Bengaluru: ಬೆಂಗಳೂರಲ್ಲಿ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟ; ಪಾದಚಾರಿಗಳಿಗೆ ಗಾಯ
ಬೆಂಗಳೂರು: ನಗರದಲ್ಲಿ ವಿದ್ಯುತ್ ಅವಘಡಗಳ ಸರಣಿ ಆತಂಕ ಮೂಡಿಸಿದೆ. ಬಾಗಲೂರು ಮುಖ್ಯರಸ್ತೆಯಲ್ಲಿ ಅಮೆಜಾನ್ ಕಚೇರಿ ಎದುರು ಫುಟ್‌ಪಾತ್‌ನಲ್ಲಿದ್ದ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ (Ring Main Unit-RMU) ಏಕಾಏಕಿ ಸ್ಫೋಟಗೊಂಡು ಪಾದಚಾರಿಯೊಬ್ಬರು ಗಾಯಗೊಂಡಿದ್ದಾರೆ. ಮತ್ತೊಂದೆಡೆ ಬೆನ್ನಿಗಾನಹಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ನಾಲ್ವರು ಗಾಯಗೊಂಡಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಐವರು ಗಾಯಗೊಂಡಿದ್ದಾರೆ.
ಬುಧವಾರ ಬೆಳಗ್ಗೆ ಸುಮಾರು 9.40ಕ್ಕೆ ಬಾಗಲೂರು ಮುಖ್ಯರಸ್ತೆಯ ಅಮೆಜಾನ್ ಕಚೇರಿಯ ಗೇಟ್ ನಂಬರ್ 3ರ ಮುಂಭಾಗದಲ್ಲಿದ್ದ ಹೊರಾಂಗಣ RMU ಸ್ಫೋಟಗೊಂಡಿದೆ. ಈ ವೇಳೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೊಹಮ್ಮದ್ ಅಫ್ರೋಜ್ (35) ಗಾಯಗೊಂಡಿದ್ದಾರೆ. ಅವರ ಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Bengaluru: ಕಾರಿನ ಡ್ಯಾಶ್‌ಕ್ಯಾಮ್‌ನಲ್ಲೂ ಸೆರೆ
ಸ್ಫೋಟದ ವೇಳೆ ಸ್ಥಳದಲ್ಲಿ ಶಾಲಾ ಮಕ್ಕಳು ಸೇರಿದಂತೆ ಹಲವು ಮಂದಿ ಸಂಚರಿಸುತ್ತಿದ್ದರು. ಹೀಗಾಗಿ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ದೃಶ್ಯ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲೂ ಸೆರೆಯಾಗಿದೆ.
ಮಕ್ಕಳನ್ನು ಶಾಲೆಗೆ ಬಿಡಲು ಕಾರಿನಲ್ಲಿ ತೆರಳುತ್ತಿದ್ದ ಅರುಣ್ ಗೋಪಾಲ್ ಸ್ಫೋಟವನ್ನು ಕಣ್ಣಾರೆ ಕಂಡಿದ್ದಾರೆ. ಅವರ ಪ್ರಕಾರ, ಸ್ಫೋಟ ಸಂಭವಿಸಿದ ವೇಳೆ ಫುಟ್‌ಪಾತ್‌ನಲ್ಲಿ ಇಬ್ಬರು ನಡೆದುಕೊಂಡು ಹೋಗುತ್ತಿದ್ದರು. ಅವರಲ್ಲಿ ಒಬ್ಬರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿರುವುದನ್ನು ಅವರು ಗಮನಿಸಿದ್ದಾರೆ. ಸ್ಫೋಟದ ಬಳಿಕ ಸ್ಥಳೀಯರು ಗಾಯಾಳುವಿನ ನೆರವಿಗೆ ಧಾವಿಸಿದ್ದಾರೆ.
ಇದೇ ವೇಳೆ ಮಂಗಳವಾರ ಮಧ್ಯಾಹ್ನ ಬೆನ್ನಿಗಾನಹಳ್ಳಿಯ ಕೋಕಾ-ಕೋಲಾ ಈಸ್ಟ್ ಡಿಪೋ ಸಮೀಪವೂ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿದೆ. ಮಧ್ಯಾಹ್ನ 12.30ರಿಂದ 1 ಗಂಟೆಯ ನಡುವೆ ಸಂಭವಿಸಿದ ಈ ಘಟನೆಯಲ್ಲಿ ನಾರಾಯಣ್ (50), ಅಜೀಂ ಪಾಷಾ, ಚೇತನ್ (23) ಹಾಗೂ ಲಕ್ಷ್ಮೀ (22) ಗಾಯಗೊಂಡಿದ್ದಾರೆ. ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ಪರಿಣಾಮ ಬೈಕ್‌ವೊಂದು ಬೆಂಕಿಗಾಹುತಿಯಾಗಿದೆ.
Bengaluru: RMU ಸ್ಫೋಟಕ್ಕೆ ಇಲಿ ಕಾರಣ?
ಬಾಗಲೂರು ಮುಖ್ಯರಸ್ತೆಯಲ್ಲಿನ RMU ಅನ್ನು ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ RMUನ CT ಚೇಂಬರ್‌ಗೆ ಇಲಿ ನುಗ್ಗಿದ್ದರಿಂದ ಫ್ಲ್ಯಾಶ್‌ಓವರ್ ಸಂಭವಿಸಿ ಸ್ಫೋಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಅಫ್ರೋಜ್ ಅವರ ಆರೋಗ್ಯದ ಬಗ್ಗೆಯೂ ಬೆಸ್ಕಾಂ ಅಧಿಕಾರಿಗಳು ಆಸ್ಪತ್ರೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಅವರು ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆನ್ನಿಗಾನಹಳ್ಳಿ ಟ್ರಾನ್ಸ್‌ಫಾರ್ಮರ್ ಸ್ಫೋಟದ ಕುರಿತು ರಾಮಮೂರ್ತಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಚರಿಸುವ ಫುಟ್‌ಪಾತ್‌ಗಳಲ್ಲಿ ಅಳವಡಿಸಿರುವ ವಿದ್ಯುತ್ ಉಪಕರಣಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಮೂಡಿವೆ.


Click it and Unblock the Notifications
