ಏರೋನಿಕ್ಸ್ ಕಂಪನಿ ಎಂಡಿ, ಸಿಇಒ ಕೊಲೆ ಪ್ರಕರಣ: ಎಎಪಿ ಮುಖಂಡನ ಬಂಧನ
ಬೆಂಗಳೂರು, ಜುಲೈ 13: ಬೆಂಗಳೂರಿನಲ್ಲಿ ನಡೆದಿದ್ದ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ-ನೆಟ್ ಕಂಪನಿ ಮಾಲೀಕ ಹಾಗೂ ಎಎಪಿ ಮುಖಂಡ ಅರುಣ್ ಕುಮಾರ್ ಎಂಬಾತನನ್ನು ಈಗ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಜಿ-ನೆಟ್ ಕಂಪನಿ ಮಾಲೀಕನಾಗಿರುವ ಆರೋಪಿ ಅರುಣ್ ಕುಮಾರ್ ರಾಜಕೀಯ ವ್ಯಕ್ತಿಯಾಗಿದ್ದು, ಎಎಪಿ ಮುಖಂಡ ಎನ್ನಲಾಗಿದೆ. ಈತ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ, ಸಿಇಒ ವಿನುಕುಮಾರ್ ಕೊಲೆಗೆ ಸುಪಾರಿ ನೀಡಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.

ಈಗ ಅಮೃತಹಳ್ಳಿ ಪಂಪಾನಗರದಲ್ಲಿ ನಡೆದ ಜೋಡಿ ಕೊಲೆಗೆ ಅರುಣ್ ಕುಮಾರ್ ಪ್ರಕರಣದಲ್ಲಿ ಈತ ಸುಪಾರಿ ನೀಡಿದ್ದ ಎಂಬ ಸತ್ಯ ಬಯಲಾಗಿದೆ. ಅಮೃತಹಳ್ಳಿ ಪೊಲೀಸರು ಆರೋಪಿ ಅರುಣ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಈ ವೇಳೆ ಜೋಕರ್ ಫಿಲೆಕ್ಸ್ಗೆ ಸುಪಾರಿ ನೀಡಿದ್ದಾಗಿ ಅರುಣ್ ಒಪ್ಪಿಕೊಂಡಿದ್ದಾನೆ.
ಪೊಲೀಸರು ವಿಚಾರಣೆ ನಡೆಸುವ ವೇಳೆ ಈತ ಸತ್ಯ ಬಾಯ್ಬಿಟ್ಟಿದ್ದು, ಕೊಲೆಯಾದ ಫಣೀಂದ್ರ, ವಿನುಕುಮಾರ್ ಇಬ್ಬರೂ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಫಿಲೆಕ್ಸ್ ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಫಣೀಂದ್ರ, ವಿನುಕುಮಾರ್ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದರು ಎಂದು ತಿಳಿದು ಬಂದಿದೆ.
ಕಂಪೆನಿ ಆರಂಭಿಸಿದಾಗ ಜಿ-ನೆಟ್ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್ ಕಂಪನಿಗೆ ನಷ್ಟವಾಗಿತ್ತು. ಇದರಿಂದ ಅರುಣ್ ಆಕ್ರೋಶಗೊಂಡಿದ್ದನು. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಫಣೀಂದ್ರ ಕೊಲೆಗೆ ಫಿಲೆಕ್ಸ್ಗೆ ಸುಪಾರಿ ನೀಡಿದ್ದ ಎಂದು ಗೊತ್ತಾಗಿದೆ.
ಇನ್ನು ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಮಾಡಿ ತಪ್ಪಿಸಿಕೊಳ್ಳುವುದು ಹೇಗೆ ಎಂದೂ ಕೂಡ ಆರೋಪಿಗಳು ಯೋಜನೆ ಹಾಕಿಕೊಂಡಿದ್ದರು. ಆದರೆ ಹತ್ಯೆಗೆ ಬೈಕ್‌ನಲ್ಲಿ ಬಂದಿದ್ದ ಹಂತಕರು ತಪ್ಪಿಸಿಕೊಂಡದ್ದು ಮಾತ್ರ ಬರಿಗಾಲಲ್ಲಿ. ಕೊಲೆ ನಂತರ ತಪ್ಪಿಸಿಕೊಳ್ಳೋದು ಆಗೋದು ಹೇಗೆ ಅನ್ನೊದನ್ನು ಆರೋಪಿ ಫಿಲೆಕ್ಸ್ ಮೊದಲೇ ಪ್ಲಾನ್ ಮಾಡಿಕೊಂಡಿದ್ದನು.
ಒಂದು ತಿಂಗಳ ಹಿಂದೆಯೇ ಕೊಲೆ ಮಾಡಲು ಸ್ಥಳ ಪರಿಶೀಲನೆ ಮಾಡಿದ್ದ ಆರೋಪಿ ಫಿಲೆಕ್ಸ್, ತಪ್ಪಿಸಿಕೊಂಡು ಹೋಗುವ ದಾರಿಗಳನ್ನು ಗುರುತು ಹಾಕಿಕೊಂಡು ತಿಳಿದುಕೊಂಡಿದ್ದನು. ಕೊಲೆ ಮಾಡಿದ್ದ ಆರೋಪಿಗಳು ಹಿಂಬದಿ ಡೋರ್ ತೆಗೆದು ಕಾಂಪೌಂಡ್ ಹಾರಿ ತಪ್ಪಿಸಿಕೊಂಡು ನಂತರ ಮುಖ್ಯ ರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದರು.
ಕೊಲೆ ಮಾಡಿದ ನಂತರ ಫಿಲೆಕ್ಸ್ ಮತ್ತು ಆತನ ತಂಡ ತಪ್ಪಿಸಿಕೊಂಡು ಹೋಗೋ ಸಿಸಿಟಿವಿ ದೃಶ್ಯ ಸಿಕ್ಕಿತ್ತು. ಆರೋಪಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್ ಜೇಬಿನಲ್ಲಿ ಡ್ರ್ಯಾಗರ್ ಇಟ್ಟುಕೊಂಡು ಎಸ್ಕೇಪ್ ಆಗಿದ್ದು ಡ್ರ್ಯಾಗರ್ ಇಟ್ಟುಕೊಳ್ಳಲು ಸಂತೋಷ್ ಸಹಾಯ ಮಾಡಿದ್ದನು. ಹತ್ಯೆ ಮಾಡಲು ಆರೋಪಿ ಫಿಲೆಕ್ಸ್ ಜುಬ್ಬ ಧರಿಸಿ ಕೊಲೆ ಮಾಡಲು ಬಂದಿದ್ದ. ಯಾರ ಭಯವೂ ಇಲ್ಲದೇ ರಾಜಾರೋಷವಾಗಿ ಆರೋಪಿಗಳು ತಪ್ಪಿಸಿಕೊಂಡು ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸಿಕ್ಕಿದ್ದವು.












Click it and Unblock the Notifications