ಬೆಂ-ಮೈ ಆರು ಪಥದ ರಸ್ತೆ : ಅಧ್ಯಯನ ವರದಿಯಲ್ಲೇನಿದೆ?
ಬೆಂಗಳೂರು, ಫೆ. 25 : ಬಹುನಿರೀಕ್ಷಿತ ಬೆಂಗಳೂರು-ಮೈಸೂರು ನಡುವಿನ ಆರು ಪಥದ ರಸ್ತೆ ಕಾಮಗಾರಿಯ ಬಗ್ಗೆ ಅಧ್ಯಯನ ನಡೆಸಿರುವ ಖಾಸಗಿ ಸಂಸ್ಥೆ ಲೋಕೋಪಯೋಗಿ ಇಲಾಖೆಗೆ ತನ್ನ ವರದಿ ಸಲ್ಲಿಸಿದೆ. ಈ ಯೋಜನೆಗೆ ಸುಮಾರು 3 ಸಾವಿರ ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಆರು ಪಥದ ರಸ್ತೆ ಬಗ್ಗೆ ಅಧ್ಯಯನ ನಡೆಸಿರುವ ಸಿಕಾನ್ ಕನ್ಸ್‌ಲ್‌ಟೆಂಟ್ ಸಂಸ್ಥೆ ಲೋಕೋಪಯೋಗಿ ಇಲಾಖೆಗೆ ವರದಿ ಸಲ್ಲಿಕೆ ಮಾಡಿದೆ. ಇದು ರಾಷ್ಟ್ರೀಯ ಹೆದ್ದಾರಿ ಯೋಜನೆಯಾದ ಕಾರಣ, ವರದಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಕೆಯಾಗಿ, ಒಪ್ಪಿಗೆ ದೊರೆತ ಬಳಿಕ ಟೆಂಡರ್ ಕರೆಯಲಾಗುತ್ತದೆ.

ಬೆಂಗಳೂರು-ಮೈಸೂರು ನಡುವೆ ಆರು ಪಥದ ರಸ್ತೆಯನ್ನು ನಿರ್ಮಾಣ ಮಾಡುವ ಯೋಜನೆಗೆ ಸುಮಾರು 3 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ರಸ್ತೆ ವಿಸ್ತರಣೆ ಸಾಧ್ಯವಿಲ್ಲದ ರಾಮನಗರ, ಬಿಡದಿ, ಚನ್ನಪಟ್ಟಣ, ಮಂಡ್ಯ ಮುಂತಾದ ಕಡೆ ಬೈಪಾಸ್ ನಿರ್ಮಾಣ ಮಾಡಲು ವರದಿ ಸಲಹೆ ನೀಡಿದೆ. [ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?]
ವರದಿಯಲ್ಲೇನಿದೆ? : ಬೆಂಗಳೂರು-ಮೈಸೂರು ನಡುವೆ 2013ರ ಸಮೀಕ್ಷೆ ಪ್ರಕಾರ ಪ್ರತಿದಿನ 70,917 ವಾಹನಗಳು ಸಂಚರಿಸುತ್ತಿವೆ. 2030ರವೇಳೆಗೆ ಇದು ಒಂದು ಲಕ್ಷವನ್ನು ದಾಟುವ ಅಂದಾಜಿದೆ. ಆದ್ದರಿಂದ, ಆರು ಪಥದ ರಸ್ತೆ ನಿರ್ಮಾಣ ಮಾಡುವುದು ಸೂಕ್ತ ಎಂದು ವರದಿ ಹೇಳಿದೆ. [ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ]
ಬೆಂಗಳೂರಿನ ಜ್ಞಾನಭಾರತಿ ಜಂಕ್ಷನ್‌ನಿಂದ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಬಹುದಾಗಿದ್ದು, ರಸ್ತೆ ವಿಸ್ತರಣೆ ಸಾಧ್ಯವಿಲ್ಲದ ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಸುಮಾರು 50 ಕಿ.ಮೀ ಉದ್ದದ ಬೈಪಾಸ್ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಲಾಗಿದೆ.
ಮಂಡ್ಯದಲ್ಲಿ ಫ್ಲೈಓವರ್ ನಿರ್ಮಾಣ ಮಾಡುವ ಪ್ರಸ್ತಾವನೆ ಹಿಂದೆ ಕೇಳಿಬಂದಿತ್ತು. ಫ್ಲೈಓವರ್ ನಿರ್ಮಾಣಕ್ಕಿಂತ ಬೈಪಾಸ್ ನಿರ್ಮಾಣದ ಕಾಮಗಾರಿಗೆ ವೆಚ್ಚ ಕಡಿಮೆಯಾಗುತ್ತದೆ ಎಂಬ ಹಿನ್ನಲೆಯಲ್ಲಿ ಬೈಪಾಸ್ ನಿರ್ಮಾಣ ಮಾಡುವಂತೆ ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications