ಬೆಂಗಳೂರು: ದಂಪತಿಯಿಂದ ಹಣ ವಸೂಲಿ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಬೆಂಗಳೂರು, ಡಿಸೆಂಬರ್ 11: ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿರುವಾಗ ದಂಪತಿಯಿಂದ 1 ಸಾವಿರ ಹಣವನ್ನು ಸುಲಿಗೆ ಮಾಡಿದ್ದ ಆರೋಪದ ಮೇರೆಗೆ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಪೊಲೀಸ್ ಪೇದೆಗಳು ಅಮಾನತುಗೊಂಡಿದ್ದಾರೆ.
ಡಿಸಿಪಿ ಅನೂಪ್ ಶೆಟ್ಟಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಮುಖ್ಯ ಪದೇ ರಾಜೇಶ್ ಹಾಗೂ ಪೇದೆ ನಾಗೇಶ್ ಎಂಬುವವರನ್ನು ಹಣ ಸುಲಿಗೆ ಆರೋಪದ ಮೇರೆಗೆ ಅಮಾನತು ಮಾಡಿ ಆದೇಶಿಸಿದ್ದಾರೆ. ಜೊತೆಗೆ ಪ್ರಕರಣ ಕುರಿತು ತನಿಖೆ ಮಾಡಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಡಿಸೆಂಬರ್ 8ರಂದು ಮಧ್ಯರಾತ್ರಿ 12.30ರ ಹೊತ್ತಿಗೆ ನಾನು ಹಾಗೂ ಪತ್ನಿ ಸ್ನೇಹಿತರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಮಾನ್ಯತಾ ಟೆರ್ಕ್ ಬಳಿ ಬರುತ್ತಿದ್ದೆವು. ಆಗ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು ರಾತ್ರಿ 12.30ರ ವೇಳೆಗೆ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದೀರಿ ಎಂದು ಹೇಳಿ 3,000ರೂ.ಗೆ ನೀಡುವಂತೆ ಬೇಡಿಕೆ ಇಟ್ಟರು.
ಇದನ್ನು ಆಕ್ಷೇಪಿಸಿದಾಗಿ ಅವರು ಕೊನೆಗೆ ಡಿಜಿಟಲ್ ಪೇಪೆಂಟ್ ಮೂಲಕ 1ಸಾವಿರ ರೂ. ಹಣ ಪಡೆದಿದ್ದರು ಎಂದು ಆರೋಪಿಸಿರುವ ಕಾರ್ತಿಕ್ ಪಾತ್ರಿ ಎಂಬುವವರು ಸರಣಿ ಟ್ವೀಟ್ ಮಾಡಿದ್ದಾರೆ. ಟೀಟ್ ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಅವರ ಟ್ವೀಟ್ ಗಮನಿಸಿದ ಡಿಸಿಪಿ ಅನೂಪ್ ಶೆಟ್ಟಿ ಅವರು ಆ ಸ್ಥಳದಲ್ಲಿ ಕರ್ತವ್ಯದಲ್ಲಿ ಸಿಬ್ಬಂದಿ ಪತ್ತೆಗೆ ಸೂಚಿಸಿದ್ದರು.

ಬಂಧನದ ಬೆದರಿಕೆ ಒಡ್ಡಿದ ಪೇದೆಗಳು
ನಾವು ಮಾನ್ಯತಾ ಟೆಕ್ ಪಾರ್ಕ್ ಬಳಿ ವಾಸಿಸುತ್ತಿದ್ದೇವೆ. ಕೈಯಲ್ಲಿದ್ದ ಬಾಕ್ಸ್‌ನಲ್ಲಿ ಕೇಕ್ ಬಿಟ್ಟರೆ ಬೇರೇನೂ ಇರಲಿಲ್ಲ. ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಫೋಟೊ ಪ್ರತಿಗಳಿದ್ದವು. ಅದನ್ನು ತೋರಿಸಿದರೂ ಸುಮ್ಮನಿರದ ಪೊಲೀಸರು ಕೆಲಸದ ಸ್ಥಳ, ಪೋಷಕರ ವಿವರ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದರು. ಎಲ್ಲದ್ದಕ್ಕೂ ತಾಳ್ಮೆಯಿಂದಲೇ ಉತ್ತರಿಸಿದೆವು. ಒಬ್ಬ ಪೇದೆ ದಂಡದ ಚಲನ್‌ನಲ್ಲಿ ಆಧಾರ್ ಸಂಖ್ಯೆ ಹಾಗೂ ಹೆಸರು ಬರೆಯಲು ಮುಂದಾದರು ಎಂದು ಕಾರ್ತಿಕ್ ಪಾತ್ರಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ರಾತ್ರಿ 11ರ ನಂತರ ಈ ರೀತಿ ಓಡಾಡಲು ಅವಕಾಶ ಇಲ್ಲ ಎಂದರು. ಅಂತಹ ನಿಯಮವಿದೆಯೇ? ಆ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದಿದ್ದಕ್ಕೆ ನಮಗೆ ಬೆದರಿಕೆ ಹಾಕಿದರು. ಮೊಬೈಲ್ ಕಸಿದುಕೊಂಡಿದ್ದಲ್ಲದೇ 3 ಸಾವಿರ ದಂಡ ಕಟ್ಟಿ ಇಲ್ಲವಾದರೆ ಬಂಧಿಸುವುದಾಗಿ ಹೇಳಿದರು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಘಟನೆ ಕುರಿತು ಕೆಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications