Bengaluru Pink Line Metro: ಸೆಪ್ಟಂಬರ್ ಗೆ 7.5 ಕಿಮೀ ಲೈನ್ ಓಪನ್ ಡೌಟು! ಇನ್ನೆಷ್ಟು ದಿನ ಕಾಯಬೇಕು?
ಬೆಂಗಳೂರು: ನಮ್ಮ ಮೆಟ್ರೋಗೆ ನೂತನ ಮಾರ್ಗಕ್ಕೆ ದೊರೆಯಬೇಕಿದ್ದ ಅಂತಿಮ ಅನುಮೋದನೆಗಳು ಬಾಕಿ ಉಳಿದಿರುವ ಕಾರಣದಿಂದಾಗಿ 7.5 ಕಿ.ಮೀ ಎತ್ತರದ ಪಿಂಕ್ ಲೈನ್ ಮಾರ್ಗವು ಸೆಪ್ಟೆಂಬರ್‍ಗೆ ತೆರೆಯುವುದು ಅನುಮಾನ. ಕಾಳೇನ ಅಗ್ರಹಾರ- ತಾವರೆಕೆರೆ ಗುಲಾಬಿ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರು ಇನ್ನಷ್ಟು ದಿನ ಕಾಯಬೇಕಿದೆ.
ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ರಾಜ್ಯ ಸರ್ಕಾರದ ಸೂಚನೆ ಬಳಿಕವೂ ಹೊಸ ಮಾರ್ಗಗಳನ್ನು ತೆರೆಯುವುದು ವಿಳಂಬವಾಗುತ್ತಿದೆ. ಮಾರ್ಗದ ಕೆಲಸಗಳು ಪೂರ್ಣಗೊಂಡರೂ ಸಹಿತ ರೈಲ್ವೆ ಮಂಡಳಿಗೆ, ರೈಲ್ವೆ ಸುರಕ್ಷತಾ ಆಯುಕ್ತರಿಂದ ಅಂತಿಮ ಒಪ್ಪಿಗೆ ಸಿಗಬೇಕಿದೆ. ಸೆಪ್ಟೆಂಬರ್ 7 ರಂದು ರೈಲ್ವೆ ಮಂಡಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅರ್ಜಿ ಸಲ್ಲಿಸಿದೆ. ಸದ್ಯ ರೈಲ್ವೆ 'ರೋಲಿಂಗ್ ಸ್ಟಾಕ್' ಅನುಮೋದನೆ ನೀಡಬೇಕು.

ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ಮೊದಲು ರೈಲ್ವೆ ಮಂಡಳಿ ಮಾತ್ರವಲ್ಲದೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದಲೂ (CMRS) ಶಾಸನಬದ್ಧ ಅನುಮತಿ ದೊರೆಯಬೇಕು. ಇದೆಲ್ಲ ಪ್ರಕ್ರಿಯೆ ಆಗುತ್ತಿದ್ದಂತೆ ಸೂಕ್ತ ದಿನದಂದು ಹೊಸ ಮಾರ್ಗವನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆ ಮತ್ತಷ್ಟು ವಿಳಂವಾಗುತ್ತಿದೆ ಎನ್ನಲಾಗಿದೆ. ಈ ಹಿಂದೆ ಮೇ ತಿಂಗಳಲ್ಲಿ 7.5 ಕಿಮೀ ಪಿಂಕ್ ಲೈನ್ ಕಾರಿಡಾರ್ ತೆರೆಯಲು ಪ್ಲ್ಯಾನ್ ಮಾಡಲಾಗಿತ್ತು. ನಂತರ ಅದು ಆಗಸ್ಟ್ 15ಕ್ಕೆ, ಬಳಿಕ ಸೆಪ್ಟೆಂಬರ್‍ಗೆ ಮುಂದೂಡಿಕೆ ಆಯಿತು. ಇದೀಗ ಮತ್ತೆ ಗಡುವು ವಿಸ್ತರಣೆ ಆಗಿದೆ.
ಈ ಪ್ರಕ್ರಿಯೆ ಹೇಗಿರುತ್ತದೆ?
ರೈಲ್ವೆ ಮಂಡಳಿಯಿಂದ ಮೆಟ್ರೋ ಬೋಗಿಗಳಿಗೆ ಸಂಬಂಧಿಸಿದಂತೆ ಒಪ್ಪಿಗೆ ಪಡೆದ ಬಳಿಕ ಮೆಟ್ರೋ ನಿಗಮವು ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕ (ISA) ನೀಡುವ ಸಿಗ್ನಲಿಂಗ್ ವರದಿಯನ್ನು CMRS ಗೆ ಸಲ್ಲಿಸಬೇಕು. ಸುರಕ್ಷತಾ ಆಯುಕ್ತರು ಅಗತ್ಯ ದಾಖಲೆ ಪರಿಶೀಲಿಸಿ, ಕಾರಿಡಾರ್‌ನ ಪರಿಶೀಲನೆಗೆ ದಿನಾಂಕ ನಿಗದಿಪಡಿಸುತ್ತಾರೆ. ತದನಂತರ ಈ ಸುರಕ್ಷತಾ ಆಯುಕ್ತರು ಗರಿಷ್ಠ ಎರಡು ವಾರಗಳಲ್ಲಿ ಪರಿಶೀಲಿಸಿ ಅಂತಿಮ ಅನುಮೋದನೆ ನೀಡುತ್ತಾರೆ. ಬಳಿಕವೇ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿ ಆಗಲಿದೆ.
ಅಕ್ಟೋಬರ್ ಅಂತ್ಯಕ್ಕೆ ಪಿಂಕ್ ಲೈನ್ ಓಪನ್?
ಸದ್ಯದ ಪರಿಸ್ಥಿತಿ ನೋಡಿದರೆ ಅಕ್ಟೋಬರ್ ಅಂತ್ಯದ ಹೊತ್ತಿಗೆ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಅಲ್ಲಿಯವರೆಗಿನ ಸಮಯದಲ್ಲಿ ಶಾಸನಬದ್ಧ ಎಲ್ಲ ಅನುಮೋದನೆಗಳು ದೊರೆಯಲಿವೆ ಎನ್ನಲಾಗಿದೆ. ಇತ್ತ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಯೊಬ್ಬರು ಇದೆಲ್ಲ ಅನುಮೋದನೆ ಆಗುವವರೆಗೂ ನಿಗಮದಿಂದ ಅಧಿಕೃತ ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವುದಿಲ್ಲ. ಈವರೆಗೆ ಯಾವೊಂದು ದಿನಾಂಕ, ತಿಂಗಳು ಗೊತ್ತು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಮಾರ್ಗ ಪರಿಶೀಲನೆ
ನಗರದಲ್ಲಿ ಮೆಟ್ರೋ ಕಾಮಗಾರಿ, ಹೊಸ ಮಾರ್ಗಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಮೆಟ್ರೋ ಅಧಿಕಾರಿಗಳ ಜೊತೆ ಈ ಹಿಂದೆ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 2ರಂದು ಪಿಂಕ್ ಲೈನ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರವೇ ಎಲ್ಲ ಅನುಮೋದನೆ ದೊರೆಯಬೇಕಿದೆ. ರಾಜ್ಯ ಸರ್ಕಾರ ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗ ತೆರೆಯಲು ಸಿದ್ಧವಿದೆ. ಆದರೆ ಕೇಂದ್ರ ಸರ್ಕಾರದಿಂದ ದಿನಾಂಕ ನಿಗದಿ ಆಗಬೇಕು ಎಂದಿದ್ದರು.
ಈ ಮೊದಲು ಮೇ ತಿಂಗಳಲ್ಲಿ ಸದರಿ ಕಾಲೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ಒಟ್ಟು 21.3 ಕಿಲೋ ಮೀಟರ್ ಮಾರ್ಗದಲ್ಲಿ ಸುಮಾರು 13.8 ಕಿ.ಮೀ. ಟನಲ್ ಮೂಲಕ (ಭೂಗತ ಮಾರ್ಗ) ರೈಲು ಸಾಗಲಿದೆ. ಈ ಮಾರ್ಗವನ್ನು 2026ರ ಡಿಸೆಂಬರ್‌ಗೆ ತೆರೆಯಲು, ಅದಕ್ಕು ಮುನ್ನ ಮೇ ತಿಂಗಳಲ್ಲಿ 7.5 ಕಿ.ಮೀ ಎಲೆವೆಟೆಡ್ ಕಾರಿಡಾರ್ ತೆರೆಯಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಇದ್ಯಾವುದು ಅಂದುಕೊಂಡಂತಾಗಿಲ್ಲ. ಭೂಗತ ಮಾರ್ಗ ತೆರೆಯುವ ಗಡುವು 2027ಕ್ಕೆ ಮುಂದೂಡಿಕೆ ಆಗಿದೆ.


Click it and Unblock the Notifications
