಿಎಂಪಿ ವೃತ್ತ, ಕೆಜಿ ರಸ್ತೆ, ಚಾಲುಕ್ತ ರಸ್ತೆ, ಕೆ.ಆರ್. ಮಾರುಕಟ್ಟೆ ಬಿಜಿಎಸ್ ಮೇಲ್ಸೇತುವೆ ಸೇರಿದಂತೆ ವಿವಿಧೆಡೆ ಸಂಚಾರ ದಟ್ಟಣೆ ಕಂಡು ಬಂತು. ಓಕಳಿಪುರಂ ಸೇರಿದಂತೆ ಕೆಲವು ರಸ್ತೆ ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು. ರಸ್ತೆ ಬದಿ ವ್ಯಾಪ್ತಿಗಳಿಗೂ ಮಳೆರಾಯ ತೊಂದರೆ ನೀಡಿದ್ದಾನೆ.
ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. pic.twitter.com/638BPsWmkc
— Karnataka State Natural Disaster Monitoring Centre (@KarnatakaSNDMC) May 6, 2023
ಬೆಂಗಳೂರಿಗೆ ಮೇ 10ರವರೆಗೆ ಮಳೆ: ಬೊಮ್ಮನಹಳ್ಳಿಗೆ ಹೆಚ್ಚು
ಶನಿವಾರ ಮಧ್ಯಾಹ್ನ ಸುರಿದ ತಂಪೆರೆದ ಮಳೆ ಇಂದು ಸಂಜೆ ನಂತರ ಮತ್ತೆ ಮಳೆ ಆಗಮಿಸುವ ಸಾಧ್ಯತೆ ಇದ್ದು, ಅದು ತಡರಾತ್ರಿವರೆಗೂ ಮುಂದುವರಿಯಬಹುದೆಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಅಂದರೆ ಮೇ 10ರವರೆಗೆ ಇದೇ ರೀತಿ ವ್ಯಾಪಕವಾಗಿ ಮಳೆ ಬರಲಿದೆ. ನಿತ್ಯವು ತಂಪು ಮತ್ತು ಮಬ್ಬು ವಾತಾವರಣ ಕಂಡು ಬರಲಿದ್ದು, ಬಿಸಿಲಿನ ದರ್ಶನವೇ ಅಪರೂಪ ಎಂಬಂತಾಗಲಿದೆ. ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬಂದರೆ, ಉಳಿದೆಡೆ ಜೋರಾಗಿ ಸುರಿಯಲಿದೆ. ಅಲ್ಲಲ್ಲಿ ಸೋನೆ ಮಳೆ ಸಹ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಸಾಧಾರಣ ಮಳೆ ಬಂದರೆ, ಬೊಮ್ಮನಹಳ್ಳಿ ವ್ಯಾಪ್ತಿಯ ಬಡಾವಣೆಗಳಿಗೆ ಜೋರಾಗಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಮುಂದಿನ ಈ ನಾಲ್ಕು ದಿನದ ಅವಧಿಯಲ್ಲಿ ನಗರದಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21-22 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.












Click it and Unblock the Notifications