ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಬಲಿ ಪಡೆದ ಟಿಪ್ಪರ್ ಚಾಲಕನ ಬಂಧನ
Bengaluru Accident News: ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ರಸ್ತೆಗಳಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಾಯ್ತೆರೆದು ಜನರ ಬಲಿ ಪಡೆದ ಘಟನೆಗಳು ನಡೆಯುತ್ತಲಿವೆ. ಇನ್ನು ಇತ್ತೀಚೆಗಷ್ಟೇ ನಗರದ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋದ ವೇಳೆ ವಿದ್ಯಾರ್ಥಿನಿಯನ್ನು ಬಲಿ ಪಡೆದಿದ್ದ ಟಿಪ್ಪರ್ ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ.
ಬೂದಿಗೆರೆ ಕ್ರಾಸ್ ಬಳಿ ವಿದ್ಯಾರ್ಥಿನಿ ಬಲಿ ಪಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದ ಆರೋಪಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಜೆರಾಲ್ಡ್ ಮಂಡಲ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾಗಳನ್ನು ಆಧರಿಸಿ ಟಿಪ್ಪರ್ ಲಾರಿ ಪತ್ತೆ ಹಚ್ಚಿ ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 29ರಂದು ಟಿಪ್ಪರ್ ಲಾರಿ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ನಡೆದಿತ್ತು. ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ವಿದ್ಯಾರ್ಥಿನಿ ಧನುಶ್ರೀ (21) ರಸ್ತೆಗೆ ಬಿದ್ದಿದ್ದಳು. ಈ ವೇಳೆ ಆಕೆಯ ಮೇಲೆ ಟಿಪ್ಪರ್ ಹರಿದ ಹಿನ್ನೆಲೆ ಸಾವನ್ನಪ್ಪಿದ್ದಳು. ಈ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅಪಘಾತ ನಡೆದ ವೇಳೆ ಟಿಪ್ಪರ್ ಸಮೇತ ಚಾಲಕ ಎಸ್ಕೇಪ್ ಆಗಿದ್ದ.
ಬಳಿಕ ಅಪಘಾತಕ್ಕೆ ಕಾರಣನಾದ ಪೊಲೀಸರು ಟಿಪ್ಪರ್ ಹಾಗೂ ಚಾಲಕನಿಗಾಗಿ ಶೋಧಕಾರ್ಯಕ್ಕೆ ಮುಂದಾಗಿದ್ದರು. ಇದೀಗ ಕೊನೆಗೂ ಟಿಪ್ಪರ್ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭೀಕರ ಅಪಘಾತದಲ್ಲಿ ಇಬ್ಬರು ಸಾವು: ಇನ್ನೋವಾ ಕಾರು ಹಾಗೂ ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿದೆ.
ಇನ್ನೋವಾ ಕಾರು ಹಾಗೂ ಟಂಟಂ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ನಡೆದಿದೆ. ಇನ್ನೋವಾ ಕಾರು ಹಾಗೂ ಟಂಟಂ ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಎಂಬುವವರು ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇನ್ನು ವಿಶಾಲ್ ವರತಿಲ್ಲೆ, ವಿಜಯಕುಮಾರ್ ಭೋವಿ, ಗುರುಪ್ರಸಾದ್ ಸುಂಕದ ಎಂಬುವರು ಗಾಯಾಳುಗಳಾಗಿದ್ದು, ಇವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಮತ್ತು ಗಾಯಾಳುಗಳು ನವನಗರದ 45ನೇ ಸೆಕ್ಟರ್ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನೆ ಸ್ಥಳಕ್ಕೆ ಆಮಿಸಿದ ಕಲಾದಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಅಪಘಾತದ ಹಿನ್ನೆಲೆ: ಊಟಕ್ಕೆಂದು ಹತ್ತಿರದ ವಿಜಯಪುರ ಜಿಲ್ಲೆಯ ಕೊಲ್ಹಾರಕ್ಕೆ ಹೋಗಿದ್ದ ಐವರಿದ್ದ ಟಂಟಂ ವಾಹನ ತಡರಾತ್ರಿ ಬಾಗಲಕೋಟೆ ಕಡೆಗೆ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇನ್ನೋವಾ ಕಾರು ಚಾಲಕನ ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮುಂದೆ ಹೋಗುತ್ತಿದ್ದ ಮಹಿಂದ್ರಾ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಟಂಟಂಗೆ ಡಿಕ್ಕಿ ಹೊಡೆದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹೀಗೆ ಅಪಘಾತ ಪ್ರಕರಾಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ.












Click it and Unblock the Notifications