ಬೆಂಗಳೂರಿಗರೇ ಎಚ್ಚರ: ನಿಮ್ಮ ಸುತ್ತಮುತ್ತಲಿನಲ್ಲೇ ಅಡಗಿದೆ ಕೊರೊನಾ!
ಬೆಂಗಳೂರು, ಮಾರ್ಚ್ 17: ಸಿಲಿಕಾನ್ ಸಿಟಿ ಮತ್ತೊಮ್ಮೆ ಕೊರೊನಾವೈರಸ್ ಸೋಂಕಿನ ಹಾಟ್ ಸ್ಪಾಟ್ ಆಗುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳಿನಿಂದ 250ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದೀಗ ಕೊರೊನಾವೈರಸ್ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.
ಮಾರ್ಚ್ 15ರಂದು ಒಂದೇ ದಿನ ಬೆಂಗಳೂರಿನಲ್ಲಿ 628 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಪ್ರಮುಖ ನಗರವಾದ ಚೆನ್ನೈನಲ್ಲಿ 294 ಮತ್ತು ಹೈದ್ರಾಬಾದ್ ನಲ್ಲಿ ಕೇವಲ 95 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 710 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಬೆಂಗಳೂರು ನಗರದಲ್ಲೇ ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 6832ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಏರಿಕೆ ಹಿಂದಿನ ಕಾರಣದ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುವುದೇನು ಎಂಬುದರ ಕುರಿತು ಕುತೂಹಲಕಾರಿ ವರದಿಗಾಗಿ ಮುಂದೆ ಓದಿ.

ಸಿಲಿಕಾನ್ ಸಿಟಿಗೆ ಕೊರೊನಾ ಅಪಾಯ
ಕೊರೊನಾವೈರಸ್ ನಿಯಂತ್ರಿಸುವಲ್ಲಿ ಬೆಂಗಳೂರು ಸೋತಿರುವುದು ಅಂಕಿ-ಅಂಶಗಳಿಂದ ಗೋಚರಿಸುತ್ತಿದೆ. ಸಾಂಕ್ರಾಮಿಕ ಪಿಡುಗಿನಿಂದ ರಾಜ್ಯ ರಾಜಧಾನಿ ತೀವ್ರ ಸಮಸ್ಯೆ ಎದುರಿಸುತ್ತಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಗಿರಿಧರ್ ಬಾಬು ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಾಹ್ಯ ಕೇಂದ್ರಗಳಿಂದಲೇ ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ.

ಕೊರೊನಾವೈರಸ್ ತಳಿ ಪತ್ತೆ ಮಾಡುವುದೇ ಸವಾಲು
ಬೆಂಗಳೂರಿಲ್ಲಿ ಬಾಹ್ಯ ವಲಯಗಳಿಂದ ಕೊರೊನಾವೈರಸ್ ಸೋಂಕಿನ ಹರಡುವಿಕೆಗೆ ದಾರಿ ಆಗುತ್ತಿದೆ. ಅಂಥ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳುತ್ತಿದ್ದೇವೆ. ಇದರ ಮಧ್ಯೆ ಒಂದೊಂದು ಪ್ರದೇಶಗಳಲ್ಲಿ ಒಂದೊಂದು ತಳಿಯ ಕೊರೊನಾವೈರಸ್ ಸೋಂಕು ಪತ್ತೆ ಆಗುತ್ತಿದೆ. ಹೀಗಿರುವಾಗ ಸೋಂಕಿನ ತಳಿ ಯಾವುದು ಎಂಬುದನ್ನು ಪತ್ತೆ ಮಾಡುವುದೇ ದೊಡ್ಡ ಸವಾಲಾಗುತ್ತದೆ. ಯಾರಲ್ಲಿ ಹೆಚ್ಚು ಸೋಂಕಿಗೆ ಎಂದು ನಾವು ಹೇಳುವುದಕ್ಕೆ ಬರುವುದಿಲ್ಲ. ನಗರದ ಎಲ್ಲ ಕಡೆಗಳಲ್ಲೂ ಮಾರ್ಷಲ್ ಗಳನ್ನು ನೇಮಿಸುವುದಕ್ಕೂ ಆಗುವುದಿಲ್ಲ. ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಕೊವಿಡ್-19 ನಿಯಮಗಳನ್ನು ಪಾಲನೆ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಸಿಲಿಕಾನ್ ಸಿಟಿ ಜನರೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ಕೊರೊನಾವೈರಸ್ ಸೋಂಕಿನ ಏರಿಕೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಇಂಥ ಸಂದರ್ಭದಲ್ಲಿ ಜನರು ಎಚ್ಚೆತ್ತುಕೊಳ್ಳಬೇಕಿದೆ. ಈಗ ಮೈ ಮರೆತರೆ ಪ್ರತಿನಿತ್ಯ 1000ಕ್ಕೂ ಹೆಚ್ಚು ಕೊವಿಡ್-19 ಪ್ರಕರಣ ಪತ್ತೆಯಾದರೂ ಆಶ್ಚರ್ಯಪಡುವಂತಿಲ್ಲ. ಒಂದು ಬಾರಿ ಆ ಗುರಿಯನ್ನು ತಲುಪಿದರೆ ಮುಗಿತು. ಅಲ್ಲಿಂದ ಪ್ರತಿನಿತ್ಯ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಅಲ್ಲಿಂದ ಕೊರೊನಾ ನಿಯಂತ್ರಿಸುವುದು ತುಂಬಾ ಕಷ್ಟಕರವಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಗಿರಿಧರ್ ಬಾಬು ಎಚ್ಚರಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಹಳೆಯ ನೀತಿ
ಬೆಂಗಳೂರಿನ ಹೋಟೆಲ್ ಮತ್ತು ಅಪಾರ್ಟ್ ಮೆಂಟ್ ಗಳಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಸಂದರ್ಭದಲ್ಲಿ ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಟ್ರ್ಯಾಕಿಂಗ್(ಹುಡುಕಾಟ), ಟೆಸ್ಟಿಂಗ್(ಪರೀಕ್ಷೆ), ಟ್ರೀಟ್(ಚಿಕಿತ್ಸೆ) ಎಂಬ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಬೇಕಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ಮತ್ತೊಬ್ಬ ಸದಸ್ಯ ಡಾ. ರವಿ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ದಿನವೂ 50 ಸಾವಿರ ಜನರಿಗೆ ಪರೀಕ್ಷೆ
ನೆರೆಯ ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಪ್ರಯಾಣಿಕರಿಂದ ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಪ್ರಸ್ತುತ ನಗರದಲ್ಲಿ ಪ್ರತಿನಿತ್ಯ 40 ಸಾವಿರ ಜನರಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗುತ್ತದೆ. ಇನ್ನುಂದೆ ದಿನವೂ 50 ಸಾವಿರ ಜನರಿಗೆ ಕೊರೊನಾವೈರಸ್ ತಪಾಸಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications