ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಭೆ
ಬೆಂಗಳೂರು, ಜೂನ್ 25: ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಗೆ ಆಗ್ರಹಿಸಿ ಒತ್ತಾಯಿಸಿದ ಪ್ರತಿಭಟನಾಕಾರರು ವಿಧಾನಸೌಧದ ಅಂಗಳಕ್ಕೆ ನುಗ್ಗಿದ್ದರು. ಇದನ್ನು ಭದ್ರತಾ ವೈಫಲ್ಯ ಎಂದು ಪರಿಗಣಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ನಗರದಲ್ಲಿ ತಡರಾತ್ರಿ ಡಿಸಿಪಿ, ಎಡಿಸಿಪಿ ಸೇರಿ ಇನ್ನೂ ಹಲವು ಪ್ರಮುಖ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಅಲೋಕ್ ಕುಮಾರ್ ಅವರು ಭದ್ರತಾ ನಿರ್ಲಕ್ಷ್ಯದ ಬಗ್ಗೆ ಗರಂ ಆಗಿದ್ದಾರೆ ಎನ್ನಲಾಗಿದೆ.
ಮೀಸಲಾತಿ ಹೋರಾಟಗಾರರು ನಗರ ಪ್ರವೇಶಿಸುತ್ತಿದ್ದಾರೆ ಎಂದು ಮೊದಲೇ ಮಾಹಿತಿ ಇದ್ದರೂ ಸಹ, ಅವರನ್ನು ಫ್ರೀಡಂ ಪಾರ್ಕ್ ಬಳಿ ತಡೆಯದೆ, ವಿಧಾನಸೌಧದ ಬಳಿಗೆ ಬಿಟ್ಟ ಕಾರಣ ವಿಧಾನಸೌಧದ ಬಳಿ ಹಲವು ಗೊಂದಲುಗಳು ಉಂಟಾಗಿವೆ.

ಅಷ್ಟೆ ಅಲ್ಲದೆ, ಮೆಜಿಸ್ಟಿಕ್ ನಿಂದ ಕೆ.ಆರ್.ವೃತ್ತದ ವರೆಗೆ ಸಂಚಾರ ದಟ್ಟಣೆ ಉಂಟಾಗಿ ಗಂಟೆಗಟ್ಟಲೆ ವಾಹನ ಸವಾರರು ಪರದಾಡುವಂತಾಯಿತು.
ವಿಧಾನಸೌಧದ ಬಳಿ ಪ್ರತಿಭಟನಾಕಾರರು ಮುತ್ತಿಗೆಗೆ ಬಂದಾಗ ಅಲ್ಲಿ ಕೇವಲ 50 ಮಂದಿ ಮಾತ್ರ ಪೊಲೀಸರು ಇದ್ದರು, ಇವರು ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನನು ತಡೆಯಲು ವಿಫಲರಾದರು ಎನ್ನಲಾಗಿದೆ.
ಪ್ರತಿಭಟನೆ ಮತ್ತು ಸಂಚಾರ ದಟ್ಟಣೆಯಿಂದಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸಹ ಕಾರು ಬಿಟ್ಟು, ಮೆಟ್ರೋದಲ್ಲಿ ಪ್ರಯಾಣಿಸಬೇಕಾಯಿತು, ಇವರೊಬ್ಬರೇ ಅಲ್ಲದೆ, ವಿಧಾನಸೌಧಕ್ಕೆ ಬಂದ ಹಲವು ಪ್ರಮುಖ ಅಧಿಕಾರಿಗಳು, ರಾಜಕಾರಣಿಗಳಿಗೂ ಪ್ರತಿಭಟನೆಯ ಬಿಸಿ ತಾಗಿತು, ಹಾಗಾಗಿ ಅಲೋಕ್ ಕುಮಾರ್ ಅವರನ್ನು ಸಿಎಂ ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆಯಷ್ಟೆ ರೈತ ರೇವಣ್ಣ ಕುಮಾರ್ ಎಂಬಾತ ಭದ್ರತೆಯ ನಡುವೆಯೂ ವಿಧಾನಸೌಧದ ಒಳಕ್ಕೆ ಆಯುಧ ಒಯ್ದು ಆತ್ಮಹತ್ಯೆಗೆ ಯತ್ನಿಸಿದ್ದ, ಅದಾದ ಒಂದೇ ದಿನಕ್ಕೆ ಮತ್ತೆ ವಿಧಾನಸೌಧದ ಬಳಿಯೇ ಭದ್ರತಾ ಲೋಪ ಕಂಡು ಬಂದಿರುವುದು ಅಲೋಕ್ ಕುಮಾರ್ ಅವರ ಸಿಟ್ಟಿಗೆ ಕಾರಣವಾಗಿದೆ.












Click it and Unblock the Notifications