ಬೆಂಗಳೂರು ಮಳೆ: ಮನೆ ಬಾಗಿಲು ಮುರಿದು ರಕ್ಷಿಸಿ ಎಂದಿದ್ಯಾಕೆ ಡಿ.ಕೆ ಶಿವಕುಮಾರ್!
ಬೆಂಗಳೂರಿನಲ್ಲಿ ಬುಧವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಬೆಂಗಳೂರಿನ ಹಲವು ಪ್ರದೇಶದಲ್ಲಿನ ರಸ್ತೆಗಳು ಕೆರೆಗಳಂತೆ ಬದಲಾಗಿವೆ. ಈ ನಡುವೆ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಕೆಲವರು ಮನೆಯಲ್ಲೇ ಉಳಿದಿದ್ದು, ಹೊರಗೆ ಬರುವುದಕ್ಕೆ ಹಠ ಹಿಡಿದಿದ್ದಾರೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಳೆ ಅವಾಂತರ ಕಡಿಮೆಯಾಗ್ತಿಲ್ಲ. ಕಳೆದ ಹತ್ತು ದಿನಗಳಿಂದ ಬಿಟ್ಟು ಬಿಡದಂಗೆ ಮಳೆಯಾಗ್ತಿದೆ. ಈ ಕಾರಣಕ್ಕಾಗಿ ಬೆಂಗಳೂರಿನ ಜನ ಹೈರಾಣಾಗಿದ್ದಾರೆ. ಮನೆಯಿಂದ ಹೊರಗೂ ಹೋಗಲಾಗದೆ, ಮನೆಯಲ್ಲೂ ಇರಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಪ್ರವಾಹ ಪರಿಸ್ಥಿತಿಯೇ ನಿರ್ಮಾಣವಾಗಿದೆ.

ಇಲ್ಲಿನ ಅಂದಾಜು 20 ಫ್ಲ್ಯಾಟ್‌ಗಳ ಮಾಲೀಕರು ಮನೆಯ ಒಳಗೆ ಬೀಗ ಹಾಕಿಕೊಂಡು ಒಳಗೆ ಇದ್ದಾರೆ. ಇಲ್ಲಿಂದ ಹೊರ ಬರುವುದಕ್ಕೆ ಅವರು ಒಪ್ಪುತ್ತಿಲ್ಲ. ಹೀಗಾಗಿ, ಈ ಮನೆಗಳ ಬಾಗಿಲುಗಳನ್ನು ಮುರಿದು ರಕ್ಷಣಾ ಕಾರ್ಯಾಚರಣೆ ಮುಂದುವರಿಸುವಂತೆ ಡಿ.ಕೆ ಶಿವಕುಮಾರ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಮನೆಗಳಲ್ಲಿ ಇರುವವರು ನೀರು, ವಿದ್ಯುತ್ ಹಾಗೂ ಆಹಾರ ಇಲ್ಲದೆ ಮನೆಗಳಿಗೆ ಬೀಗ ಹಾಕಿಕೊಂಡಿದ್ದಾರೆ. ಮಾಲೀಕರಿಗೆ ಆರೋಗ್ಯ ಸಮಸ್ಯೆ ಎದುರಾಗುವ ಆತಂಕದಿಂದ ಸ್ಥಳೀಯರು ಹಾಗೂ ಪೊಲೀಸರ ನೆರವು ಪಡೆದು ಮನೆಗಳ ಬಾಗಿಲು ಒಡೆದು ರಕ್ಷಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನು ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಭಾಗದಲ್ಲಿ ಈಗಾಗಲೇ ಶೇ.95ರಷ್ಟು ಜನರನ್ನು ಸ್ಥಳಾಂತರಿಸಲಾಗಿದೆ. ಆದರೆ, ಇನ್ನೂ ಕೆಲವರು ಸ್ಥಳದಿಂದ ಹೊರಕ್ಕೆ ಬರುವುದಕ್ಕೆ ನಿರಾಕರಿಸುತ್ತಿದ್ದಾರೆ. ಮ್ಯಾನೇಜ್‌ಮೆಂಟ್‌ನೊಂದಿಗಿನ ಮಾತುಕತೆ ನಡೆಸಲಾಗಿದ್ದು, ತುರ್ತು ಕಾಮಗಾರಿಗಳ ಹಿನ್ನೆಲೆಯಲ್ಲಿ ಈ ಅಪಾರ್ಟ್ಮೆಂಟ್ ಅನ್ನು ಬಿಬಿಎಂಪಿ ಸ್ವಾಧೀನಪಡಿಸಿಕೊಂಡಿದೆ ಎನ್ನಲಾಗಿದೆ.
ಮನೆಗಳಲ್ಲಿ ಇರುವವರನ್ನು ಇಲ್ಲಿಯೇ ಬಿಡಲು ಆಗುವುದಿಲ್ಲ. ಯಾವುದೇ ವ್ಯವಸ್ಥೆ ಇಲ್ಲ. ಆಹಾರ ಹಾಗೂ ಮೂಲಸೌಕರ್ಯ ವ್ಯವಸ್ಥೆ ಇಲ್ಲ. ಈ ರೀತಿಯ ಸಂದರ್ಭದಲ್ಲಿ ಹೆಚ್ಚು ಕಡಿಮೆಯಾದರೆ ನಾವು ಜವಾಬ್ದಾರರಾಗುತ್ತೇವೆ. ಈ ಕಾರಣಕ್ಕೆ ಅವರ ಮನವೊಲಿಸಿ ಹತ್ತಿರದಲ್ಲಿಯೇ ಹೋಟೆಲ್ ವ್ಯವಸ್ಥೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅಲ್ಲದೇ ಇಲ್ಲಿ ಅನೇಕರು ವಯಸ್ಸಾದವರು ಮನೆ ಬಿಟ್ಟು ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯ ಬಗ್ಗೆ ಭಾವನಾತ್ಮಕವಾಗಿ ಯೋಚನೆ ಮಾಡುತ್ತಿದ್ದಾರೆ. ಅಂತಹವರಿಗೆ ಒಂದು ವಾರದ ಮಟ್ಟಿಗೆ ಹತ್ತಿರದಲ್ಲಿಯೇ ವಸತಿ ವ್ಯವಸ್ಥೆ ಮಾಡ್ತೀವಿ. ಇದು ನಮ್ಮ ಜವಾಬ್ದಾರಿ. ಇಲ್ಲಿನ ನಿವಾಸಿಗಳ ಸಂಘದವರೂ ಸಹಕಾರ ನೀಡುತ್ತಿದ್ದಾರೆ. ತೊಂದರೆಗೆ ಒಳಗಾದವರಿಗೆ ಅವರ ಮನೆಯಂತೆಯೇ ಸೌಲಭ್ಯ ಕಲ್ಪಿಸಿಕೊಡಲಾಗುವುದು. ನಿವಾಸಿಗಳು ಮುಜುಗರಕ್ಕೆ ಒಳಗಾಗದೆ ಅಧಿಕಾರಿಗಳ ಬಳಿ ಕೇಳಿ ಸೌಲಭ್ಯ ಪಡೆದುಕೊಳ್ಳಬೇಕು ಎಂದೂ ಇದೇ ಸಂದರ್ಭದಲ್ಲಿ ಹೇಳಿದರು.
ಬೆಂಗಳೂರಿನ ಹಾಗೂ ಯಲಹಂಕ ಇತಿಹಾಸದಲ್ಲಿಯೇ ದಾಖಲೆಯ ಮಳೆಯಾಗಿದೆ. ಕಳೆದ 115- 120 ವರ್ಷಗಳ ನಂತರ ಈ ರೀತಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಮಗ್ಯಾರಿಗೂ ಇಷ್ಟೊಂದು ಜಾಸ್ತಿ ಮಳೆ ಆಗುತ್ತೆ ಎನ್ನುವ ಕಲ್ಪನೆಯೂ ಇರಲಿಲ್ಲ. ಎಲ್ಲೆಲ್ಲಿ ನೀರು ನುಗ್ಗುತ್ತಿದೆ ಹಾಗೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದಕ್ಕೆ ಅವಕಾಶ ಇದೆ ಎನ್ನುವುದನ್ನು ಗುರುತಿಸುತ್ತಿದ್ದೇವೆ ಎಂದು ಹೇಳಿದರು.
ಅಕ್ಕಪಕ್ಕದಲ್ಲಿ ಕೆರೆಗಳ ಪಕ್ಕ ನೀರು ಹರಿಯಲು ಮತ್ತು ನಿಂತುಕೊಳ್ಳಲು ಜಾಗವಿತ್ತು, ಈಗ ಜಾಗ ಕಡಿಮೆಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಈ ರೀತಿಯ ಅವಘಡ ಬೆಂಗಳೂರಿನಲ್ಲಿ ಮಾತ್ರವಲ್ಲ, ಮುಂಬೈ ಸೇರಿದಂತೆ ಅನೇಕ ಪ್ರಮುಖ ನಗರಗಳಲ್ಲಿ ಆಗಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿಯೂ ತೊಂದರೆ ಆಗಿದೆ. ಈ ನಿಟ್ಟಿನಲ್ಲಿ ನಾವು ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.












Click it and Unblock the Notifications