Bengaluru: 'ನಾನೇ ಪೊಲೀಸ್ ಆದ್ರೆ ಗನ್ ಮಾತ್ರ ಕೊಟ್ಟಿಲ್ಲ' ನಕಲಿ ಪೋಲಿಸಪ್ಪನ ರಂಗಿನಾಟ
ಸಿನಿಮಾ ನೋಡಿ ಪೋಲೀಸ್ ಆಗಬೇಕು ಎಂದು ಬಯಸಿದ್ದ 34 ವರ್ಷದ ವ್ಯಕ್ತಿಯೊಬ್ಬ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಎಂದು ಹೇಳಿ ಜನರನ್ನು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಮಾರ್ಚ್ 15: ಇತ್ತೀಚಿಗೆ ಜನರ ಮೇಲೆ ಸಿನಿಮಾಗಳ ಪ್ರಭಾವ ಹೆಚ್ಚಾಗುತ್ತಿದೆ. ಸಿನಿಮಾ ಶೈಲಿಯಲ್ಲಿ ಕೊಲೆ ಮಾಡುವುದು, ಕಳ್ಳತನ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಸದ್ಯ ಇಂತಹದ್ದೇ ಒಂದು ಪ್ರಕರಣ ದಾಖಲಾಗಿದೆ. ಸಿನಿಮಾದಿಂದ ಸ್ಪೂರ್ತಿ ಪಡೆದ ವ್ಯಕ್ತಿಯೊಬ್ಬ ಜನರನ್ನು ವಂಚಿಸಿದ್ದಾನೆ.
ಸಿನಿಮಾ ನೋಡಿ ಪೋಲೀಸ್ ಆಗಬೇಕು ಎಂದು ಬಯಸಿದ್ದ 34 ವರ್ಷದ ವ್ಯಕ್ತಿಯೊಬ್ಬ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಎಂದು ಹೇಳಿ ಜನರನ್ನು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಲಘಟ್ಟಪುರ ಪೊಲೀಸರು ಮಂಗಳವಾರ ಚಂದ್ರಾ ಲೇಔಟ್‌ನ ಮಾರುತಿ ನಗರದ ಆರ್.ಶ್ರೀನಿವಾಸ್ ಎಂಬುವರನ್ನು ಬಂಧಿಸಿ ಬಿಎಂಡಬ್ಲ್ಯು ಸೇರಿದಂತೆ ಮೂರು ಬೈಕ್‌ಗಳನ್ನು ಹಾಗೂ ಸುಮಾರು 23 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಸುಮಾರು 1.8 ಕೋಟಿ ರೂಪಾಯಿ ವಂಚನೆಗೊಳಗಾದ ವೆಂಕಟನಾರಾಯಣ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮಾರ್ಚ್ 6 ರಂದು ಶ್ರೀನಿವಾಸ್‌ಗಾಗಿ ಹುಡುಕಾಟ ಆರಂಭಿಸಿದ್ದರು. ಆರೋಪಿ ಪೊಲೀಸರನ್ನು ಒಳಗೊಂಡ ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದರು. ಜೊತೆಗೆ ಅವರಂತೆ ಪೋಲೀಸ್ ಆಗಬೇಕೆಂಬ ಆಸೆಯನ್ನು ಬೆಳೆಸಿಕೊಂಡಿದ್ದರು.
ಕೋಟಿ ಕೋಟಿ ವಂಚಿಸಿದ ನಕಲಿ ಪೋಲಿಸಪ್ಪ
ಹೀಗಾಗಿ ಶ್ರೀನಿವಾಸ್ ಅವರು ತಮ್ಮ ಕನಸನ್ನು ನನಸಾಗಿಸಲು ಶಾರ್ಟ್‌ಕಟ್ ರೂಟ್ ಅನ್ನು ಆಯ್ಕೆ ಮಾಡಿದ್ದಾರೆ. ಅದೇನೆಂದರೆ ಒಂದು ಒಳ್ಳೆಯ ದಿನ ಅವರು ಐಪಿಎಸ್ ಅಧಿಕಾರಿಯಾಗಲು ನಿರ್ಧರಿಸಿದರು. ಅವರಂತೆ ಪೋಸ್ ಮಾಡಲು ಸಮವಸ್ತ್ರವನ್ನು ಹೊಲಿದರು.
ಸಾರ್ವಜನಿಕರ ವಿಶ್ವಾಸ ಗಳಿಸಲು ನಕಲಿ ಗುರುತಿನ ಚೀಟಿಯನ್ನೂ ಸೃಷ್ಟಿಸಿದ್ದರು. ನೀವು ಏಕೆ ಸರ್ವೀಸ್ ರಿವಾಲ್ವರ್ ಅನ್ನು ಹೊಂದಿಲ್ಲ ಎಂದು ಕೇಳಿದಾಗ, ಶ್ರೀನಿವಾಸ್ ಅವರು ಪರೀಕ್ಷೆಯಲ್ಲಿದ್ದಾರೆ ಮತ್ತು ಬೆಂಗಳೂರಿನಲ್ಲಿ ಪೋಸ್ಟ್ ಮಾಡಿದ ನಂತರ ಅದನ್ನು ಪಡೆಯುವುದಾಗಿ ಜನರಿಗೆ ಹೇಳುತ್ತಿದ್ದರು. ಶ್ರೀನಿವಾಸ ಮಾತನ್ನು ನಂಬಿದ ಕೆಲ ಜನ ಅವರನ್ನು ಸನ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿನಿಮಾದಿಂದ ಸ್ಪೂರ್ತಿ ಪಡೆದು ವಂಚನೆ
ಶ್ರೀನಿವಾಸ್ 2022 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಮನ್ ಫ್ರೆಂಡ್ಸ್ ಮೆಸೆಜ್ ಮಾಡುವ ಮೂಲಕ ವೆಂಕಟನಾರಾಯಣ್ ಅವರನ್ನು ಭೇಟಿಯಾದರು. ಶ್ರೀನಿವಾಸ್ ತಾನು ಪೊಲೀಸ್ ಎಂದು ಹೇಳಿಕೊಂಡಿದ್ದರು. ವೆಂಕಟನಾರಾಯಣ್ ಅವರಿಗೆ ಮೈಸೂರಿನಲ್ಲಿ 450 ಕೋಟಿ ರೂಪಾಯಿ ಮೌಲ್ಯದ ಭೂ ವ್ಯವಹಾರವನ್ನು ಇತ್ಯರ್ಥಪಡಿಸುತ್ತಿರುವುದಾಗಿ ಹೇಳಿಕೊಂಡರು. ಇದಕ್ಕೂ ಮುಂದೆ ಕೊಂಚ ಹಣ ಬೇಕಾಗಿದೆ ಎಂದು ಶ್ರೀನಿವಾಸ್ ಬೇಡಿಕೆ ಇಟ್ಟಿದ್ದಾನೆ. ಇದರ ಡೀಲ್ ಕುದುರಿದರೆ ಹಣವನ್ನು ಹಂಚಿಕೊಳ್ಳುವುದಾಗಿ ವೆಂಕಟನಾರಾಯಣ ಅವರಿಗೆ ಸುಳ್ಳು ಹೇಳಿದ್ದಾನೆ. ಇದನ್ನು ನಂಬಿಸಲು ವೆಂಕಟನಾರಾಯಣಗೆ ಶ್ರೀನಿವಾಸ್ 2022ರ ಡಿಸೆಂಬರ್‌ನಲ್ಲಿ ಕೊಂಚ ಹಣವನ್ನು ನೀಡಿದ್ದಾನೆ.
ಶ್ರೀನಿವಾಸ್‌ನನ್ನು ನಂಬಲು ಪ್ರಾರಂಭಿಸಿದ ವೆಂಕಟನಾರಾಯಣ್, ಜಯನಗರದ ಹೋಟೆಲ್ ಮಾಲೀಕರಿಂದ 1.2 ಕೋಟಿ ರೂ ಮತ್ತು ಇತರ ಕೆಲವು ಸ್ನೇಹಿತರಿಂದ 56 ಲಕ್ಷ ರೂ ತೆಗೆದುಕೊಂಡಿದ್ದಾರೆ. ಹಣ ವಸೂಲಿ ಮಾಡಿದ ನಂತರ ಶ್ರೀನಿವಾಸ್ ಕಾಣೆಯಾಗಿದ್ದಾನೆ. ಆರೋಪಿ ಇದೇ ರೀತಿಯ 'ಡೀಲ್' ಮಾಡಿ ಹಲವರಿಗೆ ವಂಚಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಡಿಸಿಪಿ (ಪಶ್ಚಿಮ) ಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಬಂಧನದ ವೇಳೆ ಶ್ರೀನಿವಾಸ್ ಬಳಿ ನಗದು ಇರಲಿಲ್ಲ ಮತ್ತು ತನ್ನ ಐಷಾರಾಮಿ ಜೀವನಶೈಲಿಗಾಗಿ ಎಲ್ಲವನ್ನೂ ಖರ್ಚು ಮಾಡಿದ್ದಾನೆ. ಪೊಲೀಸರ ಪ್ರಕಾರ, ಜನರಿಂದ ಹಣ ಸಂಗ್ರಹಿಸಿ ಶ್ರೀನಿವಾಸ್ ಬೆಲೆಬಾಳುವ ಹೋಟೆಲ್‌ಗಳಲ್ಲಿ ಪಾರ್ಟಿ ಮಾಡಿ ಬೈಕ್ ಖರೀದಿಸುತ್ತಿದ್ದ. ಇತರರಿಂದ ಕಣ್ಣು ತಪ್ಪಿಸಲು ಈತ ತನ್ನ ಮನೆಯನ್ನು ಬದಲಾಯಿಸಿದ್ದಾನೆ ಎಂದು ಡಿಸಿಪಿ (ಪಶ್ಚಿಮ) ಪಿ ಕೃಷ್ಣಕಾಂತ್ ತಿಳಿಸಿದ್ದಾರೆ. ಸದ್ಯ ಶ್ರೀನಿವಾಸ್ ಪೊಲೀಸರ ವಶದಲ್ಲಿದ್ದು ಆತನ ವಿಚಾರಣೆ ನಡೆಸಲಾಗಿದೆ.












Click it and Unblock the Notifications