ಬೆಂಗಳೂರು: 17,000 ನಿವೇಶನ ಭೂಮಾಲೀಕರಿಗೆ ಹಂಚಿಕೆ, ಈ ಯೋಜನೆಗೆ ಭೂಮಿ ಕೊಟ್ಟವರಿಗೆ 10-15 ಕೋಟಿ: ಡಿಸಿಎಂ ಡಿ.ಕೆ ಶಿವಕುಮಾರ್
Bengaluru Land Project: ಬೆಂಗಳೂರಿನ 17,000 ನಿವೇಶನ ಭೂ ಮಾಲೀಕರಿಗೆ ಹಂಚಿಕೆ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ನಿವೇಶನ ಹಂಚಿಕೆ ಸೇರಿದಂತೆ ಬೆಂಗಳೂರಿನ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧ ಸಚಿವ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಬಿ ಸ್ಮೈಲ್ ಎನ್ನುವ ಕಂಪನಿಯನ್ನು ಕಳೆದ ವರ್ಷ ಪ್ರಾರಂಭ ಮಾಡಲಾಯಿತು. ಒಟ್ಟು 1.47 ಲಕ್ಷ ಕೋಟಿಯಷ್ಟು ಹೂಡಿಕೆಯನ್ನು ಬಿ ಸ್ಮೈಲ್ ಅಲ್ಲಿ ಮಾಡಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಬಿಡಿಎಗೂ ಸಹ ಒಂದಷ್ಟು ಜವಾಬ್ದಾರಿ ನೀಡಲಾಗಿದೆ. 1.5 ಕಿಮೀ ಉದ್ದದ ಕಟ್ ಅಂಡ್ ಕವರ್ ಟನಲ್, ಮೇಖ್ರಿ ವೃತ್ತದ ಬಳಿ ವಾಹನ ದಟ್ಟಣೆ ತಪ್ಪಿಸಲು ಯೋಜನೆ ರೂಪಿಸಲಾಗುವುದು.

ಬ್ರ್ಯಾಂಡ್ ಬೆಂಗಳೂರು ಅಡಿ ಬೀದಿ ದೀಪ, ನಗರ ಸೌಂದರ್ಯೀಕರಣವನ್ನು ಯಾವ ರೀತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗುವುದು. ವೈಟ್ ಟಾಪಿಂಗ್ ಕಾಮಗಾರಿಯನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. 1,700 ಕೋಟಿ ರೂ. ವೆಚ್ಚದ 150 ಕಿಲೋ ಮೀಟರ್ ಉದ್ದದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಎರಡನೇ ಹಂತದಲ್ಲಿ 7,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. 690 ಕೋಟಿ ವೆಚ್ಚದಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
110 ಹಳ್ಳಿಗಳಿಗೆ ಕಾವೇರಿ ನೀರು
ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರನ್ನು 2007 ರಿಂದ ನೀಡಲು ಆಗಿರಲಿಲ್ಲ. ಈ ಕೆಲಸವನ್ನು ನಾವು ಮಾಡಿದ್ದೇವೆ. 775 ಎಂಎಲ್ ಡಿ ನೀರನ್ನು ಈಗಾಗಲೇ ನೀಡಿದ್ದೇವೆ. ಇದಕ್ಕೆ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಮನೆ ಮನೆಗೆ ಟ್ಯಾಂಕರ್ ಮೂಲಕ ಕಾವೇರಿ ನೀರು ನೀಡಲಾಗಿದೆ. ಸರಳ ಕಾವೇರಿ ಯೋಜನೆ ಮೂಲಕ ರಿಯಾಯಿತಿ ದರ ಹಾಗೂ ಕಂತುಗಳ ಮೂಲಕ ಹಣ ಪಾವತಿಗೆ ಅವಕಾಶ ನೀಡಿ ಕಾವೇರಿ ನೀರು ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಭೂಮಿ ಕೊಟ್ಟವರಿಗೆ 10-15 ಕೋಟಿ ರೂ. ಪರಿಹಾರ
ಮುಂದುವರಿದು ಕೆ.ಆರ್ ಪುರಂ ನಿಂದ ಮೈಸೂರು ರಸ್ತೆ ವರೆಗಿನ ಟನಲ್ ರಸ್ತೆ ಯೋಜನೆಯ ಡಿಪಿಆರ್ ಪ್ರಗತಿಯ ಹಂತದಲ್ಲಿದೆ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆ ಅಡಿ ಭೂಮಿ ಕಳೆದುಕೊಂಡವರಿಗೆ ಪರಿಹಾರವನ್ನು ಇಡೀ ದೇಶದಲ್ಲಿ ಯಾರೂ ಸಹ ನೀಡದಷ್ಟು ಪರಿಹಾರವನ್ನು ನೀಡಲಾಗಿದೆ. ಈ ಯೋಜನೆಯನ್ನು ಮೊದಲೇ ಮಾಡಿದ್ದರೆ 4-5 ಸಾವಿರ ಕೋಟಿಗೆ ಮುಗಿದು ಹೋಗುತ್ತಿತ್ತು.
ಈಗ ನಾನು ನೋಡಿರುವ ಪರಿಹಾರ ನೋಡಿ ಸಂತ್ರಸ್ತರು ಸಂತೋಷದಿಂದ ಪರಿಹಾರ ತೆಗೆದುಕೊಳ್ಳುತ್ತಿದ್ದಾರೆ. 3 ಕೋಟಿಯಿಂದ 10-15 ಕೋಟಿ ಪರಿಹಾರವನ್ನು ಒಬ್ಬೊಬ್ಬರು ತೆಗೆದುಕೊಳ್ಳುತ್ತಿದ್ದಾರೆ. ಮೊದಲನೇ ಹಂತದಲ್ಲಿ 129 ಕಿಮೀ ಇರಲಿದೆ. ಎರಡನೇ ಹಂತದ ರಸ್ತೆ ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವರೆಗೆ ಇರಲಿದೆ ಎಂದು ಅವರು ಹೇಳಿದ್ದಾರೆ.
9 ಸಾವಿರ ಕೋಟಿ ವೆಚ್ಚದ 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಯೋಜನೆಯ ಡಿಪಿಆರ್ ಸಿದ್ಧವಿದೆ. ಇದಕ್ಕೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ರಾಜಕಾಲುವೆಗಳ ಬಫರ್ ಜೋನ್ ಗಳ ಪಕ್ಕ ರಸ್ತೆ ನಿರ್ಮಾಣ ಕಾರ್ಯ ಮೂರು ಕಡೆ ಪ್ರಾರಂಭವಾಗಿದೆ. ಮಿಲಿಟರಿಯವರು ನೀಡಿದ ಜಾಗಕ್ಕೆ ಒಂದಷ್ಟು ಮೂಲಸೌಕರ್ಯಗಳನು ಒದಗಿಸಿಕೊಡಬೇಕು ಎಂದು ಹೇಳಿದ್ದಾರೆ ನಾವು ಮಾಡುತ್ತಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ 50 ಕೋಟಿ ಹಣ ರೂ. ಮೀಸಲು ಇರಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.
17 ಸಾವಿರ ನಿವೇಶನ ಭೂಮಾಲೀಕರಿಗೆ ಹಂಚಿಕೆ
ಶಿವರಾಂ ಕಾರಂತ್ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ನ್ಯಾಯಲಯ ತಿಳಿಸಿದೆ. 34,977 ನಿವೇಶನ ಮಾಡಲಾಗಿದೆ. 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಬೇಕು. ಶೇ 75 ಭಾಗ ಮಾಲೀಕರು ಇದಕ್ಕೆ ತಯಾರಿದ್ದಾರೆ. ಮಿಕ್ಕ ಮಾಲೀಕರ ಬಳಿ ನಾನು ಮನವಿ ಮಾಡುತ್ತಿದ್ದೇನೆ. ಬಿಡಿಎಗೆ 50 ವರ್ಷ ತುಂಬುತ್ತಿದ್ದು 17 ಸಾವಿರ ಜನರಿಗೂ ಒಂದೇ ದಿನ ಹಂಚಿಕೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು. ಮಿಕ್ಕ ನಿವೇಶನಗಳಿಗೆ ಅರ್ಜಿ ಕರೆದು ನೀಡಲಾಗವುದು. ಸ್ಕೈ ಡೆಕ್ ಬಗ್ಗೆ ಬಿಡಿಎಗೆ ಜವಾಬ್ದಾರಿ ನೀಡಿದ್ದೇನೆ. ಕೆಂಪೇಗೌಡ ಲೇಔಟ್ ಬಳಿ ಪರಿಶೀಲನೆ ಮಾಡಲಾಗುತ್ತಿದೆ ಎಂದಿದ್ದಾರೆ.
ಜಿಬಿಎ ಚುನಾವಣೆಯ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದೇನು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆ ಮಾಡಬೇಕು ಎಂದು ನಾವು ಮುಂದಾಗಿದ್ದೇವೆ. ವಾರ್ಡ್ ಗಳ ವಿಂಗಡೆಯಾಗಿದೆ, ಮೀಸಲಾತಿ ಕೂಡ ಮುಗಿದಿದೆ. ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡಿ ಎಂದೂ ತಿಳಿಸಲಾಗಿದೆ. ನ್ಯಾಯಲಯಕ್ಕೂ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ. ನ್ಯಾಯಲಯವೂ ನಮಗೆ ಮಾಗದರ್ಶನ ನೀಡಿದೆ ಎಂದಿದ್ದಾರೆ.













Click it and Unblock the Notifications