ಬೆಂಗಳೂರಲ್ಲಿ ಅ.3 ರಿಂದ ಹೊಸ ತ್ಯಾಜ್ಯ ನಿರ್ವಹಣಾ ಹೊಸ ಪ್ಲ್ಯಾನ್ ಜಾರಿ, ಏನಿದು ಯೋಜನೆ?
ಬೆಂಗಳೂರು: ನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ (SWM) ವಿಭಾಗದ ಅಧಿಕಾರಿಗಳು ಬ್ಲಾಕ್‌ವಾರು ಆಟೋ ಟಿಪ್ಪರ್ ಮೈಕ್ರೋ ಪ್ಲಾನ್, ಪೌರಕಾರ್ಮಿಕರ ಬೀದಿ ಮ್ಯಾಪಿಂಗ್ ಹಾಗೂ ಬಲ್ಕ್ ವೇಸ್ಟ್ ಜನರೇಟರ್‌ಗಳ (BWG) ಗುರುತಿಸುವಿಕೆ ಮತ್ತು ನಿರ್ವಹಣೆಗಾಗಿ ಮೈಕ್ರೋ ಪ್ಲಾನ್ ಸಿದ್ಧಪಡಿಸಿದ್ದಾರೆ. ಇದೇ ಅಕ್ಟೋಬರ್ 3 ರಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಿದ್ದಾರೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.
ಪಾಲಿಕೆ ವ್ಯಾಪ್ತಿಯ ಏಳು ವಿಭಾಗಗಳಿಗೆ ಪ್ರತ್ಯೇಕ ಮೈಕ್ರೋ ಪ್ಲಾನ್ ಸಿದ್ಧಪಡಿಸಲಾಗಿದೆ. ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ರಸ್ತೆ ಸ್ವಚ್ಛತೆ ಹಾಗೂ ಬಲ್ಕ್ ತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸುವುದು ಇದರ ಉದ್ದೇಶವಾಗಿದೆ ಎಂದರು.

ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್
ಮೈಕ್ರೋ ಪ್ಲಾನ್ ಸಿದ್ಧಪಡಿಸುವಾಗ ಪ್ರತಿ ಪ್ರದೇಶದಲ್ಲಿರುವ ಬ್ಲಾಕ್‌ಗಳು, ಮನೆಗಳು, ವಾಣಿಜ್ಯ ಅಂಗಡಿಗಳು ಮತ್ತು ಸಂಸ್ಥೆಗಳು, ಜನಸಂಖ್ಯೆ, ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಮತ್ತು ವಿಧ, ಪೌರಕಾರ್ಮಿಕರ ಸಂಖ್ಯೆ, ಆಟೋ ಟಿಪ್ಪರ್‌ಗಳ ಸಂಖ್ಯೆ ಮತ್ತು ಮಾರ್ಗಗಳು, ಕಾಂಪ್ಯಾಕ್ಟರ್‌ಗಳು, ಮಿನಿ ಟ್ರಾನ್ಸ್‌ಫರ್ ಸ್ಟೇಷನ್‌ಗಳು (MTS), ಬಲ್ಕ್ ವೇಸ್ಟ್ ಜನರೇಟರ್‌ಗಳು (BWG), ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು, ಉದ್ಯಾನವನಗಳು, ಬಸ್ ನಿಲ್ದಾಣಗಳು, ಆಟದ ಮೈದಾನಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಬ್ಲಾಕ್‌ಸ್ಪಾಟ್‌ಗಳು ಹಾಗೂ ಹೆಚ್ಚಿನ ಸಾಂದ್ರತೆಯ ವಸತಿ ಪ್ರದೇಶಗಳು ಸೇರಿದಂತೆ ವಿವಿಧ ಅಂಶ ಪರಿಗಣಿಸಲಾಗಿದೆ.
ಮೈಕ್ರೋ ಪ್ಲಾನ್‌ನಲ್ಲಿವೆ ಮೂರು ಅಂಶಗಳು
* ಬ್ಲಾಕ್‌ವಾರು ಆಟೋ ಟಿಪ್ಪರ್ ಮೈಕ್ರೋ ಪ್ಲಾನಿಂಗ್
ಮನೆಗಳ ಸಂಖ್ಯೆ, ರಸ್ತೆ ವ್ಯವಸ್ಥೆ, ತ್ಯಾಜ್ಯ ಸಂಗ್ರಹಣೆಯ ಅಗತ್ಯತೆ ಹಾಗೂ ಮಾರ್ಗವನ್ನು ಪೂರ್ಣಗೊಳಿಸಲು ಬೇಕಾಗುವ ಸಮಯವನ್ನು ಆಧರಿಸಿ ಪ್ರತಿ ಆಟೋ ಟಿಪ್ಪರ್‌ಗೆ ಸುಮಾರು 750ರಿಂದ 1,000 ಮನೆಗಳನ್ನು ಮ್ಯಾಪ್ ಮಾಡಲಾಗುತ್ತದೆ. ಪ್ರತಿ ಆಟೋ ಟಿಪ್ಪರ್‌ಗೆ ನಿರ್ದಿಷ್ಟ ರಸ್ತೆ, ಬ್ಲಾಕ್ ಮತ್ತು ಮನೆಗಳನ್ನು ಒಳಗೊಂಡ ನಿಗದಿತ ಮಾರ್ಗವನ್ನು ನೀಡಲಾಗುತ್ತದೆ. ಇದರಿಂದ ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ ವ್ಯವಸ್ಥಿತವಾಗಿ ನಡೆಯಲು ಸಹಾಯವಾಗಲಿದೆ.
ಕ್ಷೇತ್ರಮಟ್ಟದಲ್ಲಿ ಮಾರ್ಷಲ್‌ಗಳು ಮತ್ತು JHIಗಳು ಹಾಗೂ ವಿಭಾಗಮಟ್ಟದಲ್ಲಿ AGMs ಮೇಲ್ವಿಚಾರಣೆ ನಡೆಸಲಿದ್ದು, ತ್ಯಾಜ್ಯ ಸಂಗ್ರಹಣೆಯ ಕಾರ್ಯದಲ್ಲಿ ಜವಾಬ್ದಾರಿತನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
* ಪೌರಕಾರ್ಮಿಕರ ಬೀದಿ ಮ್ಯಾಪಿಂಗ್, ಸ್ವಚ್ಛತಾ ಮೈಕ್ರೋ ಪ್ಲಾನಿಂಗ್
ಪಾಲಿಕೆ ವ್ಯಾಪ್ತಿಯ ಎಲ್ಲಾ ಏಳು ವಿಭಾಗಗಳಲ್ಲಿ ಬೀದಿ-ವಾರು ಪೌರಕಾರ್ಮಿಕರ ಮೈಕ್ರೋ ಪ್ಲಾನ್ ಸಿದ್ಧಪಡಿಸಲಾಗಿದೆ. ರಸ್ತೆಗಳನ್ನು ಪ್ರಮುಖ ರಸ್ತೆಗಳು, ಮಧ್ಯಂತರ ರಸ್ತೆಗಳು ಹಾಗೂ ವಾರ್ಡ್/ಸಣ್ಣ ರಸ್ತೆಗಳು ಎಂದು ವಿಂಗಡಿಸಿ, ಪ್ರತಿ ರಸ್ತೆಗೆ ಅಗತ್ಯವಿರುವ ಪೌರಕಾರ್ಮಿಕರ ಸಂಖ್ಯೆಯನ್ನು ಗುರುತಿಸಲಾಗಿದೆ ಎಂದರು.
ಇನ್ನೂ ಪ್ರತಿ ಪೌರಕಾರ್ಮಿಕರಿಗೆ ನಿರ್ದಿಷ್ಟ ರಸ್ತೆಗಳನ್ನು ನಿಗದಿಪಡಿಸಲಾಗಿದೆ. ಅವರ ಸ್ವಚ್ಛತಾ ಕಾರ್ಯವನ್ನು ದಿನವಾರು -ಸೋಮವಾರದಿಂದ ಭಾನುವಾರದವರೆಗೆ ಕಾರ್ಯಾಚರಣೆಯ ಅಗತ್ಯಕ್ಕೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಂಗ್ರಹವಾಗುವ ತ್ಯಾಜ್ಯದ ರಾಶಿಗಳ ಸ್ಥಳಗಳನ್ನು ಸಹ ನಿಗದಿತ ಆಟೋ ಟಿಪ್ಪರ್‌ಗಳಿಗೆ ಮ್ಯಾಪ್ ಮಾಡಲಾಗಿದೆ. ಇದರಿಂದ ತ್ಯಾಜ್ಯ ಸಮಯಕ್ಕೆ ಸರಿಯಾಗಿ ತೆರವುಗೊಳಿಸಲು, ಸಾಗಣೆಗೆ ಸಹಾಯವಾಗುತ್ತದೆ.
* ಬಲ್ಕ್ ವೇಸ್ಟ್ ಜನರೇಟರ್‌ಗಳ ನಿರ್ವಹಣೆ
ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಬಲ್ಕ್ ವೇಸ್ಟ್ ಜನರೇಟರ್‌ಗಳನ್ನು (BWG) ಸೂಕ್ತ ಹಾಗೂ ಅಧಿಕೃತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾಣಿಜ್ಯ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳು, ಸಂಸ್ಥೆಗಳು ಹಾಗೂ ಇತರೆ BWGಗಳಿಂದ ಉತ್ಪತ್ತಿಯಾಗುವ ಬಲ್ಕ್ ತ್ಯಾಜ್ಯ ಮೂಲದಲ್ಲಿಯೇ ವಿಂಗಡಿಸಿ, ಪ್ರತ್ಯೇಕವಾಗಿ ಸಂಗ್ರಹಿಸಿ ಹಾಗೂ ಸೂಕ್ತ ರೀತಿಯಲ್ಲಿ ಸಂಸ್ಕರಣೆ/ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಗುರುತಿಸಲಾದ BWGಗಳನ್ನು ಅಧಿಕೃತ ಬಲ್ಕ್ ವೇಸ್ಟ್ ಸಂಗ್ರಹಕಾರರು/ವೆಂಡರ್‌ಗಳೊಂದಿಗೆ ಸಂಪರ್ಕಿಸಲಾಗುತ್ತಿದೆ. ಇದರಿಂದ ಬಲ್ಕ್ ತ್ಯಾಜ್ಯವನ್ನು ನಿಯಮಾನುಸಾರ ಸಂಗ್ರಹಿಸಿ ಸಾಗಿಸಲು ಸಾಧ್ಯವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
BWGಗಳು ತಮ್ಮ ಆವರಣದಲ್ಲಿಯೇ In-situ Processing ವ್ಯವಸ್ಥೆ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದ ಹೊರಗೆ ಸಾಗಿಸಬೇಕಾದ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.
ಅನ್ವಯವಾಗುವ BWGಗಳ CPCB ನೋಂದಣಿ ಮತ್ತು ನಿಯಮಾನುಸರಣೆಯನ್ನೂ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಕ್ಟೋಬರ್ 01 ರಂತೆ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 1,299 ಬಲ್ಕ್ ವೇಸ್ಟ್ ಜನರೇಟರ್, 48 In-situ, 249 MOU, 182 CPCB ನೋಂದಣಿ ಆಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
