Namma Metro: 10ನೇ ರೈಲು ಆಗಮನ, ಹಳದಿ ಮಾರ್ಗದಲ್ಲಿ 5 ನಿಮಿಷಕ್ಕೊಂದು ಮೆಟ್ರೋ ಸಂಚಾರ ಶೀಘ್ರ
Bengaluru Metro: ಬೆಂಗಳೂರು ಮೆಟ್ರೋ ಮೂರನೇ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ರೈಲುಗಳ ಆವರ್ತನ ಸಮಯ ಇನ್ನಷ್ಟು ಕಡಿಮೆ ಆಗುವುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. ಅವರಿಗೆ ಶುಭ ಸುದ್ದಿ ಎಂಬಂತೆ 10ನೇ ರೈಲನ್ನು ನಮ್ಮ ಮೆಟ್ರೋ ಹಳದಿ ಮಾರ್ಗವು ಸ್ವೀಕರಿಸಿದೆ. ಶೀಘ್ರವೇ ಒಂಬತ್ತು ಮತ್ತು ಹತ್ತನೇ ರೈಲುಗಳ ಕಾರ್ಯಾಚರಣೆಯಿಂದ ಪ್ರಯಾಣಿಕರ ಸಂಚಾರ ಮತ್ತಷ್ಟು ಸುಧಾರಿಸಲಿದೆ.
ನಮ್ಮ ಮೆಟ್ರೋ ಜಾಲದಲ್ಲಿ ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ 19.5 ಕಿಲೋ ಮೀಟರ್ ಹಳದಿ ಮೆಟ್ರೋ ಮಾರ್ಗವು ಮೂರನೇ ಮಾರ್ಗವಾಗಿದೆ. ಇಲ್ಲಿ ಎಂಟು ರೈಲುಗಳು ನಿತ್ಯ ಕಾರ್ಯಾಚರಣೆ ಮಾಡುತ್ತಿವೆ. ಇದೀಗ ಹತ್ತನೇ ರೈಲಿನ ಆಗಮನವಾಗಿದೆ. ಒಂಬತ್ತನೇ ರೈಲು ಏಪ್ರಿಲ್ ಎರಡನೇ ವಾರವೇ ಬೆಂಗಳೂರಿನ ಹೆಬ್ಬಗೋಡಿಗೆ ಆಗಮಿಸಿ ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿದೆ. ಇದೀಗ 10ನೇ ರೈಲು ಬಂದಿದ್ದು, ನಿಗದಿಯಂತೆ ಹೊಸ ರೈಲುಗಳು ಕಾರ್ಯಾಚರಣೆ ಆರಂಭಿಸಿದಲ್ಲಿ ಪ್ರತಿ 5 ನಿಮಿಷಕ್ಕೆ ಒಂದರಂತೆ ರೈಲುಗಳ ಲಭ್ಯವಾಗಲಿದೆ. ರೈಲುಗಳ ಆವರ್ತನ ಸಮಯ 09 ನಿಮಿಷಗಳಿಂದ ಇಳಿಕೆ ಆಗಲಿದೆ.

ಪ್ರಯಾಣಿಕರ ಕಾಯುವ ಸಮಯ ಇಳಿಕೆ
ದಿನದ ಸಾಮಾನ್ಯ ಸಮಯದಲ್ಲಿ 15 ನಿಮಿಷ, ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್ ನಲ್ಲಿ 9 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳ ನಿಲ್ದಾನಕ್ಕೆ ಆಗಮಿಸುತ್ತಿವೆ. ಎಂಟು ರೈಲುಗಳ ಸಂಖ್ಯೆ ಮೇ ತಿಂಗಳಾಂತ್ಯಕ್ಕೆ ಹತ್ತಕ್ಕೇರುತ್ತದೆ. ಆಗ ಪ್ರತಿ ಐದು ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿವೆ. ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಆಗಲಿದೆ, ಕಾರ್ಯಾಚರಣೆ ಸುಧಾರಣೆ ಆಗಲಿದೆ. ಐಟಿ ಕಾರಿಡಾರ್ ಸಂಪರ್ಕಿಸುವ ಈ ಮಾರ್ಗದಲ್ಲಿ ನಿತ್ಯ ಸುಮಾರು ಒಂದು ಲಕ್ಷದಷ್ಟು ಜನ ಸಂಚಾರ ಮಾಡುತ್ತಾರೆ. ಅವರಿಗೆಲ್ಲ ಅನುಕೂಲವಾಗಲಿದೆ.
ಹೊಸ ರೈಲುಗಳೊಂದಿಗೆ ಸೇವೆ ಆರಂಭ
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) 10 ರೈಲುಗಳೊಂದಿಗೆ ಈ ಮಾರ್ಗದ ಕಾರ್ಯಾಚರಣೆ ಬಲಪಡಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಹೊಸ ರೈಲನ್ನು ಡಿಪೋಗೆ ತಲುಪಿಸಲಾಗಿದೆ. ಶಾಸನಬದ್ಧ ತಪಾಸಣೆ, ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಹೊಸ ರೈಲುಗಳ ನಿಯಮಿತ ಸೇವೆ ಲಭ್ಯವಾಗಲಿದೆ.
ಹಳದಿ ಮಾರ್ಗದ ಇನ್ನಷ್ಟು ಮಾಹಿತಿ
ಬೆಂಗಳೂರು ಮೆಟ್ರೋ ಹಳದಿ ಮಾರ್ಗವು ನಗರದ ಹೃದಯ ಭಾಗದಿಂದ ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ವಸತಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡುತ್ತದೆ. ಇದು ದಕ್ಷಿಣ ಬೆಂಗಳೂರಿನ ಪ್ರಮುಖ ಪ್ರದೇಶಗಳು ಅದರಲ್ಲೂ ಐಟಿ ಕಾರಿಡಾರ್‌ಗಳಿಗೆ ಸಂಪರ್ಕ ನೀಡುತ್ತದೆ. ಈ ಮಾರ್ಗಕ್ಕಾಗಿ ದೈನಂದಿನ ಪ್ರಯಾಣಿಕರು, ಐಟಿ ಉದ್ಯೋಗಿಗಳಿಂದ ಹೆಚ್ಚು ಬೇಡಿಕೆ ಇತ್ತು.
ಅದರಂತೆ ಒಂದಷ್ಟು ವಿಳಂಬದ ಬಳಿಕ 2025ರ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರೆಯಿತು. ಆದರೆ ಸೀಮಿತ ರೈಲು ಆವರ್ತನದಿಂದ ಒಂದಷ್ಟು ದಟ್ಟಣೆ, ಪ್ರಯಾಣಿಕರಿಗೆ ಸಮಸ್ಯೆ ಕಂಡು ಬಂತು. ನಿಲ್ದಾಣಳಲ್ಲಿ ಹೆಚ್ಚು ಸಮಯ ರೈಲಿಗೆ ಕಾಯುವಂತಾಯಿತು. ಇದೇ ವೇಳೆ ಐದು, ಆರು ಹೀಗೆ ಎಂಟು ರೈಲುಗಳ ವರೆಗೆ ಮೆಟ್ರೋ ಸಂಖ್ಯೆ ಹೆಚ್ಚಿಸಲಾಯಿತು. ಇದೀಗ ಹೊಸದಾಗಿ ಮತ್ತೆ ಎರಡು ರೈಲುಗಳು ಕಾರ್ಯಾಚರಣೆಗೆ ಸಜ್ಜಾಗುತ್ತಿವೆ.
ಹತ್ತು ರೈಲುಗಳ ಸಂಚಾರ ಸಮಯ ನೋಡಿಕೊಂಡು ಸಾಮಾನ್ಯ ಸಮಯ, ಪೀಕ್ ಹವರ್‌ಗಳಲ್ಲಿ ಸಮಯ ನಿಗದಿ ಮಾಡಲು ಮೆಟ್ರೋ ಅಧಿಕಾರಿಗಳು ಯೋಜಿಸಿದ್ದಾರೆ. ಐಟಿ ಉದ್ಯೋಗಿಗಳು, ಸಾರ್ವಜನಿಕರು ಹಾಗೂ ಹೊಸೂರು, ಅತ್ತಿಬೆಲೆ ಕಡೆಗೆ ತೆರಳುವವರಿಗೂ ಇನ್ನಷ್ಟು ಅನುಕೂಲ ಸಿಕ್ಕಂತಾಗುತ್ತದೆ. ಈ ಎರಡು ರೈಲುಗಳ ಸಂಚಾರದ ಅಧಿಕೃತ ಮಾಹಿತಿ ಶೀಘ್ರವೇ ದೊರೆಯಲಿದೆ.
🚨 Namma Metro Yellow Line gets 10th train, rollout likely by mid May to cut peak hour wait time to around 6 to 7 minutes in Bengaluru
— India Plus (@india_plus_) April 28, 2026
follow @india_plus_ pic.twitter.com/5mnpXCVIjX














Click it and Unblock the Notifications