ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣ ದರ, ವೇಳಾಪಟ್ಟಿ, ವಿವರ
ಬೆಂಗಳೂರು, ಸೆಪ್ಟೆಂಬರ್ 24: ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಮತ್ತು ದರವನ್ನು ರೈಲ್ವೆ ಶನಿವಾರ ಪ್ರಕಟಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಯಾಣ ದರವನ್ನು ಈಗ ಬಿಡುಗಡೆ ಮಾಡಲಾಗಿದೆ. ಫ್ಲ್ಯಾಗ್-ಆಫ್ ನಂತರ, ರೈಲ್ವೇಯು ಏಕಮುಖ ಉದ್ಘಾಟನಾ ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ಸಂಖ್ಯೆ 02703) ವಿಶೇಷ ರೈಲನ್ನು ಓಡಿಸಲಿದೆ.

ರೈಲು ಗಾಡಿ ಸಂಖ್ಯೆ 20703 (ಕಾಚಿಗುಡ- ಯಶವಂತಪುರ) ಚೇರ್ ಕಾರ್ ಸೀಟು ದರ 1,600 ರೂಪಾಯಿ, ಎಕ್ಸಿಕ್ಯೂಟಿವ್ ಕ್ಲಾಸ್ ದರ 2915 ರೂಪಾಯಿ ಆಗಿರುತ್ತದೆ. ಹಾಗೇಯೆ ರೈಲು ಸಂಖ್ಯೆ 20704 (ಯಶವಂತಪುರದಿಂದ ಕಾಚಿಗುಡ) ಚೇರ್ ಕಾರ್ ಸೀಟು ದರ 1,540 ರೂಪಾಯಿ, ಎಕ್ಸಿಕ್ಯೂಟಿವ್ ಕ್ಲಾಸ್ ದರ 2, 865 ರೂಪಾಯಿ ಆಗಿರುತ್ತದೆ ಎಂದು ತಿಳಿಸಲಾಗಿದೆ. ಈ ರೈಲು ಬೋಗಿಗಳನ್ನು ಹೊಂದಿದ್ದು, ವಾರದಲ್ಲಿ ಬುಧವಾರ ಹೊರತುಪಡಿಸಿ ಆರು ದಿನಗಳ ಕಾಲ ಸಂಚಾರ ಮಾಡಲಿದೆ. ಪ್ರಯಾಣಿಕರಿಗೆ ಉಪಹಾರ ಮತ್ತು ಊಟವನ್ನು ನೀಡಲಾಗುತ್ತದೆ.
ರೈಲು ಗಾಡಿ ಸಂಖ್ಯೆ 20703 (ಕಾಚಿಗುಡ- ಯಶವಂತಪುರ) ಪ್ರತಿ ದಿನ ಕಾಚಿಗುಡದಿಂದ 5.30ಕ್ಕೆ ಹೊರಡುತ್ತದೆ. ಈ ರೈಲು 6.50ಕ್ಕೆ ಮೊಹಬೂಬ್ ನಗರ, 8.25ಕ್ಕೆ ಕರ್ನೂಲ್ ಸಿಟಿ, 10.45ಕ್ಕೆ ಅನಂತಪುರ, 11.15ಕ್ಕೆ ಧರ್ಮಾವರಂ, ಮಧ್ಯಾಹ್ನ 2 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ. ಹಾಗೇಯೆ ಯಶವಂತಪುರದಿಂದ ಕಾಚಿಗುಡಕ್ಕೆ 2.45ಕ್ಕೆ ಹೊರಟು 5 ಗಂಟೆಗೆ ಧರ್ಮಾವರಂ, 5.30ಕ್ಕೆ ಅನಂತಪುರ, 7.51ಕ್ಕೆ ಕರ್ನೂಲ್ ಸಿಟಿ, 9.35ಕ್ಕೆ ಮೊಹಬೂಬ್ ನಗರ ಹಾಗೂ 11.15ಕ್ಕೆ ಕಾಚಿಗುಡವನ್ನು ತಲುಪಲಿದೆ.
ಉದ್ಘಾಟನಾ ರೈಲು ಭಾನುವಾರ ಮಧ್ಯಾಹ್ನ 12.30ಕ್ಕೆ ಕಾಚಿಗೌಡದಿಂದ ಹೊರಡಲಿದೆ. ಇದು ರಾತ್ರಿ 11.45ಕ್ಕೆ ಯಶವಂತಪುರ ತಲುಪುತ್ತದೆ. ಮಾರ್ಗದಲ್ಲಿ ಶಾದ್‌ನಗರ, ಮಹಬೂಬ್‌ನಗರ, ಗದ್ವಾಲ್, ಕರ್ನೂಲ್ ಸಿಟಿ, ಧೋನೆ, ಅನಂತಪುರ, ಧರ್ಮವರಂ, ಹಿಂದೂಪುರ ಮತ್ತು ಯಲಹಂಕದಲ್ಲಿ ನಿಲ್ಲುತ್ತದೆ.
ಸೋಮವಾರದಂದು ಯಶವಂತಪುರದಿಂದ ಸಾಮಾನ್ಯ ಸೇವೆ ಆರಂಭವಾಗಲಿದ್ದು, 8ವರೆ ಗಂಟೆಗಳಲ್ಲಿ 609.8 ಕಿ.ಮೀ ಕ್ರಮಿಸಲಿದ್ದು, ಮಹೆಬೂಬ್‌ನಗರ, ಅನಂತಪುರ ಮತ್ತು ಧರ್ಮಾವರಂ, ಕರ್ನೂಲ್‌ನಲ್ಲಿ ಮಾತ್ರ ನಿಲುಗಡೆಯಾಗಲಿದೆ. ಕಾಚಿಗುಡದಿಂದ ಮೊದಲ ಸೇವೆ ಮಂಗಳವಾರ ಆರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 11 ರಾಜ್ಯಗಳ ವಿವಿಧ ಮಾರ್ಗಗಳಲ್ಲಿ ಒಂಬತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಭಾನುವಾರ ಚಾಲನೆ ನೀಡಲಿದ್ದಾರೆ. ಒಡಿಶಾ, ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಕೇರಳ ಮತ್ತು ಜಾರ್ಖಂಡ್ - ಈ ರಾಜ್ಯಗಳಾದ್ಯಂತ ರೈಲುಗಳು ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುತ್ತವೆ.












Click it and Unblock the Notifications