BDA: ಜನರ ಸಮಸ್ಯೆ ನಿವಾರಣೆಗೆ ಹೊಸ ಆನ್‌ಲೈನ್ ವ್ಯವಸ್ಥೆ,ನಾಗರಿಕರು ಗಮನಿಸಿ
ಬೆಂಗಳೂರು, ಮಾರ್ಚ್ 09: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಾಗರಿಕರಿಗೆ ಆನ್‌ಲೈನ್ ಮೂಲಕ ಕುಂದು ಕೊರತೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದಾಗಿ ಸಾರ್ವಜನಿಕರು ಆನ್‌ಲೈನ್ ಮೂಲಕವೇ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ.
ಬೆಂಗಳೂರು ನಾಗರಿಕರ ಕುಂದು ಕೊರತೆಗಳನ್ನು ಆನ್‌ಲೈನ್ ಮೂಲಕವೇ ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನೂತನ 'ತಂತ್ರಾಂಶ' (Website) ಅಭಿವೃದ್ಧಿಪಡಿಸಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನೂತನ www.bda.karnataka.gov.in ತಂತ್ರಾಂಶ ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿಭಾಗವಾರು ಅಧಿಕಾರಿಗಳು ಲಭ್ಯ
ಈ ನೂತನ ವೆಬ್‌ಸೈಟ್‌ಗೆ ನಿವೇಶನ, ಜಾಗ ಇನ್ನಿತರ ಸಮಸ್ಯೆಗಳು ಹೊಂದಿರುವ ಸಾರ್ವಜನಿಕರು ನೀವು ಯಾವ ವಿಭಾಗದ ಅಧಿಕಾರಿ ಭೇಟಿ ಮಾಡಬೇಕು ಎಂದುಕೊಂಡವರಿಗೆ ಆಯಾ ವಿಭಾಗ ಅಧಿಕಾರಿ ಭೇಟಿ ಮಾಡಲು ಇದರಲ್ಲಿ ಅವಕಾಶ ನೀಡಲಾಗಿದೆ.
ಕಚೇರಿ ಬಂದಾಗ ಕೆಲವೊಮ್ಮೆ ಸಾರ್ವಜನಿಕರ ಸಮಸ್ಯೆ ಆಗುತ್ತಿದೆ. ಅಲ್ಲದೇ ಹೆಚ್ಚು ಸಮಯ ಬೇಕಾಗುತ್ತದೆ. ಆದ್ದರಿಂದ ನಾಗರಿಕರ ಸಮಯವನ್ನು ವ್ಯರ್ಥ ಮಾಡದೇ ಸಮಸ್ಯೆಗಳನ್ನು ಬಗೆಹರಿಸಲು ಈ ತಂತ್ರಾಂಶವು ಲೋಕಾರ್ಪಣೆ ಮಾಡಲಾಗಿದೆ. ಇದರ ಬಳಕೆ ಹೆಚ್ಚಾಗಬೇಕು ಎಂದರು.

ಮಧ್ಯವರ್ತಿಗಳ ಹಾವಳಿ ತಪ್ಪಲಿದೆ
ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಆಯುಕ್ತ ಎನ್.ಜಯರಾಮ್ ಅವರು ಮಾತನಾಡಿ, ಜನರ ಕುಂದು ಕೊರತೆ ನಿವಾರಿಸುವ ಜೊತೆಗೆ ಪ್ರಾಧಿಕಾರದಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು, ಉತ್ತಮ ಸೇವೆ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ತಂತ್ರಾಂಶ ಸಿದ್ಧಪಡಿಸಲಾಗಿದೆ.
ಈ ತಂತ್ರಾಂಶದ ಮೂಲಕ ಸಾರ್ವಜನಿಕರು ಪ್ರಾಧಿಕಾರದ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಸಮಸ್ಯೆಗಳನ್ನು ನಮೂದಿಸಬೇಕು. ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಡೆಯಲು ಸಹಕಾರಿ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸರ್ಕಾರ ಕಾರ್ಯದರ್ಶಿ (ಇ- ಆಡಳಿತ) ಉಜ್ವಲ್ ಕುಮಾರ್ ಘೋಷ್, ಕಾರ್ಯನಿ ರ್ವಾಹಕ ನಿರ್ದೇಶಕ ಯಶವಂತ್ ವಿ.ಗುರುಕರ್, ಕಾರ್ಯದರ್ಶಿ ವೈ.ಬಿ.ಶಾಂತರಾಜು, ನಗರ ಯೋಜನಾ - ಸದಸ್ಯ ಶಶಿಕುಮಾರ್, ಉಪ ಆಯುಕ್ತ ಡಾ.ಸೌಜನ್ಯ ಹಾಗೂ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications