ಬಸ್ ಸಿಗಲ್ಲ ಎಂದು ಕಂಡ ಕಂಡ ಕ್ಯಾಬ್ ಏರಿದ್ರೇ ಅಷ್ಟೇ!
ಬೆಂಗಳೂರು, ಅಕ್ಟೋಬರ್: 22: ರಾತ್ರಿ ಕಚೇರಿ ಬಿಡುವುದು ಲೇಟಾಗಿದೆ. ನೀವು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಸ್ ಗಾಗಿ ಕಾಯುತ್ತಿದ್ದೀರಿ. ಇನ್ನು ಬಸ್ ಸಿಗಲ್ಲ ಎಂದು ಮನದಟ್ಟು ಮಾಡಿಕೊಂಡು ಅನಿವಾರ್ಯವಾಗಿ ಕ್ಯಾಬ್ ಗೊ ಅಥವಾ ಟಿಟಿಗೊ ಕೈ ಮಾಡುತ್ತೀರಿ. ಕತೆ ಇಷ್ಟಕ್ಕೆ ಮುಗಿಯಲ್ಲ. ಗಾಡಿ ಏರಿದ ನಿಮ್ಮ ಬಳಿ ಇದ್ದ ಮೊಬೈಲ್, ಹಣ ಎಲ್ಲವನ್ನು ದೋಚಿ ಕೆಳಕ್ಕೆ ನೂಕಲಾಗುವುದು!
ರಾತ್ರಿ ತಡವಾಗಿ ಕಚೇರಿಯಿಂದ ಆಗಮಿಸುವವರು ಕೆಲವೊಂದು ಸಾರಿ ಡ್ರಾಪ್ ಗಾಗಿ ಕ್ಯಾಬ್ ಗಳನ್ನು ಏರಬೇಕಾಗುತ್ತದೆ. ಆದರೆ ಉದ್ದೇಶ ಪೂರ್ವಕವಾಗಿ ಒಂಟಿ ಪ್ರಯಾಣಿಕರನ್ನೇ ಗಾಡಿಗೆ ಹತ್ತಿಸಿಕೊಂಡು ಅವರನ್ನು ದೋಚಿ ಪರಾರಿಯಾಗುತ್ತಿದ್ದ ಚಾಲಾಕಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.[ಫೇಸ್ ಬುಕ್ ಬಳಸಿ ಜೀವಂತ ಅಂಗಾಂಗ ಸಾಗಿಸಿದ ಬೆಂಗಳೂರು ಪೊಲೀಸರು]

ದರೋಡೆ ಮಾಡುತ್ತಿದ್ದ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋನಪ್ಪನ ಅಗ್ರಹಾರ ನಿವಾಸಿ ಪದ್ಮಂಜಯ (20), ಚೇತನ್ (22), ಬಿಟಿಎಂ ಲೇಔಟ್‌ನ ಮಂಜುನಾಥ (24), ಹೊಸೂರು ರಸ್ತೆಯ ಲೋಕನಾಥ್ (23), ಜಗಜೀವನ್ರಾಂನಗರದ ಶ್ರೀನಿವಾಸ್ (24), ಸಿಂಗಸಂದ್ರದ ಪ್ರಕಾಶ್(22) ಹಾಗೂ ಜಿಗಣಿಯ ಎಡ್ವಿನ್(21) ಬಂಧಿತ ದರೋಡೆಕೋರರು.
ಬಂಧಿತರಿಂದ 2 ಕಾರು ಮತ್ತು 4 ಬೈಕ್ ವಶ ಪಡಿಸಿಕೊಳ್ಳಲಾಗಿದೆ. 13 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆಗ್ನೇಯ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಮಾಹಿತಿ ನೀಡಿದ್ದಾರೆ.[ಯಲ್ಲಮ್ಮ ಟ್ಯಾಟೋ ಹಾಕಿಸಿಕೊಂಡ ಆಸ್ಟ್ರೇಲಿಯಾ ಪ್ರಜೆ]
ಸಿಕ್ಕಿಬಿದ್ದಿದ್ದು ಹೇಗೆ?
ಅಕ್ಟೋಬರ್ 20ರಂದು ರಾತ್ರಿಸಿಂಗಸಂದ್ರದ ಕೀಸ್ ಹೋಟೆಲ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಕಾರನ್ನು ಪರಿಶಿಲನೆಗೆ ಒಳಪಡಿಸಲಾಗಿದೆ. ಈ ವೇಳೆ ಕಾರಿನಲ್ಲಿ ಮಾರಕಾಸ್ತ್ರಗಳು ಸಿಕ್ಕಿವೆ. ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಂದೊಂದೆ ಪ್ರಕರಣಗಳು ಬೆಳಕಿಗೆ ಬಂದಿವೆ.












Click it and Unblock the Notifications