ಬಿಬಿಎಂಪಿ ವಿಭಜನೆ ನಿರ್ಧಾರಕ್ಕೆ ಸದಸ್ಯರ ವಿರೋಧ
ಬೆಂಗಳೂರು, ಜು. 10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವ ಪ್ರಸ್ತಾಪಕ್ಕೆ ಬಿಬಿಎಂಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಪಾಲಿಕೆಯನ್ನು ವಿಭಜಿಸಬಾರದು ಎಂಬ ನಿರ್ಣಯವನ್ನು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದ್ದು, ಇದನ್ನು ಸರ್ಕಾರಕ್ಕೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಬಿಬಿಎಂಪಿ ವಿಭಜನೆ ಕುರಿತು ಚರ್ಚಿಸಲು ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ವಿಶೇಷ ಕೌನ್ಸಿಲ್ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಪಾಲಿಕೆಯನ್ನು ವಿಭಜನೆ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು. [ಬಿಬಿಎಂಪಿ ವಿಭಜನೆಯ ಸುಳಿವು ಕೊಟ್ಟ ಸಿದ್ದರಾಮಯ್ಯ]

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಪಾಲಿಕೆಯನ್ನು ವಿಭಜನೆ ಮಾಡುವ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಪಾಲಿಕೆ ವಿಭಜನೆ ಮಾಡದಂತೆ ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.[ಬಿಬಿಎಂಪಿ ವಿಭಜನೆ ಆಗುತ್ತಾ?]
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಮಾಡುವ ಕುರಿತು ವರದಿ ನೀಡುವಂತೆ ಸರ್ಕಾರ ರಚಿಸಿದ್ದ ಸಮಿತಿ ಎರಡು ಅಥವ ಮೂರು ವಿಭಾಗಗಳಾಗಿ ಪಾಲಿಕೆಯನ್ನು ವಿಭಜಿಸಬಹುದು. ಇದರಿಂದ 198 ವಾರ್ಡ್ ಗಳಿರುವ ಪಾಲಿಕೆಯಲ್ಲಿ ಆಡಳಿತ ನಡೆಸಲು ಅನುಕೂಲವಾಗುತ್ತದೆ ಎಂದು ಸಲಹೆ ವರದಿ ನೀಡಿತ್ತು. ಸರ್ಕಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ವರದಿ ಮಂಡಿಸಿ ಅಭಿಪ್ರಾಯ ತಿಳಿಸುವಂತೆ ಕೇಳಿತ್ತು.
ಈ ಹಿನ್ನಲೆಯಲ್ಲಿ ಗುರುವಾರ ನಡೆದ ಪಾಲಿಕೆ ವಿಶೇಷ ಕೌನ್ಸಿಲ್ ಸಭೆಯಲ್ಲಿ ವಿಭಜನೆ ಕುರಿತು ಚರ್ಚೆ ನಡೆಸಲಾಯಿತು. ಆದರೆ, ಸದಸ್ಯರು ಆಡಳಿತಾತ್ಮಕ ದೃಷ್ಟಿಯಿಂದಾಗಿ ಪಾಲಿಕೆ ವಿಭಜನೆ ಮಾಡುವುದು ಬೇಡ. ಬಿಬಿಎಂಪಿ ಕುರಿತಾದ ಪ್ರತ್ಯೇಕ ನೀತಿಯನ್ನು ರಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನ ಕೈಗೊಂಡಿತು. ಆದ್ದರಿಂದ ಪಾಲಿಕೆ ವಿಭಜನೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಡುವ ಸಾಧ್ಯತೆ ಇದೆ.












Click it and Unblock the Notifications