Bengaluru Rain: ಬೆಂಗಳೂರಿಗೆ ಭರಣಿ ಮಳೆಯ ಸಿಂಚನ: ಹಲವು ಭಾಗಗಳಲ್ಲಿ ಉತ್ತಮ ಮಳೆ
ಅಂತೂ ಇಂತೂ ಮೇ ತಿಂಗಳ ಮೊದಲ ದಿನವೇ ಬೆಂಗಳೂರಿಗೆ ಮಳೆ ದರ್ಶನ ಕೊಟ್ಟಿದೆ. ಮೇ 5 ರ ಬಳಿಕ ನಗರದಲ್ಲಿ ಮಳೆಯಾಗುವ ಮುನ್ಸೂಚನೆ ಇತ್ತಾದರೂ, ಅಂದುಕೊಂಡಿದ್ದಕ್ಕಿಂತ ಮೊದಲೇ ನಗರದ ಹಲವು ಕಡೆಗಳಲ್ಲಿ ಮಳೆಯ ಸಿಂಚನವಾಗಿದೆ.
ಬುಧವಾರ ರಾತ್ರಿ ರಾಜಾಜಿನಗರ, ಚಿಕ್ಕಬಾಣಾವರ, ಡಾ. ರಾಜ್‌ಕುಮಾರ್ ಸಮಾಧಿ, ಗೊರಗುಂಟೆಪಾಳ್ಯ ಮತ್ತು ಔಟರ್ ರಿಂಗ್ ರೋಡ್‌ನ ಹಲವು ಭಾಗಗಳಲ್ಲಿ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕೂಡ ಉತ್ತಮ ಮಳೆಯಾಗಿದೆ.

ಬಿರು ಬೇಸಿಗೆಯಿಂದ ಕಂಗಾಲಾಗಿರುವ ಬೆಂಗಳೂರು ನಗರ ಮಳೆಗಾಗಿ ಹಪಹಪಿಸುತ್ತಿದೆ. ಒಂದೆರಡು ಹದ ಮಳೆಯಾದರೆ ಸಾಕು ನಗರದ ತಾಪಮಾನ ಇಳಿಕೆಯಾಗಲಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. 1983ರ ಬಳಿಕ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿ ಬೆಂಗಳೂರು ಮಳೆಯನ್ನು ಕಂಡಿಲ್ಲ. ಮೇ ಮೊದಲ ದಿನವೇ ಮಳೆಯಾಗಿರುವುದು ಜನರಲ್ಲಿ ಸ್ವಲ್ಪ ಆಶಾಭಾವನೆ ಮೂಡಿಸಿದೆ.
ಬೆಂಗಳೂರು ಉತ್ತರ, ವಾಯುವ್ಯ ಮತ್ತು ನೈಋತ್ಯ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಾಧಾರಣ ಮಳೆಯಾಗುವ ಸಾಧ್ಯದೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು ಬುಧವಾರ ರಾತ್ರಿ ಮಳೆ ಸುರಿಯುವ ಸಾಧ್ಯತೆ ಹೆಚ್ಚಾಗಿದೆ.
ಹಲವು ಕಡೆಗಳಲ್ಲಿ ಮಳೆ
ಬುಧವಾರ ಧಾರವಾಡ, ಬೆಳಗಾವಿ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು ಜನರಲ್ಲಿ ಖುಷಿ ತಂದಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಮತ್ತು ಗೋಪಾಲಸ್ವಾಮಿ ಬೆಟ್ಟ, ಮದ್ದೂರು ವಲಯದ ವ್ಯಾಪ್ತಿಯಲ್ಲಿ ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ಬುಧವಾರ ಸಂಜೆ ಆರರ ಸಮಯದಲ್ಲಿ ಗುಡುಗು ಸಿಡಿಲು ಮಿಂಚಿನೊಂದಿಗೆ ಮಳೆಯಾಯಿತು. ಕಾಡಂಚಿನ ಗ್ರಾಮಗಳಾದ ಹಂಗಳ, ಗೋಪಾಲಪುರ, ದೇವರಹಳ್ಳಿ, ಬೇರಾಂಬಾಡಿ , ಕಲ್ಲಿಗೌಡನಹಳ್ಳಿ ಮೊದಲಾದ ಗ್ರಾಮಗಳಿಗೆ ಉತ್ತಮ ಮಳೆಯಾಗಿದೆ.












Click it and Unblock the Notifications