Bengaluru Rain: ಸೋಮವಾರ ತಿಂಗಳ ಮೊದಲ ಮಳೆ ಸಿಂಚನ, ನಗರಕ್ಕೆ ಮುನ್ಸೂಚನೆ ಇಲ್ಲಿದೆ
ಬೆಂಗಳೂರು, ಆಗಸ್ಟ್ 05: ರಾಜ್ಯ ರಾಜಧಾನಿ ಬೆಂಗಳೂರಿಗೆ ಈ ವರ್ಷ ಮಳೆ ಕಡಿಮೆ ಆಗಿದೆ ಎಂಬ ಮಾತುಗಳ ನಡುವೆ, ಸೋಮವಾರ ಸಂಜೆ ಮಳೆ ಅಬ್ಬರಿಸಿದೆ. ಕೆಲ ಹೊತ್ತು ನಗರದ ವಿವಿಧ ಬಡಾವಣೆಗಳಲ್ಲಿ ಜೋರು ಮಳೆ ದಾಖಲಾಗಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿತು.
ಬೆಂಗಳೂರಿನಲ್ಲಿ ಜುಲೈ ಆರಂಭದಲ್ಲಿ ಅಬ್ಬರಿಸಿದ್ದ ಮಳೆ ಅಬ್ಬರಿಸಿದ್ದ ಮಳೆ ಮತ್ತೆ ಪತ್ತೆಯೇ ಆಗಿಲ್ಲ. ಇದೀಗ ಆಗಸ್ಟ್ ತಿಂಗಳಲ್ಲಿ ಮೊದಲ ಮಳೆಯ ಸಿಂಚನವಾಗಿದೆ. ಈ ಮೂಲಕ ಕಾಯುವಿಕೆಗೆ ಅಂತ್ಯ ಬಿದ್ದಿದೆ. ಮುಂದಿನ ಐದು ದಿನಗಳ ನಗರದಲ್ಲಿ ಇದೇ ರೀತಿ ಮಳೆ, ತಂಪು ವಾತಾವರಣ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (NWKRTC) ಮಾಹಿತಿ ನೀಡಿದೆ.

ಸಂಜೆ ಮಳೆ ಆಗಿದ್ದೆಲ್ಲಿ, ತಾಪಮಾನ ಎಷ್ಟಿತ್ತು?
ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದು ಸಂಜೆ ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಗರಿಷ್ಠ 30 ಕನಿಷ್ಠ 20.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಂಜೆ ತುಂತುರು ಮಳೆ ಆಗಿದೆ. ಇದರಿಂದ ವಾಹನ ಸವಾರರಿಗೆ ಕಿರಿ ಕಿರಿ ಆಯಿತು.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಗರಿಷ್ಠ 30 ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಹಗುರ ಮಳೆ ಕಂಡು ಬಂತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಜೆ ಅಲ್ಲಲ್ಲಿ ಜಿಟಿ ಜಿಟಿ ಮಳೆ ಮುಂದುವರೆಯಿತು. ಈ ವೇಳೆ ಗರಿಷ್ಠ 29.4 ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅನೇಕ ಕಡೆಗಳಲ್ಲಿ ತುಂತುರು ಮಳೆ ದಾಖಲು
ನಗರದ ಹೃದಯಭಾಗದಲ್ಲಿ ನೋಡುವುದಾದರೆ, ಕೋರಮಂಗಲ, ಡೈರಿ ವೃತ್ತ, ಲಾಲ್ ಬಾಗ್, ಮಡಿವಾಳ, ಎಂಜಿ ರಸ್ತೆ, ಇಂದಿರಾನಗರ, ಮೆಜೆಸ್ಟಿಕ್ ಸುತ್ತಮುತ್ತ, ಹೆಬ್ಬಾಳ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ದೊಮ್ಮಲೂರು, ಜಯನಗರ, ಚಾಮರಾಜಪೇಟೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೆಲ ಹೊತ್ತು ವ್ಯಾಪಕ ಮಳೆ ಆಯಿತು.

ಇನ್ನೂ ಕೆಂಗೇರಿ, ಆರ್‌ಆರ್ ನಗರ, ನಾಯಂಡಹಳ್ಳಿ, ಚಂದ್ರಾ ಬಡಾವಣೆ, ವಿಜಯನಗರ, ರಾಜಾಜಿನಗರ, ಯಶವಂತಪುರ, ವಿದ್ಯಾರಣ್ಯ ಪುರ ಸೇರಿದಂತೆ ಹಲವು ಕಡೆಗಳಲ್ಲಿ ಸಾಮಾನ್ಯ ಮಳೆಯ ದರ್ಶನವಾಗಿದೆ. ಉಳಿದಂತೆ ಭಾರೀ ಮಳೆ, ಅನಾಹುತಗಳು ಸಂಜೆ (7ಗಂಟೆ ವೇಳೆಗೆ) ಯಾವುದು ಸಂಭವಿಸಿಲ್ಲ.
ಮುಂದಿನ ಐದು ದಿನ ಬೆಂಗಳೂರಿಗೆ ಮಳೆ
ಬೆಂಗಳೂರು ನಗರದಲ್ಲಿ ಮುಂದಿನ ಆಗಸ್ಟ್ 10ರಂದು ನಿತ್ಯ ಮಳೆ ಆಗುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗ್ಗೆ ಮಳೆ ಬರಲಿದೆ. ಬಹತೇಕ ಬಡಾವಣೆಗಳಲ್ಲಿ ಸಂಜೆ ನಂತರ ಮಳೆಯಾಗುವ ಲಕ್ಷಣಗಳು ಇವೆ.
ಇನ್ನೂ ನಿತ್ಯ ಚಳಿ ವಾತಾವರಣ ಇರಲಿದ್ದು, ಆಗಾಗ ಬಿಸಿಲಿನ ದರ್ಶನವಾಗುವ ನಿರೀಕ್ಷೆ ಇವೆ. ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಹಾವಾಮಾನ ವೈಪರಿತ್ಯಗಳು ತೀವ್ರಗೊಂಡರೆ ನಗರದಲ್ಲಿ ಹೆಚ್ಚು ಮಳೆ ಕಾಣಬಹುದಾಗಿದೆ. ಇಲ್ಲವಾದರೆ ಇದೇ ರೀತಿ ಹಗುರ ಮಳೆ ಮುಂದಿನ ಐದು ದಿನ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.












Click it and Unblock the Notifications