ಮಳೆ, ಸಂಚಾರದಟ್ಟಣೆಗೆ ತತ್ತರಿಸಿದ ಬೆಂಗಳೂರು
ಬೆಂಗಳೂರು, ಮಾ. 3 : ಸಾಮಾನ್ಯ ದಿನವೇ ಬೆಂಗಳೂರಿನ ಟ್ರಾಫಿಕ್ ತಪ್ಪಿಸಿಕೊಂಡು ಕಚೇರಿ ತಲುಪಲು ಹರಸಾಹಸ ಪಡಬೇಕಾಗುತ್ತದೆ. ಅಂಥದ್ದರಲ್ಲಿ ಅಕಾಲಿಕ ಮಳೆ ಬಂದರೆ ಕತೆ ಮುಗಿದೇ ಹೋದಂತೆ.
ಮಂಗಳವಾರರ ಬೆಳಿಗ್ಗೆ ಆದದ್ದು ಇದೇ. ಬೆಂಗಳೂರಿಗರು ಚಳಿಗಾಲ ಮುಗಿಸಿ ನಿಧಾನವಾಗಿ ಬೇಸಿಗೆಗೆ ಹೊಂದಿಕೊಳ್ಳುತ್ತಿದ್ದರು. ಆದರೆ ಮಂಗಳವಾರ ಮುಂಜಾನೆ ಸುರಿದ ಮಳೆ ಟ್ರಾಫಿಕ್ ಜಾಮ್ ಸಮಸ್ಯೆಯ ಪುಟಗಳನ್ನು ಮತ್ತೆ ಬಿಚ್ಚಿಟ್ಟಿತು. ನಗರದೆಲ್ಲೆಡೆ ಸಂಚಾರ ಅಸ್ತವ್ಯಸ್ತವಾಗುವಂತೆ ಮಳೆ ಮಾಡಿತು.
ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ವಿಲ್ಸನ್ ಗಾರ್ಡನ್, ನಾಗರಭಾವಿ, ಜ್ಞಾನ ಭಾರತಿ, ಮಾಗಡಿ ರೋಡ್, ಕೆಂಗೇರಿ, ಬನಶಂಕರಿ, ಜಯನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ 5 ಗಂಟೆಯಿಂದ ಮಳೆ ಸುರಿದಿದೆ. ಕೆಲವೆಡೆ ನಿರಂತರವಾಗಿ ಅರ್ಧ ಗಂಟೆಗೂ ಕಾಲ ಮಳೆ ಸುರಿದಿತ್ತು. ಮಧ್ಯಾಹ್ನವಾದಂತೆ ಟ್ರಾಫಿಕ್ ನಿಯಂತ್ರಣಕ್ಕೆ ಬರುವ ಬದಲು ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು, ಕಚೇರಿಗೆ ತೆರಳುವವರು ನಿಂತಲ್ಲಿಯೇ ಇದ್ದಾರೆ.

ಜಾಮ್ ಜಾಮ್
ಸಿಟಿ ಮಾರ್ಕೆಟ್ ನಿಂದ ಪುರಭವನ ಕಡೆ ಬರುವ ರಸ್ತೆಯಲ್ಲಿ ಸುಮಾರು ಮುಕ್ಕಾಲು ಗಂಟೆ ಕಾಲ ವಾಹನಗಳು ನಿಂತಲ್ಲಿಯೇ ಉದ್ದವು. ಇತ್ತ ಟ್ರಾಫಿಕ್ ನಿರ್ವಹಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಎಲ್ಲೆಡೆ ಸಂಚಾರ ಅಸ್ತವ್ಯಸ್ತ
ಟ್ರಾಫಿಕ್ ಜಾಮ್ ನಗರದ ಒಂದು ಭಾಗದ ಕತೆಯಲ್ಲ. ಜೆಸಿ ರಸ್ತೆ, ರೆಸಿಡೆನ್ಸಿ ರಸ್ತೆ, ಎಂಜಿ ರಸ್ತೆ, ರಿಚ್ ಮಂಡ್ ಸರ್ಕಲ್, ಕಾರ್ಪೋರೇಶನ್ ವೃತ್ತ, ಲಾಲ್ ಬಾಗ್ ಗೇಟ್, ಶಿವಾನಂದ ವೃತ್ತ, ಮೈಸೂರು ರಸ್ತೆ, ಸುಜಾತಾ ಟಾಕೀಸ್ ಎಲ್ಲ ಕಡೆ ವಾಹನಗಳು ಸಾಲು ಗಟ್ಟಿ ನಿಂತಿವೆ.

ರಸ್ತೆಗೆ ನುಗ್ಗಿದ ನೀರು
ಆರ್ ವಿ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಮಣ್ಣು ಮತ್ತು ಮರಳನ್ನು ರಸ್ತೆ ಅಕ್ಕಪಕ್ಕದಲ್ಲಿಯೇ ಹಾಕಿ ಇಟ್ಟುಕೊಳ್ಳಲಾಗಿದೆ. ಏಕಾಏಕಿ ಸುರಿದ ಮಳೆಗೆ ಚರಂಡಿಯಲ್ಲಿ ಹರಿಯಬೇಕಾಗಿದ್ದ ನೀರು ರಸ್ತೆಗೆ ನುಗ್ಗಿತು.

ಕಚೇರಿ ಸೇರೋದು ಯಾವಾಗ?
ಮಳೆ ನಿಂತ ಮೇಲೆ ಮನೆಯಿಂದ ಎಲ್ಲರೂ ಒಮ್ಮೆಲೆ ಹೊರಟಿದ್ದು ಟ್ರಾಫಿಕ್ ಜಾಮ್ ಗೆ ಮೂಲ ಕಾರಣ. ಒಂದು ಗಂಟೆ ಕಾಲ ಜೆಸಿ ರಸ್ತೆಯಲ್ಲಿ ನಿಂತಿದ್ದೆ ಎಂದು ಬ್ಯಾಂಕ್ ಉದ್ಯೋಗಿ ರಾಜೇಶ್ ಹೇಳುವುದರಲ್ಲೇ ಟ್ರಾಫಿಕ್ ಕಿರಿಕಿರಿ ಯಾವ ಮಟ್ಟಿಗಿತ್ತು ಎಂಬುದು ಗೊತ್ತಾಗುತ್ತದೆ.

ಸಿಕ್ಕಿಕೊಂಡ ಆಂಬುಲೆನ್ಸ್
ಕಾರ್ಪೋರೇಶನ್ ವೃತ್ತದ ಬಳಿ ಆಂಬುಲೆನ್ಸ್ ವೊಂದು ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡು ಪರದಾಡಬೇಕಾಯಿತು. ಅಂತೂ ಇಂತೂ ಪೊಲೀಸರು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟರು.

ಒಳಚರಂಡಿ ಅವ್ಯವಸ್ಥೆ!
ಬೆಳಿಗ್ಗೆ ಬಿದ್ದ ಮಳೆಯ ನೀರು ಮಧ್ಯಾಹ್ನವಾದರೂ ಹರಿದು ಹೋಗಿಲ್ಲ. ದ್ವಿಚಕ್ರ ವಾಹನ ಸವಾರರು ಕೊಳಚೆ ನೀರಿನಲ್ಲಿ ಅನಿವಾರ್ಯವಾಗಿ ಬೈಕ್ ಚಲಾಯಿಸಿಕೊಂಡು ಹೋಗಬೇಕಿದೆ. ವೇಗವಾಗಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ.

ನಾಮುಂದೆ ತಾಮುಂದೆ
ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡವರು ತಾಳ್ಮೆ ಕಳೆದುಕೊಂಡಿದ್ದು ಕಂಡುಬಂತು. ವಾಹನಗಳು ಕೊಂಚ ಮುಂದೆ ಸಾಗಿದರೂ ನಾ ಮುಂದೆ ತಾ ಮುಂದೆ ಎಂದು ಬೈಕ್ ನುಗ್ಗಿಸುತ್ತಿದ್ದರು. ಇದು ಸಮಸ್ಯೆ ಬಿಗಡಾಯಿಸಲು ಕಾರಣವಾಯಿತು.

ಯಾಕೆ ಇಷ್ಟೆಲ್ಲಾ ಜಾಮ್?
ಮುಂಜಾನೆಯೇ ಮಳೆ ಬಂದಿದ್ದರಿಂದ ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಪ್ರತಿದಿನ ತೆರಳಿತ್ತಿದ್ದವರು ಕಾರು ಏರಿದ್ದರು. ಮೊದಲೇ ಇಕ್ಕಟಾದ ರಸ್ತೆಗಳ ಅಕ್ಕಪಕ್ಕದಲ್ಲಿ ನೀರು ನಿಂತಿದ್ದು ಸಂಚಾರ ದಟ್ಟಣೆಗೆ ಮೂಲ ಕಾರಣವಾಯಿತು.












Click it and Unblock the Notifications