Breaking; ಬೆಂಗಳೂರಿನ ಕಾಲೇಜಿನಲ್ಲಿ ಬಿಇ ವಿದ್ಯಾರ್ಥಿನಿ ಹತ್ಯೆ
ಬೆಂಗಳೂರು, ಜನವರಿ 02; ಬೆಂಗಳೂರು ನಗರದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜನಕುಂಟೆ ಪ್ರದೇಶದಲ್ಲಿನ ಖಾಸಗಿ ಕಾಲೇಜಿನಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೊಲೆಯಾದ ವಿದ್ಯಾರ್ಥಿನಿಯನ್ನು ಲಯಸ್ಮಿತಾ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಪವನ್ ಕಲ್ಯಾಣ್ ಎಂದು ಗುರುತಿಸಲಾಗಿದೆ. ಲಯಸ್ಮಿತಾ ಪವನ್ ಕಲ್ಯಾಣ್ ಪ್ರೀತಿಸಲು ನಿರಾಕರಿಸಿದ್ದಳು ಎಂಬ ಮಾಹಿತಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ, ಆರೋಪಿ ತಾನು ಸಹ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಧ್ಯಾಹ್ನ ಏಕಾಏಕಿ ಲಯಸ್ಮಿತಾ ಮೇಲೆ ಪವನ್ ಕಲ್ಯಾಣ್ ದಾಳಿ ಮಾಡಿದ್ದಾನೆ. ಆಕೆಯ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವವಾಗಿದ್ದ ಆಕೆ ಮೃತಪಟ್ಟಿದ್ದಾಳೆ.
ಲಯಸ್ಮಿತಾ ಜೊತೆ ಮಾತನಡುತ್ತಾ ನಿಂತಿದ್ದ ಆರೋಪಿ ಪವನ್ ಕಲ್ಯಾಣ್ ಆಕೆಯ ಜೊತೆ ಜಗಳವಾಡಿ ಚಾಕುವಿನಿಂದ ಚುಚ್ಚಿದ್ದಾನೆ. ಕಾಲೇಜಿನ ಭದ್ರತಾ ಸಿಬ್ಬಂದಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಿದರು, ಆದರೆ ಲಯಸ್ಮಿತಾ ಸಾವನ್ನಪ್ಪಿದ್ದಾರೆ.
ರಾಜನಕುಂಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆಗೆ ಯತ್ನಿಸಿದ ಪವನ್ ಕಲ್ಯಾಣ್‌ರನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆತ ಚೇತರಿಸಿಕೊಂಡ ಬಳಿಕ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.
ಲಯಸ್ಮಿತಾ ಮತ್ತು ಪವನ್ ಕಲ್ಯಾಣ್ ಇಬ್ಬರೂ ಕೋಲಾರ ಮೂಲದವರು. ಹಲವು ವರ್ಷಗಳಿಂದ ಇಬ್ಬರೂ ಪರಿಚಿತರು, ಲಯಸ್ಮಿತಾ ತಂದೆ ತೀರಿಕೊಂಡಿದ್ದು, ತಾಯಿಯ ಜೊತೆ ವಾಸವಾಗಿದ್ದರು.
ಪ್ರೀತಿಯ ವಿಚಾರಕ್ಕೆ ಈ ಕೃತ್ಯ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪವನ್ ಕಲ್ಯಾಣ್ ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications