ಬೆಂಗಳೂರು ಮೌಂಟ್ ಕಾರ್ಮೆಲ್ ಕನ್ನಡೋತ್ಸವಕ್ಕೆ ಕಲಾ ಸ್ಪರ್ಶ
ಬೆಂಗಳೂರು, ಡಿಸೆಂಬರ್, 07: ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸೋಮವಾರ ಎಲ್ಲೆಲ್ಲೂ ಕನ್ನಡದ ಕಂಪು, ಹಳದಿ ಮತ್ತು ಕೆಂಪು ರಂಗಿನಲ್ಲಿ ಇಡೀ ಕಾಲೇಜು ಸಂಭ್ರಮಿಸುತ್ತಿತ್ತು. ವಿದ್ಯಾರ್ಥಿನಿಯರು ಪಕ್ಕಾ ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚುತ್ತಿದ್ದರು. ಸದಾ ಆಂಗ್ಲ ಭಾಷೆಯ ಗುಂಗಿನಲ್ಲೇ ಇರುವ ಕಾಲೇಜು ಸೋಮವಾರ ಕನ್ನಡ ಮಯವಾಗಿತ್ತು.
ಹೌದು, ಮೌಂಟ್ ಕಾರ್ಮೆಲ್ ಕಾಲೇಜಿನ 'ಕನ್ನಡೋತ್ಸವ' ಸಂಭ್ರಮದಲ್ಲಿ ಕಂಡು ಬಂದ ದೃಶ್ಯಗಳಿವು. ಯಕ್ಷಗಾನ, ನೃತ್ಯ, ಕಿರುನಾಟಕ, ನಾಡಗೀತೆ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ವಿದ್ಯಾರ್ಥಿನಿಯರು ಪ್ರದರ್ಶನ ಮಾಡಿದ ಸಮುದ್ರ ಮಂಥನ ಯಕ್ಷಗಾನ, ಕೊಡ,,, ಕೊಡ,,, ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ನೃತ್ಯ ಮಾಡಿದ ಬಗೆ, ಕನ್ನಡದ ಬಗ್ಗೆ ಪ್ರೀತಿ ಇಟ್ಟುಕೊಂಡು ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಪಾಲಕರು ಹಿರಿಯ ಕವಿಗಳ, ಸಾಹಿತಿಗಳ ಚಿಂತನೆಯನ್ನು ಮೆಲುಕು ಹಾಕಿದರು.[ಬೆಂಗಳೂರಿನ ಐಟಿ ಕಂಪನಿಯಲ್ಲಿ ಮೊಳಗಿದ ಕನ್ನಡ ಕಹಳೆ]
ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಅಪರ್ಣಾ, ಕನ್ನಡ ವಿಭಾಗದ ದಾಕ್ಷಾಯಿಣಿ, ಡಾ. ರವೀಶ್ ಹಾಜರಿದ್ದರು. ಕೇವಲ ಕನ್ನಡ ವಿಭಾಗದ ವಿದ್ಯಾರ್ಥಿಗಳು ಮಾತ್ರವಲ್ಲದೇ ಇತರ ವಿಭಾಗದ ಹಾಜರಿದ್ದು ಕಾರ್ಯಕ್ರಮದ ಸಂಭ್ರಮಕ್ಕೆ ಸಾಕ್ಷಿಯಾದರು.

ಸಮುದ್ರ ಮಂಥನ
ಯಕ್ಷಗಾನದ ಸಾಂಪ್ರದಾಯಿಕ ತೆಂಕು ಮತ್ತು ಬಡಗು ಎರಡು ತಿಟ್ಟನ್ನು(ವಿಭಾಗ) ಬಳಸಿಕೊಂಡು ವಿದ್ಯಾರ್ಥಿನಿಯರು ಅರ್ಧ ಗಂಟೆ ಕಾಲ ರಂಜಿಸಿದರು. ಸಮುದ್ರ ಮಂಥನ ಮಾಡುವ ದೇವತೆಗಳ ಪಾತ್ರದಲ್ಲಿ ಬಡಗು ತಿಟ್ಟಿನ ವೇಷಧಾರಿಗಳು ರಂಜಿಸಿದರೆ, ತೆಂಕು ತಿಟ್ಟಿನ ವೇಷಧಾರಿಗಳು ರಾಕ್ಷಸರ ಪಾತ್ರದಲ್ಲಿ ಗಮನ ಸೆಳೆದರು.

ಸಮುದ್ರ ಮಂಥನದ ಕತೆಯೇನು?
ಅಮೃತವನ್ನು ಪರಿಶೋಧ ಮಾಡ ಹೊರಟ ದೇವತೆಗಳಿಗೆ, ರಾಕ್ಷಸರ ಸಹಕಾರವೂ ಬೇಕಾಗುತ್ತದೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನು ಬಳಸಿ ಸಮುದ್ರ ಮಂಥನ ಮಾಡಿದಾಗ ಹಾಲಾಹಲ ಎದ್ದು ಬಂತು. ಇದರಿಂದ ಆತಂಕಕಕ್ಕೆ ಒಳಗಾದವರು ಶಿವನ ಮೊರೆ ಹೋದಾಗ ಆತ ಬಂದು ಹಾಲಾಹಲ ಸೇವಿಸುತ್ತಾನೆ.

20 ವಿದ್ಯಾರ್ಥಿನಿಯರ ತಿಂಗಳ ಶ್ರಮ
20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಿಂಗಳಿಗಿಂತ ಅಧಿಕಾಲ ಯಕ್ಷಗಾನ ತರಬೇತಿಯನ್ನು ಪಡೆದು ರಂಗದ ಮೇಲೆ ಅಭಿನಯಿಸಿದರು. ಇಲ್ಲಿ ಹಿಮ್ಮೆಳಕ್ಕೆ ತಂತ್ರಜ್ಞಾನದ ನೆರವು ಪಡೆದುಕೊಳ್ಳಲಾಗಿತ್ತು.

ಉತ್ತರ ಕರ್ನಾಟಕ ಸೊಗಡು
'ಏನ್ ಕೊಡ ಏನು ಕೊಡವ್ವ ಹುಬ್ಬಳ್ಳಿಮಠ, ಏನು ಚಂದುಳ್ಳಿ ಕೊಡವ್ವ, ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳೆಯುವ, ಕೊಡ ಕಂಚುದಲ್ಲ ತಾಮ್ರದಲ್ಲ..... ಹಾಡಿಗೆ ನೃತ್ಯ ಮಾಡಿದ ವಿದ್ಯಾರ್ಥಿನಿಯರು ಕರ್ನಾಟಕದ ಗ್ರಾಮೀಣ ಭಾಗವನ್ನು ನಮ್ಮ ಮುಂದೆ ತಂದಿಟ್ಟರು.

ನಾಡಗೀತೆ
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು. ಇಡೀ ಸಭಾಂಗಣವೇ ಎದ್ದು ನಿಂತು ನಾಡಗೀತೆಗೆ ಗೌರವ ಅರ್ಪಣೆ ಮಾಡಿತು.












Click it and Unblock the Notifications