Bengaluru Karaga: ಏಪ್ರಿಲ್ 23ರಂದು ಬೆಂಗಳೂರಿನ ಈ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ
ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವದ ಸಂಭ್ರಮ ಆರಂಭವಾಗಿದೆ. ಏಪ್ರಿಲ್ 23 ರಂದು ಪ್ರಸಿದ್ಧವಾದ ಕರಗ ಶಕ್ತ್ಯೋತ್ಸವ ನಡೆಯಲಿದೆ. ಎ. ಜ್ಞಾನೇಂದ್ರ ಅವರು 14ನೇ ಬಾರಿ ಬೆಂಗಳೂರು ಕರಗ ಹೊರಲಿದ್ದಾರೆ. ಈ ಸಂಭ್ರಮದ ದಿನ ಭಾರಿ ಜನ ಸೇರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ಹಲವು ಕಡೆಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಏಪ್ರಿಲ್ 23 ರ ಬೆಳಗ್ಗೆ 6 ಗಂಟೆಯಿಂದ ಏಪ್ರಿಲ್ 24 ಬೆಳಗ್ಗೆ 10 ಗಂಟೆಯವರೆಗೆ ಬೆಂಗಳೂರು ನಗರದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಕಮೀಷನರ್ ದಯಾನಂದ ಆದೇಶ ನೀಡಿದ್ದಾರೆ.

ಬೆಂಗಳೂರಿನ ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧ
ಬೆಂಗಳೂರು ಕರಗ ವಿಶ್ವಪ್ರಸಿದ್ಧಿ ಪಡೆದಿದೆ. ಕರಗ ಸಾಗುವ ಹಾದಿಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ. ಪೊಲೀಸರು ಕೂಡ ಸೂಕ್ತ ಬಂದೋಬಸ್ತ್ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ.
ಏಪ್ರಿಲ್ 15 ರಿಂದಲೇ ಕರಗ ಮಹೋತ್ಸವ ಆರಂಭವಾಗಿದ್ದು, ಏಪ್ರಿಲ್ 23ರವರೆಗೆ ನಡೆಯಲಿದೆ. ಪ್ರತಿ ವರ್ಷ ಚೈತ್ರ ಪೌರ್ಣಮಿಯ ದಿನದಂದು ಕರಗ ಮಹೋತ್ಸವ ನಡೆದುಕೊಂಡು ಬರುತ್ತಿದೆ. ನಗರದ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಮಹೋತ್ಸವದ ಚಟುವಟಿಕೆ ಆರಂಭವಾಗುತ್ತದೆ. ಕೈನಿಂದ ಮುಟ್ಟದೆ ತಲೆಯ ಮೇಲೆ ಕರಗ ಹೊತ್ತು ಸಾಗುವುದು ವಿಶೇಷವಾಗಿದೆ.
11 ದಿನಗಳ ಕಾಲ ಕರಗ ಮಹೋತ್ಸವ ನಡೆಯಲಿದೆ. ದೀಪಾರತಿ ಉತ್ಸವ, ಹಸಿ ಕರಗ, ಪೊಂಗಲು ಸೇವೆ, ಹೂವಿನ ಕರಗ, ವಸಂತೋತ್ಸವ, ಗಾವು ಸೇವೆಗಳು ನಡೆಯುತ್ತವೆ.
ಕರಗದ ಮೆರವಣಿಗೆ ಮಸ್ತಾನ್ ಸಾಬ್ ದರ್ಗಾಕ್ಕೆ ಕೂಡ ತೆರಳುವುದು ವಿಶೇಷವಾಗಿದೆ. ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಸ್ಥಾನಗಳಲ್ಲಿ ಕರಗ ಮೆರವಣಿಗೆ ನಡೆಸಿದ ಬಳಿಕ, ಬೆಳಗಿನಜಾವದ ವೇಳೆಗೆ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬರುತ್ತಾರೆ.












Click it and Unblock the Notifications