Vande Bharat Express: ರೈಲು ಸಂಚಾರ 6.30 ಗಂಟೆ ತಡ! ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದ ಓಣಂ ಪ್ರಯಾಣಿಕರು
ಬೆಂಗಳೂರು: ಕೇರಳ ಓಣಂ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ತೆರಳಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಭಾನುವಾರ (ಆ.23) ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಗಂಟೆಗಳ ಕಾಲ ನಿಲ್ದಾಣಗಳಲ್ಲಿ ಕಾಯುವಂತಾಯಿತು. ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೆಕ್ಯಾನಿಕಲ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ರೈಲು ಬೆಳಗಿನ ಜಾವ ನಿಗದಿತ ಸಮಯದಲ್ಲಿ ಚಲಿಸಲಿಲ್ಲ.
ಕೇರಳದಲ್ಲಿ ಪ್ರಸಿದ್ಧ ಹಬ್ಬ ಓಣಂ ಇದೇ ಆಗಸ್ಟ್ 26ರಂದು ನಡೆಯಲಿದೆ. ಈ ಸಂಬಂಧ ರಜೆ ಹಾಕಿ ಕೇರಳದ ತಮ್ಮ ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಭಾನುವಾರ ಬೆಳಗ್ಗೆಯೇ ಮೂಡ್ ಆಫ್ ಆಗಿದೆ. ಕಾರಣ ಬೆಳಗ್ಗೆ 5.10ಕ್ಕೆ ಬೆಂಗಳೂರಿನ ಕೆ.ಆರ್.ಪುರಂ ನಿಲ್ದಾಣದಿಂದ ಹೊರಬೇಕಿದ್ದ ಎರ್ನಾಕುಲಂ ವಂದೇ ಭಾರತ್ ರೈಲು ಬೆಳಗ್ಗೆ 11.45ಗಂಟೆಗೆ ಅಂದರೆ ಸುಮಾರು 6.30 ಗಂಟೆಗಳ ತಡವಾಗಿ ಚಲಿಸಿತು. ಇದರಿಂದ ಪ್ರಯಾಣಿಕರು ನಿಲ್ದಾಣದಲ್ಲಿ ಕೂರಲು ಜಾಗವಿಲ್ಲದೇ, ಅದರಲ್ಲಿ ಮಹಿಳಾ ಪ್ರಯಾಣಿಕರು ಅಗತ್ಯ ಮೂಲಸೌಲಭ್ಯ ಕೊರತೆ ಅನುಭವಿಸಿದರು.

ವಿಬಿ ರೈಲು ಇಷ್ಟೊತ್ತು ತಡವಾಗಲು ಕಾರಣವೇನು?
ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ರೈಲಿಗೆ KSR ರೈಲು ನಿಲ್ದಾಣದಲ್ಲೂ ಅನೇಕ ಪ್ರಯಾಣಿಕರು ಕಾಯುತ್ತಿದ್ದರು. ನಿಗದಿಯಂತೆ ಬೆಳಗ್ಗೆ 5.10 ಗಂಟೆಗೆ ಕೆ.ಆರ್.ಪರಂ ಬಿಡಬೇಕಿತ್ತು. ಆದರೆ ರೈಲಿನ ಎಕ್ಸೆಲ್ ಹೀಟ್ ಆಗಿದ್ದರಿಂದ ರೈಲಿನ ಚಕ್ರಗಳು ಉರುಳುವ ಸ್ಥಿತಿಯಲ್ಲಿ ಇರಲಿಲ್ಲ. ಈ ಮೆಕ್ಯಾನಿಕಲ್ ದೋಷ ಸರಿಪಡಿಸಲು ಗಂಟೆಗಳ ಸಮಯ ಹಿಡಿಯಿತು.
ತಾಂತ್ರಿಕ ವೈಫಲ್ಯ ಹಾಗೂ ಬ್ರೇಕ್‌ಗಳು ಎಳೆತದಿಂದಾಗಿ ಆಕ್ಸೆಲ್ ಅತೀಯಾಗಿ ಬಿಗಿಯಾದಾಗ ಘರ್ಷಣೆಗೆ ಎಕ್ಸೆಲ್ ಹೀಟ್ ಆಗುತ್ತದೆ. ಇದನ್ನು ಸರಿಪಡಿಸದೇ ಹಾಗೇ ರೈಲು ಓಡಿಸಿದರೆ ಬೇರಿಂಗ್ ಕಟ್ ಆಗುವ, ರೈಲು ಹಳಿ ತಪ್ಪುವ ಸಾಧ್ಯತೆಗಳು ಇರುತ್ತದೆ. ಅಲ್ಲದೇ ಆಕ್ಸೆಲ್ ತಿರುಗದೇ ಬೆಂಕಿ ಕಿಡಿ ಹೊತ್ತಿ ದೊಡ್ಡ ಅವಘಡವು ಸಂಭವಿಸಲೂ ಬಹುದು. ಈ ಕಾರಣದಿಂದ ದೋಷ ಸರಿಪಡಿಸಲು ಸಮಯ ಹಿಡಿಯಿತು.
ರೈಲಿನ ನಿಖರ ಸಮಯ ತಿಳಿಯದೇ ಗೊಂದಲ!
ಮುಂಚಿತವಾಗೇ ನಿಲ್ದಾಣಕ್ಕೆ ಬಂದು ನಿಂತಿದ್ದ ಪ್ರಯಾಣಿಕರಿಗೆ 5.20ರ ಹೊತ್ತಿಗೆ ರೈಲು ತಡವಾಗಿ ಹೊರಡಲಿದೆ ಎಂಬ ಮಾಹಿತಿ ಕಂಟ್ರೊಲರ್ ನಿಂದ ದೊರೆಯಿತು. ಮೊದಲಿಗೆ 5.30ಕ್ಕೆ ಹೊರಡಲಿದೆ ಎಂದಿದ್ದ ರೈಲ್ವೆ ಅಧಿಕಾರಿಗಳು, ನಂತರ 8.45ಕ್ಕೆ ಪ್ರಯಾಣ ಆರಂಭಿಸುತ್ತದೆ ಎಂದು ಹೇಳುವ ಮೂಲಕ ಪ್ರಯಾಣಿಕರಿಗೆ ಆಘಾತ ನೀಡಿದರು.
ಬಳಿಕ 11.10ಕ್ಕೆ ಹೊರಡಲಿದೆ ಎನ್ನಲಾಗಿತು. ಕೊನೆಗೆ ಸಮಸ್ಯೆ ಪೂರ್ಣಗೊಂಡು ರೈಲು 11.45ಕ್ಕೆ ಪ್ರಯಾಣ ಆರಂಭಿಸಿತು. ಕೆ.ಆರ್.ಪುರಂ ನಿಲ್ದಾಣದಲ್ಲಿ ಹೆಚ್ಚಿನ ದಟ್ಟಣೆ ಕಂಡು ಬಂದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಕೂರಲು ವಿಶ್ರಾಂತಿ ಕೊಠಡಿ ಸಿಗಲಿಲ್ಲ. ಇನ್ನಿತರ ಮೂಲಭೂತ ಸಮಸ್ಯೆಗಳನ್ನು ಅನುಭವಿಸಬೇಕಾಯಿತು ಎಂದು ಕೆಲವು ಪ್ರಯಾಣಿಕರು ದೂರಿದ್ದಾರೆ.
ರೈಲು ತಡವಾಗಿದ್ದರಿಂದ ಬೆಂಗಳೂರಿನ ಎರಡು ನಿಲ್ದಾಣದಲ್ಲಿ ಕೇರಳ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳೇ ತಿಂಡಿ ವ್ಯವಸ್ಥೆ ಮಾಡಿದರು. ರೈಲು ಸಂಚಾರ ಆರಂಭವಾಗುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.


Click it and Unblock the Notifications
