ಬಿಡಿಎ ಫ್ಲಾಟ್ ಪಡೆಯಲು ಅರ್ಜಿ ಸಲ್ಲಿಸಲು ಸಿದ್ಧವಾಗಿ
ಬೆಂಗಳೂರು, ಫೆ.19 : ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ. ಬೆಂಗಳೂರಿಗರ ಸ್ವಂತ ಮನೆ ಕನಸನ್ನು ನನಸು ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ. ನಗರದಲ್ಲಿ ಹೊಸದಾಗಿ 4,200 ಫ್ಲಾಟ್ ಗಳನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲು ಬಿಡಿಎ ಸಿದ್ಧತೆ ಆರಂಭಿಸಿದೆ.
ಫೆ.22 ರಂದು ಬಿಡಿಎ ಸಭೆ ನಡೆಯಲಿದ್ದು ಸಭೆಯಲ್ಲಿ ಫ್ಲಾಟ್ ಗಳ ಹಂಚಿಕೆಗೆ ಅರ್ಜಿ ಆಹ್ವಾನಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಿಡಿಎ ಆಯುಕ್ತ ಶ್ಯಾಂಭಟ್ ತಿಳಿಸಿದ್ದಾರೆ. ಮುಂದಿನ ಎರಡು ವಾರಗಳಲ್ಲಿ 4,200 ಫ್ಲಾಟ್ ಗಳನ್ನು ಹಮಚಿಕೆ ಮಾಡಲು ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.

ನಗರದ ಸುತ್ತಲಿನ ದೊಡ್ಡಬನಹಳ್ಳಿ, ವಲಗೇರಹಳ್ಳಿ, ಗುಂಜೂರು, ಕೆಂಗೇರಿ ಬಳಿಯ ಕೊಮ್ಮಘಟ್ಟ ಸೇರಿದಂತೆ ವಿವಿಧ ಕಡೆಗಳಲ್ಲಿ ಫ್ಲಾಟ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2015ರ ಮಾರ್ಚ್ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಂತಿಮ ಹಂತದ ನಿರ್ಮಾಣ ಕಾರ್ಯ ನಡೆಯುತ್ತಿರುವ ಫ್ಲಾಟ್ ಗಳಿಗೆ ಬಿಡಿಎ ಈಗ ಅರ್ಜಿ ಆಹ್ವಾನಿಸಲಿದೆ. [ಲಾಟರಿ ಮೂಲಕ ಫ್ಲಾಟ್ ಹಂಚಿದ ಸಿದ್ದರಾಮಯ್ಯ]
ಎಷ್ಟು ಮನೆಗಳಿಗೆ : ಸದ್ಯ ಬಿಡಿಎ ಅರ್ಜಿ ಕರೆಯಲು ಉದ್ದೇಶಿಸಿರುವ ಫ್ಲಾಟ್ ಗಳಲ್ಲಿ ಒಂದು ಕೊಠಡಿಯ 2,800, ಎರಡು ಕೊಠಡಿಯ 1000ಮತ್ತು ಮೂರು ಕೊಠಡಿಯ 400 ಫ್ಲಾಟ್‌ಗಳಿವೆ. ಎರಡು ತಿಂಗಳ ಹಿಂದೆ 3 ಸಾವಿರ ಫ್ಲಾಟ್ ಗಳ ಹಂಚಿಕೆ ಮಾಡಿದ್ದ ಬಿಡಿಎ ಸದ್ಯ ನಾಲ್ಕು ಸಾವಿರ ಫ್ಲಾಟ್ ಗಳ ಹಂಚಿಕೆಗೆ ಅರ್ಜಿ ಕರೆಯಲು ಸಿದ್ಧವಾಗಿದೆ. [ಬಿಡಿಎ ವಿರುದ್ಧ ಬೀದಿಗಿಳಿದ ಗ್ರಾಮಸ್ಥರು]
ದರ ಹೆಚ್ಚಳ ಸಾಧ್ಯತೆ : ಎರಡು ತಿಂಗಳ ಹಿಂದೆ ಹಂಚಿಕೆ ಮಾಡಲಾದ ಫ್ಲಾಟ್‌ಗಳಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ನೀಡಲಾಗಿತ್ತು. ಆದರೆ, ಹಿಂದಿನ ದರದಂತೆ ಈಗ ಫ್ಲಾಟ್‌ಗಳನ್ನು ಹಂಚಿಕೆ ಮಾಡಿದರೆ ಬಿಡಿಎಗೆ ಆರ್ಥಿಕ ಹೊರೆ ಉಂಟಾಗಲಿದೆ ಎಂದು ಶ್ಯಾಂಭಟ್ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಈ ಬಾರಿ ಹಿಂದೆ ನಿಗದಿ ಮಾಡಿದ್ದ ದರಕ್ಕಿಂತ ಹೆಚ್ಚಿನ ಬೆಲೆಗೆ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. [ಬಿಡಿಎ ಸೈಟು ಸಾಲ ತಿರಿಸೋಕೆ : ಎಚ್ಡಿಕೆ]
ಫ್ಲಾಟ್‌ಗಳ ದರ ಹೆಚ್ಚಳವಾಗುದರಿಂದ ಹಿಂದಿನ ಬೆಲೆಗಿಂತ ಈ ಬಾರಿ ಕನಿಷ್ಠ ಶೇ 30ರಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ದರ ಹೆಚ್ಚಳದ ಕುರಿತು ಫೆ.22 ರಂದು ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶ್ಯಾಂಭಟ್ ಹೇಳಿದ್ದಾರೆ.












Click it and Unblock the Notifications