ಯುವಕನಿಗೆ ಕಿರುಕುಳ ಆರೋಪ ಇಬ್ಬರು ಪೊಲೀಸ್ ಪೇದೆ ಅಮಾನತು
ಬೆಂಗಳೂರು, ಜನವರಿ 16: ಯವಕನಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಆಧಾರದಲ್ಲಿ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಪೇದೆ ಸೋಮವಾರ ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.
ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಇಂಟರ್ನಿ ಆಗಿ ಕೆಲಸ ನಿರ್ವಹಿಸುತ್ತಿರುವ ಯುವಕ ವೈಭವ್ ಪಾಟೀಲ್ ಎಂಬವವರು ಅಮಾನತುಗೊಂಡ ಇಬ್ಬರು ಪೇದೆಗಳ ವಿರುದ್ಧ ಆರೋಪ ಮಾಡಿದ್ದಾರೆ. ಈ ಯುವಕ ಪೊಲೀಸರು ಹಣಕ್ಕಾಗಿ ಹೇಗೆ ಕಿರುಕುಳ ನೀಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂಬುದನ್ನು ಟ್ವಿಟರ್ ನಲ್ಲಿ ವಿವರಿಸಿ ಪೋಸ್ಟ್ ಹಂಚಿಕೊಂಡಿದ್ದರು. ಪೋಲೀಸರ ವಿರುದ್ಧ ಈ ಆರೋಪ ಪ್ರಶ್ನಿಸಿ ಅನೇಕರು ಯುವಕನ ಪರವಾಗಿ ಕಾಮೆಂಟ್ ಮಾಡಿದ್ದರು. ಬಳಿಕ ಯುವಕ ಪೋಸ್ಟ್ ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ.
ಬೆಂಗಳೂರು (ದಕ್ಷಿಣ) ಉಪ ಪೊಲೀಸ್ ಆಯುಕ್ತರಾದ ಸಿ.ಕೆ ಬಾಬಾ ಅವರು ಕಿರುಕುಳ ಆರೋಪ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಂಡೆಪಾಳ್ಯ ಪೊಲೀಸ್ ಠಾಣೆಯಿಂದ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಆದೇಶಿಸಿದ್ದೇವೆ. ಟ್ವೀಟ್ ಪರಿಶೀಲಿಸಿ ಯುವಕನ ದೂರಿನ ಆಧಾರದ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

ನಗರದಲ್ಲಿ ಗುರುವಾರ ತಡರಾತ್ರಿ ಬಂಡೆಪಾಳ್ಯ ಪೊಲೀಸ್ ಠಾಣೆಯ ಇಬ್ಬರು ಪೇದೆಗಳು ತನ್ನನ್ನು ತಡೆದು ನಿಲ್ಲಿಸಿ ಬ್ಯಾಗ್ ಅನ್ನು ಪರಿಶೀಲಿಸಿದರು. ಇದರಲ್ಲಿ ನಾನು ಗಾಂಜಾ ಇಟ್ಟಿರುವುದಾಗಿ ಅವರು ಆರೋಪಿಸಿದರು. ಬಳಿಕ ಇಬ್ಬರು ಪೊಲೀಸ್ ಪೇದೆಗಳು ತನ್ನಿಂದ ಹಣ ನೀಡುವಂತೆ ಬೇಡಿಕೆ ಇಟ್ಟರು. ಅಲ್ಲದೇ ನಿನ್ನ ವಿರುದ್ಧ ಮಾದಕ ದ್ರವ್ಯದ ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತೇವೆ ಎಂದೆಲ್ಲ ಬೆದರಿಸಿದರು. ನಂತರ ನನ್ನಿಂದ 2,500 ರೂ. ಪಡೆದು ಸ್ಥಳದಲ್ಲೇ ಹಂಚಿಕೊಂಡಿದ್ದಾರೆ ಎಂದೆಲ್ಲ ಯುವಕ ಆರೋಪಿಸಿ ಬರೆದುಕೊಂಡಿದ್ದ.
ದಂಪತಿ ಅಡ್ಡಗಟ್ಟಿದ್ದವರು ಅಮಾನತು
ಯುವಕ ವೈಭವ್ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಇಂಟರ್ನಿ ಆಗಿ ಕೆಲಸ ಮಾಡುತ್ತಿದ್ದು, ಈತ ಮೂಲತಃ ಹಿಮಾಚಲ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ. ಇಂತಹ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಗಸ್ತು ತಿರುಗುವ ವೇಳೆ ದಂಪತಿಯನ್ನು ಸುಲಿಗೆ ಮಾಡಿದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸಹ ಪೊಲೀಸ್ ಇಲಾಖೆ ಅಮಾನತು ಮಾಡಲಾಗಿತ್ತು.
ಆ ದಂಪತಿಯು ತಮಗಾದ ಕಿರುಕುಳವನ್ನು ಟ್ವಿಟರ್ ಮೂಲಕ ದೂರಿದ್ದರು. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದರು. ಈ ಪೋಸ್ಟ್ ಭಾರೀ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಇಂತಹ ವರ್ತನೆ ಯಾವ ಸಿಬ್ಬಂದಿಯಿಂದ ಸಹಿಸುವುದಿಲ್ಲ. ಜನರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications