ಬೆಂಗಳೂರು: ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿ ಶವ ಪತ್ತೆ
ಬೆಂಗಳೂರು, ಆಕ್ಟೋಬರ್ 08: ಬೆಳ್ಳಂದೂರು ಬಳಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ದ್ವಿತೀಯ ಪಿಯು ವಿದ್ಯಾರ್ಥಿ ಸಾರ್ಥಕ್ ಪುರಾಣಿಕ್ ಎಂದು ಗುರುತಿಸಲಾಗಿದೆ.
ಚೈತನ್ಯ ಟೆಕ್ನಾಲಜಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಾರ್ಥಕ್ ಶೌಚಾಲಯಕ್ಕೆ ಹೋದವನು ಎಷ್ಟು ಹೊತ್ತಾದರೂ ಹೊರಕ್ಕೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಸಹಪಾಠಿಗಳು ಬಾಗಿಲು ಬಡಿದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ನಂತರ ಹಾಸ್ಟೆಲ್ ಸಿಬ್ಬಂದಿ ನೆರವು ಪಡೆದು ಹೊರಗಡೆ ಕಿಟಕಿಯಿಂದ ಹೋಗಿ ನೋಡಿದಾಗ, ಸಾರ್ಥಕ್ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಬಾಗಿಲು ಒಡೆದು, ಒಳಗೆ ಹೋಗಿ ಸಾರ್ಥಕ್ ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲೇ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಬಂದಿರುವ ಬೆಳ್ಳಂದೂರು ಠಾಣೆ ಪೊಲೀಸರು, ಪರಿಶೀಲನೆ ನಡೆಸಿ, ಸಹಪಾಠಿಗಳ ಹೇಳಿಕೆ ಪಡೆದುಕೊಂಡು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ಥಕ್
ಧಾರವಾಡ ಮೂಲದ ಶ್ರೀಕಾಂತ್ ಹಾಗೂ ಸುಚೇತನಾ ದಂಪತಿಯ ಪುತ್ರನಾದ ಸಾರ್ಥಕ್, ಚೈತನ್ಯ ಟೆಕ್ನಾಲಜಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಕಾಲೇಜಿನಲ್ಲಿ ಯಾವುದೇ ತೊಂದರೆಯಾಗಿಲ್ಲ. ಆತನ ರೂಮಿನಲ್ಲಿ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ತನಿಖೆ ಮುಂದುವರೆದಿದೆ ಎಂದು ಬೆಳ್ಳಂದೂರು ಠಾಣಾಧಿಕಾರಿ ಹೇಳಿದ್ದಾರೆ.












Click it and Unblock the Notifications