Bengaluru Rain: ಪ್ರವಾಹ, ಮಳೆ ಆವಾಂತರ ತಪ್ಪಿಸಲು ಹೊಸ ತಂತ್ರಜ್ಞಾನ ಅಳವಡಿಕೆ
ಬೆಂಗಳೂರು, ಮೇ 10: ಬೆಂಗಳೂರು ನಗರದಲ್ಲಿ ಮಳೆಯಿಂದಾಗಿ ಘಟಿಸುವ ಪ್ರವಾಹ, ಇನ್ನಿತರ ತುರ್ತು ಸಂದರ್ಭಗಳ ನಿರ್ವಹಣೆಗಾಗಿ ರಾಜಕಾಲುವೆಗಳಲ್ಲಿ ಹೊಸ ತಂತ್ರಜ್ಞಾನದ ಅಳವಡಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಹಿತಿ ನೀಡಿದೆ.
ರಾಜಕಾಲುವೆಗಳಲ್ಲಿ ಹೊಸ ತಂತ್ರಜ್ಞಾನದ ಬಳಸಿಕೊಂಡು 124 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕ (Water Level Sensor)ಗಳನ್ನು KSNDMC ವತಿಯಿಂದ ಅಳವಡಿಸಲಾಗಿದೆ. ಇನ್ನೂ ಪ್ರತಿಯೊಂದು ಸೆನ್ಸಾರ್ ಯಂತ್ರಕ್ಕೂ ಸೋಲಾರ್ ಅಳವಡಿಕೆ ಮಾಡಲಾಗಿದೆ.

ಈ ತಂತ್ರಜ್ಞಾನ ಅಳವಡಿಕೆಯಿಂದ ನಿತ್ಯ ಅಂತರ್ಜಾಲದ ಮೂಲಕ ಕೆಎಸ್‌ಎನ್‌ಡಿಎಂಸಿ ನಿಯಂತ್ರಣ ಕೊಠಡಿಗೆ ಕೂಡಲೇ ಮಾಹಿತಿ ತಿಳಿಯಲಿದೆ. ಅವರು ಪಾಲಿಕೆಯ ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೋಲ್ ಸೆಂಟರ್ (ICCC)ಗೆ ಮಾಹಿತಿ ರವಾನೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆನ್ಸಾರ್ ಅಳವಡಿಸಿರುವ ಕಡೆ ರಾಜಕಾಲುವೆಯಲ್ಲಿ ಹರಿಯುವ ನೀರಿನ ಮಟ್ಟವನ್ನು ಬಣ್ಣದ ಆಧಾರದಲ್ಲಿ ತಿಳಿಯಬಹುದಾಗಿದೆ. ಅದರಂತೆ ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಗುರುತಿಸಲಾಗುತ್ತದೆ. ಹಸಿರು ಹಾಗೂ ನೀಲಿ ಬಣ್ಣವಿದ್ದರೆ ಯಾವುದೇ ಅಪಾಯವಿರುವುದಿಲ್ಲ.
ಕೆಂಪು ಬಣ್ಣವಿದ್ದರೆ ಅಪಾಯ ಎಂದರ್ಥ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂಬ ಮಾಹಿತಿ ತಿಳಿಯಲಿದೆ. ಆ ಮಾಹಿತಿಗೆ ಅನುಗುಣವಾಗಿ ಪ್ರವಾಹ ಉಂಟಾಗುವ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಬೇರೆಡೆ ತೆರಳುವಂತೆ ಸೂಚನೆ ನೀಡಬಹುದು. ಇದರಿಂದ ಪ್ರವಾಹದಿಂದಾಗುವ ಅನಾಗುತಗಳನ್ನು ತಪ್ಪಿಸಬಹುದಾಗಿದೆ.

ಅರ್ಧ ಕೀಮಿಗೂ ಉದ್ದದ ರಾಜಕಾಲುವೆ
ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 860 ಕಿ.ಮೀ ಉದ್ದದ ರಾಜಕಾಲುವೆ ಇದೆ. ಈ ಪೈಕಿ 581 ಕಿ.ಮೀ ಉದ್ದ ರಾಜಕಾಲುವೆಯನ್ನು ಆರ್.ಸಿ.ಸಿ ತಡೆಗೋಡೆಯಿಂದ ನಿರ್ಮಾಣ ಮಾಡಲಾಗಿದೆ. 199 ಕಿ.ಮೀ ಉದ್ದ ರಾಜಕಾಲುವೆಯ ಆರ್.ಸಿ.ಸಿ ತಡೆಗೋಡೆ ಕಾಮಗಾರಿಯು ಪ್ರಗತಿಯಲ್ಲಿದೆ. ಇನ್ನುಳಿದ 80 ಕಿ.ಮೀ ರಾಜಕಾಲುವೆಯು ಕಚ್ಚಾ ಡ್ರೈನ್ ಒಳಗೊಂಡಿರುತ್ತದೆ.
ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯ ಪ್ರಗತಿ
ನಗರದಲ್ಲಿ ಪಕ್ಕಾ ಡ್ರೈನ್ 581 ಕಿ.ಮೀ ಉದ್ದದ ಆರ್.ಸಿ.ಸಿ ತಡೆಗೋಡೆ ನಿರ್ಮಿಸಿರುವ ರಾಜಕಾಲುವೆಯ ಭಾಗದಲ್ಲಿ ಹೂಳೆತ್ತುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ. ಅದಲ್ಲದೆ ತೆಗೆಯುವಂತಹ ಹೂಳನ್ನು ಕೂಡಲೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ.
ಸದ್ಯ ಮಳೆಗಾಲ ಆರಂಭವಾಗಿದ್ದು, ಸುರಿಯುವ ಮಳೆಗೆ ಬಿಬಿಎಂಪಿಯು ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮಳೆಗಾಲದಲ್ಲಿ ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರವಾಹ ಸ್ಥಳಗಳಲ್ಲಿ ಶಾಸ್ವತ ಪರಿಹಾರ ಕ್ರಮ
ಬೆಂಗಳೂರಿನ 74 ಕಡೆ ಪ್ರವಾಹ ಪೀಡಿತ ಪ್ರದೇಶಗಳಿದ್ದು, ಸದರಿ ಸ್ಥಳಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆಗಾಲದ ಹಿನ್ನೆಲೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ರಾಜಕಾಲುವೆ, ದ್ವಿತೀಯ ರಾಜಕಾಲುವೆ, ಚರಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜೊತೆಗೆ ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳ ಬಳಿ ಇರುವ ತ್ಯಾಜ್ಯವನ್ನು ತೆರವುಗೊಳಿಸಿ ರಸ್ತೆ ಮೇಲೆ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ರಸ್ತೆ, ಉಪನಗರ ರಸ್ತೆಗಳಲ್ಲಿ ಒಳಚರಂಡಿ ಸ್ವಚ್ಛಗೊಳಿಸಲಾಗಿದೆ. ಅನುಪಯುಕ್ತ ಕಟ್ಟಡ ತ್ಯಾಜ್ಯ ತೆರವು ಮಾಡಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications