Bengaluru Metro: ಮೆಟ್ರೋದಲ್ಲಿ ಒಂದೇ ದಿನ ದಾಖಲೆ ಸಂಖ್ಯೆಯ ಪ್ರಯಾಣಿಕರ ಓಡಾಟ; ಯಾವ ಮಾರ್ಗದಲ್ಲಿ ಎಷ್ಟು ಮಂದಿ?
ಬೆಂಗಳೂರು: ರಾಜಧಾನಿ ಬೆಂಗಳೂರು ಜನತೆ ನಮ್ಮ ಮೆಟ್ರೋ ಸಾರಿಗೆ ಮೇಲೆ ಅದೆಷ್ಟು ಅವಲಂಬಿತವಾಗಿದೆ ಎಂಬುದು ಸಾಬೀತಾಗಿದೆ. ಆಗಸ್ಟ್ 10ರಂದು ಒಂದೇ ದಿನ ಬೆಂಗಳೂರು ಮೆಟ್ರೋದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರ ಸಂಚಾರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ 11,00,000 ಪ್ರಯಾಣಿಕರ ಗಡಿ ದಾಟುವ ಮೂಲಕ ನಮ್ಮ ಮೆಟ್ರೋ ರಾಜಧಾನಿ ಜೀವನಾಡಿ ಎಂಬುದು ಸಾಬೀತಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳ ಅಧಿಕೃತ ಮಾಹಿತಿ ಪ್ರಕಾರ, ನೆನ್ನೆ ಆಗಸ್ಟ್ 10ರಂದು ಒಂದೇ ದಿನ 96 ಕಿಲೋ ಮೀಟರ್ ಮೆಟ್ರೋ ಜಾಲದ ಮೂರೂ ಮಾರ್ಗಗಳಲ್ಲಿ ಬರೋಬ್ಬರಿ 11,19, 815 ಮಂದಿ ಪ್ರಯಾಣ ಮಾಡಿದ್ದಾರೆ. 2026 ಆಗಸ್ಟ್ ತಿಂಗಳಲ್ಲಿ ದಾಖಲಾದ ಒಂದು ದಿನದ ಅತೀ ಹೆಚ್ಚು ಜನರ ಸಂಚಾರ ಇದಾಗಿದೆ.

ಆಗಸ್ಟ್ 10ರಂದು ಸಂಚರಿಸಿದ ಮಾರ್ಗವಾರು ಪ್ರಯಾಣಿಕರ ಸಂಖ್ಯೆ
* ನೇರಳೆ ಮಾರ್ಗ (ಲೈನ್ 1): 4,66,371
* ಹಸಿರು ಮಾರ್ಗ (ಲೈನ್ 2): 2,85,499
* ಹಳದಿ ಮಾರ್ಗ (ಲೈನ್ 3): 92,838
* ಇಂಟರ್ ಚೇಂಜ್ ಪ್ರಯಾಣಿಕರು: 2,75,107
ಒಟ್ಟು ಸಂಚಾರ: 11,19,815
ಆಗಸ್ಟ್ 10ಕ್ಕೆ ಒಂದು ವರ್ಷ ಭರ್ತಿ
ರಾಜಧಾನಿಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗೆ 19 ಕಿಲೋ ಮೀಟರ್ ಉದ್ದದ 'ಹಳದಿ ಮಾರ್ಗ'ದ ಕೊಡುಗೆಯು ಅಪಾರವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‍ಗೆ ಸಂಪರ್ಕಿಸುವ ಕಾರಣಕ್ಕೆ ಈ ಮಾರ್ಗದಲ್ಲಿ ಕಡಿಮೆ ರೈಲುಗಳಿದ್ದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಅಲ್ಲದೇ ಈ ಮಾರ್ಗವು ತೆರೆದು ಆಗಸ್ಟ್ 10,2026ಕ್ಕೆ ಒಂದು ವರ್ಷವಾಗಿದೆ. ಕಳೆದ ವರ್ಷ 2025 ಆಗಸ್ಟ್ 10ರಂದು ಪ್ರಧಾನಿ ಮೋದಿಯವರು ಹಳದಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು.
ಉದ್ಘಾಟನೆ ಬಳಿಕ ಆಗಸ್ಟ್ 11ರಂದು ಮೊದಲ ಸಂಚಾರ ಶುರುವಾಗಿತ್ತು. ಮೊದಲ ದಿನವೇ ಸುಮಾರು 30 ಸಾವಿರದಷ್ಟು ಜನ ಪ್ರಯಾಣ ಮಾಡಿದ್ದರು. ನಂತರ ಸುಮಾರು ಒಂದು ಲಕ್ಷಕ್ಕೆ ಈ ಸಂಖ್ಯೆ ಏರಿತು. ಹಸಿರು ಮತ್ತು ನೇರಳೆ ಮಾರ್ಗಗಳಿಂದ ಬಂದು ಹಳದಿ ಮಾರ್ಗವಾಗಿ ಸಾಗುವ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ನೆನ್ನೆ ಒಂದೇ ದಿನದ ರೈಡರ್ಸ್ ಸಂಖ್ಯೆ 11 ಲಕ್ಷ ದಾಟಿದೆ.
ಸಾಲದ ರೈಲುಗಳು, ದಟ್ಟಣೆ ಹೆಚ್ಚಳ
ಹಾಲಿ ಮೂರು ಮೆಟ್ರೋ ಮಾರ್ಗಗಳಲ್ಲಿ ಒಟ್ಟಾರೆ ಸುಮಾರು 65 ರೈಲುಗಳಿವೆ. ಈ ರೈಲುಗಳ ಒಟ್ಟು 11.19 ಲಕ್ಷ ಜನರ ಸಂಚಾರ ಸೇವೆಗೆ ಸಾಕಾಗುತ್ತಿಲ್ಲ. ಹೀಗಾಗಿಯೇ ಚೀನಾ ನಿರ್ಮಿತ ಉದ್ದೇಶಿತ ಪೂರೈಕೆಯ 21ರೈಲುಗಳ ಪೈಕಿ 3 ರೈಲುಗಳು ಈಗಾಗಲೇ ಬೆಂಗಳೂರಿಗೆ ಬಂದಿವೆ. ಅವುಗಳ ತಪಾಸಣೆ ನಡೆಸುತ್ತಿದ್ದು, ಅವುಳನ್ನು ಹಸಿರು ಮಾರ್ಗಕ್ಕೆ ನಿಯೋಜಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಗುಲಾಬಿ ಮಾರ್ಗ ಆ.15ಕ್ಕೆ ಓಪನ್ ಆಗುತ್ತಾ?
ಇನ್ನೂ ಪೀಕ್ ಸಮಯದಲ್ಲಿ ಮೆಟ್ರೋ ರೈಲು, ನಿಲ್ದಾಣಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ. ಇನ್ನೂ ಹಳದಿ ಮಾರ್ಗದಲ್ಲಿ ಇನ್ನಷ್ಟು ರೈಲುಗಳ ನಿಯೋಜಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ 7.5 ಕಿಮೀ ಉದ್ದದ ಕಾಳೇನ ಅಗ್ರಹಾರ-ತಾವರೆಕರೆ ವರೆಗಿನ ಗುಲಾಬಿ ಮಾರ್ಗವನ್ನು ಇದೇ ಆಗಸ್ಟ್ 15ರಂದು ತೆರೆಯಲು ಅಧಿಕಾರಿಗಳು ಉತ್ಸುಕರಾಗಿದ್ದಾರೆ. ಆದರೆ ಅಂತಿಮ ಅನುಮೋದನೆಗಳು ಬಾಕಿ ಉಳಿದಿವೆ. ಇನ್ನೂ ನಾಲ್ಕು ದಿನಗಳಲ್ಲಿ ಎಲ್ಲ ಅನುಮೋದನೆ ಪಡೆದು ಆರಂಭಿಸುವುದು ಅನುಮಾನ ಅಂತಲೂ ಹೇಳಲಾಗುತ್ತಿದೆ.


Click it and Unblock the Notifications
