Bengaluru-Hosur Metro: ಕರ್ನಾಟಕ-ತಮಿಳುನಾಡು ಮೆಟ್ರೋ ಮಾರ್ಗಕ್ಕೆ ಕನ್ನಡ ಪರ ಹೋರಾಟಗಾರರ ವಿರೋಧವೇಕೆ? ಬಲವಾದ ಕಾರಣ ತಿಳಿಯಿರಿ
ಬೆಂಗಳೂರು, ಆಗಸ್ಟ್ 05: ಬೊಮ್ಮಸಂದ್ರ ಮತ್ತು ಹೊಸೂರು ನಡುವಿನ ಮೆಟ್ರೋ ರೈಲು ಮಾರ್ಗವು ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಿದೆ. ಇದು ದಕ್ಷಿಣ ಭಾರತದ ಮೊದಲ ಇಂಟರ್‌ಸ್ಟೇಟ್ ಮೆಟ್ರೋ ಮಾರ್ಗವಾಗಿದೆ. ಈ ಯೋಜನೆಯನ್ನು ಚೆನ್ನೈ ಮೆಟ್ರೋ ರೈಲು ನಿಗಮ ಪ್ರಸ್ತಾಪಿಸಿದೆ. ಕರ್ನಾಟಕ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗಕ್ಕೆ ಕನ್ನಡ ಪರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣವೇನು ಎಂಬುದನ್ನು ತಿಳಿಯಲು ಈ ವರದಿ ಓದಿ.
ಕನ್ನಡಿಗರಿಗಿಂತ ತಮಿಳರಿಗೆ ಹೆಚ್ಚು ಲಾಭ
ಈ ಯೋಜನೆಯು ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರಬಹುದು ಎಂಬುದು ಹೋರಾಟಗಾರರ ಪ್ರಮುಖ ಕಳವಳವಾಗಿದೆ. ಬೆಂಗಳೂರು ಮೆಟ್ರೋವನ್ನು ಹೊಸೂರು ಕಡೆಗೆ ವಿಸ್ತರಿಸುವುದರಿಂದ ಕನ್ನಡಿಗರಿಗಿಂತ ಹೆಚ್ಚಾಗಿ ತಮಿಳರಿಗೆ ಹೆಚ್ಚು ಲಾಭ ತಂದುಕೊಡಲಿದೆ ಎಂಬುದು ಕನ್ನಡ ಪರ ಸಂಘಟನೆಗಳ ವಾದವಾಗಿದೆ.

ಈ ಯೋಜನೆಗೆ ಅನುಮೋದನೆ ದೊರೆತರೆ ತಮಿಳಿಗರು ಕರ್ನಾಟಕಕ್ಕೆ ಪ್ರವೇಶಿಸಲು ಹೆಚ್ಚು ಅನುಕೂಲವಾಗಲಿದೆ. ಇದು ಬೆಂಗಳೂರಿನಲ್ಲಿ ಕನ್ನಡಿಗರ ಅಸ್ತಿತ್ವದ ಮೇಲೆ ಪರಿಣಾಮ ಬೀರಬಹುದು ಎಂಬ ವಾದವನ್ನು ಹೋರಾಟಗಾರರು ಮುಂದಿಟ್ಟಿದ್ದಾರೆ.
ಚೆನ್ನೈ ಮೂಲದ ಐಟಿ ಕಂಪನಿಗಳು ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ ಎಂದು ಆರೋಪಗಳನ್ನೂ ಅವರು ಮಾಡುತ್ತಿದ್ದಾರೆ.

ಕಾವೇರಿ ವಿವಾದಕ್ಕೆ ತಳುಕು
ಬೆಂಗಳೂರು-ಹೊಸೂರು ಮೆಟ್ರೋ ಮಾರ್ಗದ ಯೋಜನೆಯನ್ನು ಕಾವೇರಿ ಹಾಗೂ ಮೇಕೆದಾಟು ವಿವಾದಗಳೊಂದಿಗೆ ತಳುಕು ಹಾಕಲಾಗುತ್ತಿದೆ. ಈ ವಿವಾದಗಳು ಎರಡು ರಾಜ್ಯಗಳಲ್ಲಿ ಹಲವಾರು ಬಾರಿ ಉದ್ವಿಗ್ನ ಪರಿಸ್ಥಿತಿಯನ್ನು ಹುಟ್ಟುಹಾಕಿವೆ. ಈ ಐತಿಹಾಸಿಕ ವಿವಾದಗಳು ಬಗೆಹರಿದರೆ ಮಾತ್ರ ತಮಿಳುನಾಡಿಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸಬಹುದು ಎಂದು ಹೋರಾಟಗಾರರು ಹೇಳಿದ್ದಾರೆ.
ನಮ್ಮ ಮೆಟ್ರೋ ಬೆಂಗಳೂರಿಗೆ ಸೀಮಿತವಾಗಿರಲಿ
ನಮ್ಮ ಮೆಟ್ರೋ ಬೆಂಗಳೂರಿಗೆ ಸೀಮಿತವಾಗಬೇಕು. ಹೊಸೂರಿಗೆ ವಿಸ್ತರಿಸುವುದು ಅನಗತ್ಯ ಎಂದು ಕನ್ನಡಪರ ಹೋರಾಟಗಾರರು ಹೇಳಿದ್ದಾರೆ. ಬೆಂಗಳೂರು ಮಹಾನಗರಕ್ಕೆ ಸಮೀಪವಿರುವ ಹೊಸೂರು ಈಗಾಗಲೇ ಹಲವು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿದೆ. ಬೆಂಗಳೂರಿನಿಂದಲೇ ಹೊಸೂರು ಬೆಳೆದಿದೆ. ಅಲ್ಲಿ ತಮಿಳರಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಸ್ಥಳೀಯ ಉದ್ಯೋಗ ಅವಕಾಶಗಳು ಹೆಚ್ಚಾಗಿದೆ ಎಂಬುದು ಸಂಘಟನೆಗಳ ವಾದವಾಗಿದೆ.

ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬೇಕೆಂದು ತಮಿಳುನಾಡು ಈ ಹಿಂದೆ ಮನವಿ ಮಾಡಿತ್ತು. ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಕಾವೇರಿ ವಿವಾದವನ್ನು ತಮಿಳುನಾಡು ಜೀವಂತವಾಗಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ರೈಲ್ವೆ ಯೋಜನೆಯನ್ನು ವಿಸ್ತರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಂಘಟನೆಗಳು ಎತ್ತಿವೆ.
ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚಳ
ಬೆಂಗಳೂರು ಮಹಾನಗರ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಊರಿಗೆ ಪ್ರತಿದಿನ ಸಾವಿರಾರು ಮಂದಿ ಹೊರ ರಾಜ್ಯಗಳಿಂದ ಬರುತ್ತಾರೆ. ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ಬೆಂಗಳೂರಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಕಾಡುತ್ತಿವೆ. ಒಂದು ವೇಳೆ, ಹೊಸೂರು ಬೆಂಗಳೂರು ಮೆಟ್ರೋ ಯೋಜನೆ ಕಾರ್ಯಗತಗೊಂಡರೆ, ಇಲ್ಲಿ ಮತ್ತಷ್ಟು ಜನಸಾಂದ್ರತೆ ಹೆಚ್ಚಲಿದೆ. ಇದು ಹಲವು ಹೊಸ ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ.












Click it and Unblock the Notifications